ಎಐ, ಸಿನ್ ಬಯೋ, ಆಟೋಮೋಟಿವ್ ನಿಂದ ಭಾರತದ ಭವಿಷ್ಯ: ಆರ್‌ಸಿ

| Published : Oct 18 2023, 01:00 AM IST

ಎಐ, ಸಿನ್ ಬಯೋ, ಆಟೋಮೋಟಿವ್ ನಿಂದ ಭಾರತದ ಭವಿಷ್ಯ: ಆರ್‌ಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸೆಮಿ ಕಂಡಕ್ಟರ್ ಉತ್ಪಾದನೆಯಲ್ಲಿ ದೇಶದ ಕೆಲವು ರಾಜ್ಯಗಳು‌ ಮಾತ್ರ ಪ್ರಗತಿ ಸಾಧಿಸಿವೆ. ತಮಿಳ್ನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶಗಳಲ್ಲಿ ಉತ್ತಮ ಪ್ರಗತಿಯಾಗಿದ್ದರೆ, ಕರ್ನಾಟಕದ ಈ ಸಾಧನೆ ಕಡಿಮೆ ಇದೆ
ಕನ್ನಡಪ್ರಭ ವಾರ್ತೆ ಮಣಿಪಾಲ ಆರ್ಟಿಫಿಶಿಯಲ್ ಇಂಜಲಿಜೆನ್ಸಿ, ಸಿಂಥೆಟಿಕ್ ಬಯೋಲಜಿ, ಆಟೋಮೆಶನ್ ವೆಹಿಕಲ್ಸ್ ಭಾರತದ ಭವಿಷ್ಯದ ಕೈಗಾರಿಕೆಗಳಾಗಿವೆ ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಅವರು ಮಂಗಳವಾರ ತಾವು ಎಂಜಿನಿಯರಿಂಗ್ ಮಾಡಿದ ಇಲ್ಲಿನ ಎಂಐಟಿಗೆ ಭೇಟಿ ನೀಡಿ, ರಾಷ್ಟ್ರೀಯ ತಂತ್ರಜ್ಞಾನ ಉತ್ಸವ ಟೆಕ್ ತತ್ವ-23ನ್ನು ಉದ್ಘಾಟಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಭಿವೃದ್ಧಿಯ ಯೋಜನೆಗಳ ಹೊರತಾಗಿ ರಾಜಕೀಯದಿಂದ ಯಾವುದೇ ಲಾಭ ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನಗಳ ಲಾಭ ಪಡೆದರೆ ಮಾತ್ರ ಅಭಿವೃದ್ಧಿ ಸಾಧ್ಯ. ಆಡಳಿತದಲ್ಲಿ ಪ್ರಗತಿಪರವಾಗಿದ್ದರೆ ಮಾತ್ರ ಇಂದಿನ ತಂತ್ರಜ್ಞಾನಕ್ಕೆ ಅಭಿವೃದ್ಧಿಯ ವೇಗವನ್ನು ಹೊಂದಿಸಿಕೊಳ್ಳುವುದು ಸಾಧ್ಯ ಎಂದವರು ವಿಶ್ಲೇಷಿಸಿದರು. ಸೆಮಿ ಕಂಡಕ್ಟರ್ ಉತ್ಪಾದನೆಯಲ್ಲಿ ದೇಶದ ಕೆಲವು ರಾಜ್ಯಗಳು‌ ಮಾತ್ರ ಪ್ರಗತಿ ಸಾಧಿಸಿವೆ. ತಮಿಳ್ನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶಗಳಲ್ಲಿ ಉತ್ತಮ ಪ್ರಗತಿಯಾಗಿದ್ದರೆ, ಕರ್ನಾಟಕದ ಈ ಸಾಧನೆ ಕಡಿಮೆ ಇದೆ ಎಂದ ಅವರು ಆಯಾ ರಾಜ್ಯಗಳಲ್ಲಿ ಯಾವ ರೀತಿಯ ನಾಯಕತ್ವ ಇದೆ ಅನ್ನೋದು‌ ಮುಖ್ಯವಾಗುತ್ತದೆ. ಅವಕಾಶಗಳನ್ನು ದಕ್ಕಿಸಿಕೊಳ್ಳುವಲ್ಲಿ ಕರ್ನಾಟಕ ರಾಜ್ಯ ಹೆಚ್ಚು ಉತ್ಸುಕವಾಗಿಲ್ಲ ಎಂದವರು ಕಾರಣ ಹೇಳಿದರು. ಕೇವಲ ಡಿಗ್ರಿ, ಡಿಪ್ಲೋಮಾ ಪಡೆಯುವುದರಿಂದ ಯಾವುದೇ ಉಪಯೋಗ ಇಲ್ಲ. ವಿಶೇಷ ಕೌಶಲಗಳಿರುವ ಕಾರ್ಯ ಪಡೆ ಭಾರತಕ್ಕೆ ಬೇಕಾಗಿದೆ. ಅದಕ್ಕಾಗಿಯೇ ಪ್ರಧಾನಿಯವರು 35,000 ಕೋಟಿ ರು.ಗಳ ಪಿಎಂ ವಿಶ್ವಕರ್ಮ‌ ಯೋಜನೆ ಜಾರಿಗೊಳಿಸಿದ್ದಾರೆ. ಇದರಲ್ಲಿ ಮರ, ಚರ್ಮ, ಹಿತ್ತಾಳೆ ಇತ್ಯಾದಿ ಸಾಂಪ್ರದಾಯಿಕ ಕರ ಕುಶಲಕರ್ಮಿಗಳಿಗೆ ಆಧುನಿಕ ತಂತ್ರಜ್ಞಾನ ಮತ್ತು ಕೌಶಲ್ಯಗಳ ತರಬೇತಿ ನೀಡಲಾಗುತ್ತದೆ, ಇದರಿಂದ ಅವರ ಉತ್ಪಾದನೆಗೆ ನೇರ ಮಾರುಕಟ್ಟೆ ಲಭ್ಯವಾಗಲಿದೆ ಎಂದವರು ಭರವಸೆ ವ್ಯಕ್ತಪಡಿಸಿದರು. ಎಂಐಟಿಯ ನಿರ್ದೇಶಕ ಮಾಂಡರ್ ಡಾ.ಅನಿಲ್ ರಾಣಾ ಸಚಿವರೊಂದಿಗೆ ಉಪಸ್ಥಿತರಿದ್ದರು.