ಸಾರಾಂಶ
ಬಳ್ಳಾರಿ: ಸಂಡೂರು ವಿಧಾನಸಭೆ ಉಪಚುನಾವಣೆ ಅಂಗವಾಗಿ ನ.13ರಂದು ಸುಸೂತ್ರವಾಗಿ ಮತದಾನ ನಡೆದಿದ್ದು, 6 ಅಭ್ಯರ್ಥಿಗಳ ಭವಿಷ್ಯ ಇವಿಯಂನಲ್ಲಿ ಭದ್ರವಾಗಿದೆ.
ಸಂಡೂರು ಕ್ಷೇತ್ರ ವ್ಯಾಪ್ತಿಯ 253 ಮತ ಕೇಂದ್ರಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆಯು ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನ. 23ರಂದು ಬೆಳಗ್ಗೆ 8ರಿಂದ ನಡೆಯಲಿದೆ. ಮತ ಎಣಿಕೆ ಕೇಂದ್ರ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಕಾಲೇಜು ಕಟ್ಟಡದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರ ಸಮ್ಮುಖದಲ್ಲಿ ಮತಯಂತ್ರಗಳನ್ನು ನಿಗದಿಪಡಿಸಿರುವ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಯಿತು. ಮತಯಂತ್ರಗಳ ಸ್ಟ್ರಾಂಗ್ ರೂಂ ಬಾಗಿಲಿಗೆ ಬೀಗ ಹಾಕಿ ಮೊಹರು ಹಾಕಲಾಯಿತು. ಜತೆಗೆ ಬಾಗಿಲನ್ನು ದಪ್ಪ ಹಲಗೆಯ ಮೂಲಕ ಸಂಪೂರ್ಣ ಮುಚ್ಚಿ ಸೀಲ್ ಮಾಡಲಾಯಿತು. ಮತ ಎಣಿಕೆ ಕೇಂದ್ರ ಸುತ್ತಲೂ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮತ ಎಣಿಕಾ ಕೇಂದ್ರಕ್ಕೆ ಸೂಕ್ತ ಭದ್ರತೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಂಗೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಹಾಗೂ ಚುನಾವಣಾ ಸಾಮಾನ್ಯ ವೀಕ್ಷಕರಾದ ಡಾ. ದಿವ್ಯಾ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು..ಎಸ್. ಅಯ್ಯರ್, ವೆಚ್ಚ ವೀಕ್ಷಕ ಮುರಳೀರಾವ್ ಆರ್.ಜೆ., ಚುನಾವಣಾಧಿಕಾರಿ ರಾಜೇಶ್ ಎಚ್.ಡಿ., ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಂಡೂರು ತಹಸೀಲ್ದಾರ್ ಅನಿಲಕುಮಾರ್ ಇದ್ದರು.
ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ:ಸಂಡೂರು ವಿಧಾನಸಭೆ ಕ್ಷೇತ್ರ ಉಪಚುನಾವಣೆಯ ಮತಎಣಿಕೆಯು ನ. 23ರಂದು ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನ.22ರ ಸಂಜೆ 6 ಗಂಟೆಯಿಂದ ನ.24ರ ಬೆಳಗ್ಗೆ 6 ಗಂಟೆ ವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ರ ಕಲಂ 163ರಡಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಿ ಜಿಲ್ಲಾ ದಂಡಾಧಿಕಾರಿ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.