ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ಚಳವಳಿಯ ಹೆಗ್ಗುರುತಾಗಿ ಮಾಜಿ ಸಂಸದ ಜಿ.ಮಾದೇಗೌಡರ ನೇತೃತ್ವದಲ್ಲಿ ರಚನೆಗೊಂಡಿದ್ದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮೂವತ್ತ ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪುನಾರಚನೆಗೊಂಡಿದೆ. ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಆಯ್ಕೆಗೊಂಡಿದ್ದಾರೆ.ಹಿರಿಯ ಉಪಾಧ್ಯಕ್ಷರಾಗಿ ಕೆ.ಬೋರಯ್ಯ, ಡಾ.ಬಿ.ಶಿವಲಿಂಗಯ್ಯ, ಎಂ.ಬಿ.ಬೋರೇಗೌಡ, ಉಪಾಧ್ಯಕ್ಷರಾಗಿ ಎಸ್.ಕೆಂಪೇಗೌಡ, ಕೆ.ಎನ್.ಗುರುಪ್ರಸಾದ್, ಎಚ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಸುನಂದ ಜಯರಾಮು, ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಸಿ.ಮಂಜುನಾಥ್, ಎಸ್.ನಾರಾಯಣ್, ಟಿ.ಎಸ್.ವೆಂಕಟೇಶ್, ಎಸ್.ಮಂಜೇಶ್‌ಗೌಡ, ಎಸ್.ಕೃಷ್ಣ, ಎಸ್.ಎಂ.ವೇಣುಗೋಪಾಲ್, ಎಂ.ಬಿ.ನಾಗಣ್ಣಗೌಡ, ಎಚ್.ಜಿ.ಪ್ರಭುಲಿಂಗು, ಎಂ.ವಿ.ಕೃಷ್ಣ, ಖಜಾಂಚಿಯಾಗಿ ಮುದ್ದೇಗೌಡ, ಸದಸ್ಯರಾಗಿ ಅಂಬುಜಮ್ಮ, ಎಂ.ಎನ್.ಮಹೇಶ್‌ಕುಮಾರ್, ಸಿ.ಮಂಜುನಾಥ್, ಸಿ.ಟಿ.ಮಂಜುನಾಥ್, ಎಲ್.ಸುರೇಶ್ ನೇಮಕಗೊಂಡಿದ್ದಾರೆ ಎಂದು ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಯಿತು.
ಇವರ ಜೊತೆಗೆ ಖಾಯಂ ಸದಸ್ಯರಾಗಿ ಜಿಲ್ಲೆಯ ಹಾಲಿ ಮತ್ತು ಮಾಜಿ ಸಂಸತ್ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಲ್ಲೆಯ ರಾಜಕೀಯ ಪಕ್ಷಗಳ ಹಾಲಿ ಜಿಲ್ಲಾ ಅಧ್ಯಕ್ಷರು, ಪ್ರಗತಿಪರ ಹೋರಾಟ ಸಂಘಟನೆಗಳ ಅಧ್ಯಕ್ಷರುಗಳು ಇರಲಿದ್ದಾರೆ ಎಂದು ತಿಳಿಸಲಾಗಿದೆ.ಹಿಂದಿನ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಬ್ಯಾಂಕ್ ಖಾತೆಯಲ್ಲಿ ೪,೧೬,೦೦೦ ರು. ಹಣವಿದ್ದು, ೩ ಮಾರ್ಚ್ ೨೦೨೪ರವರೆಗೆ ಹಣಕಾಸು ವ್ಯವಹಾರ ನಡೆಸಲಾಗಿದೆ. ಆ ಹಣವನ್ನು ನೂತನವಾಗಿ ರಚನೆಗೊಂಡಿರುವ ಸಮಿತಿಯ ಖಾತೆಗೆ ವರ್ಗಾಯಿಸಿಕೊಂಡು ಮುಂದುವರೆಸಿಕೊಂಡು ಹೋಗುವುದಾಗಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.
ಹಳೆಯ ಸಮಿತಿ ರದ್ದುಗೊಂಡಿರುವುದರಿಂದ ಇನ್ನು ಮುಂದೆ ರೈತಪರ ಹೋರಾಟಗಳೆಲ್ಲವೂ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲೇ ಮುನ್ನಡೆಯಲಿದೆ. ಹಳೆಯ ಸಮಿತಿಯಲ್ಲಿದ್ದವರು ಬಹುತೇಕರು ಮರಣಹೊಂದಿದ್ದಾರೆ. ಇನ್ನು ಕೆಲವರು ಅನಾರೋಗ್ಯದ ದೃಷ್ಟಿಯಿಂದ ಸಮಿತಿಯ ಕಾರ್ಯಚಟುವಟಿಕೆಯಿಂದ ದೂರ ಉಳಿದಿದ್ದಾರೆ. ಆದರೂ ಅವರನ್ನು ಸಂಪೂರ್ಣವಾಗಿ ನಾವು ದೂರ ಸರಿಸಿಲ್ಲ. ಅವರ ಸಲಹೆ-ಮಾರ್ಗದರ್ಶನವನ್ನೂ ಪಡೆಯುವುದಾಗಿ ಹೇಳಿದರು.ಮುಂದಿನ ದಿನಗಳಲ್ಲಿ ಸಮಿತಿಯಿಂದ ಬೆಂಗಳೂರಿಗೆ ಆರನೇ ಹಂತದಲ್ಲಿ ನೀಡಲು ರೂಪಿಸಿರುವ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು. ಇದರಿಂದ ಕಾವೇರಿ ಕೊಳ್ಳ ಭಾಗದ ರೈತರಿಗೆ ಮತ್ತು ಕೃಷಿ ಚಟುವಟಿಕೆಗೆ ತುಂಬಲಾಗದ ನಷ್ಟ ಉಂಟಾಗಲಿದೆ. ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ಹೊತ್ತು ಜಿಲ್ಲೆಯ ಶಾಸಕರನ್ನೊಳಗೊಂಡಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಈ ನಿರ್ಧಾರವನ್ನು ರದ್ದುಗೊಳಿಸುವಂತೆ ಆಗ್ರಹಿಸುವುದಾಗಿ ತಿಳಿಸಿದರು.
ಹೇಮಾವತಿ ಮತ್ತು ಇತರೆ ಅಣೆಕಟ್ಟುಗಳಿಂದ ಕೂಡ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಕೆಆರ್‌ಎಸ್ ಅಣೆಕಟ್ಟೆಗೆ ಈಗಾಗಲೇ ೯೪ ವರ್ಷ ಪೂರೈಸಿರುವುದರಿಂದ ಅದರ ಭದ್ರತೆಗೆ ಸರ್ಕಾರ ಜವಾಬ್ದಾರಿ ನಿರ್ವಹಿಸಿ ಸಮಾನಾಂತರ ಅಣೆಕಟ್ಟೆ ನಿರ್ಮಾಣದ ಯೋಜನೆಯನ್ನು ರೂಪಿಸುವಂತೆ ಸರ್ಕಾರ ಸಮಿತಿಯನ್ನು ಒತ್ತಾಯಿಸಲಿದೆ ಎಂದರು.ಮೈಷುಗರ್ ಕಾರ್ಖಾನೆ ಪ್ರಸ್ತುತ ಕಬ್ಬು ನುರಿಸಲಾರಂಭಿಸಿದ್ದು, ಕಂಪನಿಯೊಳಗೆ ಆಡಳಿತ ವೈಖರಿ, ಅಧಿಕಾರಿಗಳ ಬೇಜವಾಬ್ದಾರಿ ಕುರಿತು ಶಾಸಕರು, ಸಚಿವರು, ಜಿಲ್ಲಾಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತರಲಾಗಿದೆ. ಆದರೂ ಕಬ್ಬು ಬೆಳೆಗಾರರು, ಪ್ರಗತಿಪರ ಸಂಘಟನೆಗಳ ಸಮಿತಿಯ ಸಭೆಯನ್ನು ಕರೆಯದಿರುವುದು ಖಂಡನೀಯ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಸಚಿವರು, ಶಾಸಕರು, ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆಯುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಅಧ್ಯಕ್ಷ ಜಿ.ಬಿ.ಶಿವಕುಮಾರ್, ಪ್ರೊ.ಬಿ.ಶಿವಲಿಂಗಯ್ಯ, ಕೆ.ಬೋರಯ್ಯ, ಕೆ.ಚಂದ್ರಶೇಖರ್, ಸುನಂದಾ ಜಯರಾಂ, ಎಸ್.ಕೃಷ್ಣ, ಎಸ್.ಎಂ.ವೇಣುಗೋಪಾಲ್, ನಾರಾಯಣ್, ಎಂ.ಬಿ.ನಾಗಣ್ಣಗೌಡ, ಮುದ್ದೇಗೌಡ ಇತರರಿದ್ದರು.ಈಗಷ್ಟೇ ಸಮಿತಿಯನ್ನು ಪುನಾರಚನೆ ಮಾಡಲಾಗಿದೆ. ನಮ್ಮ ಕಾರ್ಯವ್ಯಾಪ್ತಿ ಏನು, ಇನ್ನೂ ಯಾರನ್ನು ಇದರಲ್ಲಿ ಒಳಗೊಳ್ಳಬೇಕು, ಕಾನೂನು ಸಲಹೆಗಾರರನ್ನೂ ಸೇರಿಸಬೇಕಿದೆ. ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದಕ್ಕೆ, ಹಲವರ ಸಲಹೆ, ಸಹಕಾರ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಹಂತ ಹಂತವಾಗಿ ಸಮಿತಿಯನ್ನು ಬಲಿಷ್ಠಗೊಳಿಸಲಾಗುವುದು.- ಜಿ.ಬಿ.ಶಿವಕುಮಾರ್, ಅಧ್ಯಕ್ಷರು, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಸಮಿತಿಯನ್ನು ವಿಸರ್ಜನೆ ಮಾಡಿ ಅದೇ ಹೆಸರಿನ ಹೊಸ ಸಮಿತಿಯನ್ನು ರಚಿಸಿರುವ ವಿಷಯ ಬೇರೆಯವರಿಂದ ನನ್ನ ಗಮನಕ್ಕೆ ಬಂದಿದೆ. ಪುನಾರಚನೆ ಮಾಡುವುದು ಅನಿವಾರ್ಯವಿದ್ದರೂ ಮಾಡಿದ ರೀತಿ ಸರಿಯಾಗಿಲ್ಲ. ಎಲ್ಲಾ ಪಕ್ಷಗಳ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಕನ್ನಡಪರ, ರೈತ, ದಲಿತ ಸೇರಿದಂತೆ ಎಲ್ಲಾ ಸಂಘಟನೆಗಳ ಸದಸ್ಯರನ್ನು ಪುನಾರಚನೆ ಕುರಿಂತೆ ಪೂರ್ವಭಾವಿಯಾಗಿ ಸಭೆ ಕರೆದು ಅವರೆಲ್ಲರ ಸಲಹೆ, ಅಭಿಪ್ರಾಯ ಪಡೆದು ಪುನಾರಚನೆ ಮಾಡಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಆತುರಾತುರವಾಗಿ ಮಾಡಿರುವ ಹಿಂದಿನ ಉದ್ದೇಶ ತಿಳಿಯದಾಗಿದೆ.
-ಎಂ.ಎಸ್.ಆತ್ಮಾನಂದ, ಮಾಜಿ ಉಪಾಧ್ಯಕ್ಷರು, ಹಿಂದಿನ ಸಮಿತಿಉದ್ದೇಶಪೂರ್ವಕವಾಗಿ ನನ್ನನ್ನು ಸಮಿತಿಯಿಂದ ಹೊರಗಿಡಲಾಗಿದೆ. ನಾನು ಸಮಿತಿಯ ಒಳಗಿರುವುದನ್ನು ಕೆಲವರು ಸಹಿಸುವುದಿಲ್ಲ. ಸಮಿತಿ ಪುನಾರಚನೆ ಸಂಬಂಧ ಯಾರೂ ನನ್ನ ಅಭಿಪ್ರಾಯ ಕೇಳಿಲ್ಲ. ಮೈಷುಗರ್ ಉಳಿವಿಗಾಗಿ ಸದನದಲ್ಲಿ ಹೋರಾಟ ಮಾಡಿ ಗಮನಸೆಳೆದಿದ್ದೆ. ಮಂಡ್ಯ ವಿಶ್ವವಿದ್ಯಾಲಯದ ಉಳಿವಿಗೆ ಹೋರಾಟ ನಡೆಸಿದೆ. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪುನಾರಚನೆ ಮಾಡಿರುವುದೇ ಸಮಂಜಸವಾಗಿಲ್ಲ. ಇವರಿಗೆ ಬೇಕಾದವರನ್ನು ಸಮಿತಿಗೆ ಹಾಕಿಕೊಂಡಾಕ್ಷಣ ಅದು ಪುನಾರಚನೆಯೇ. ಇವರು ಸಮಿತಿ ಪುನಾರಚಿಸಲಿ. ಇವರಿಗೆ ಪರ್ಯಾಯವಾಗಿ ಮಂಡ್ಯ ನಾಗರಿಕರ ಹಿತರಕ್ಷಣಾ ಸಮಿತಿ ಹೆಸರಿನಲ್ಲಿ ಹೊಸ ಸಂಘಟನೆಯನ್ನು ಹುಟ್ಟಿಹಾಕುವೆ.- ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸದಸ್ಯರು, ವಿಧಾನಪರಿಷತ್ತುಸಮಿತಿ ಪುನಾರಚನೆ ಸರಿಯಾಗಿ ನಡೆದಿಲ್ಲ. ನನ್ನ ಮತ್ತು ಕೆ.ಆರ್.ಜಯರಾಂ ಫೋಟೋ ಕಳಿಸಿಕೊಡಿ ಸಮಿತಿಗೆ ಸೇರಿಸಿಕೊಳ್ತೇವೆ ಅಂದಿದ್ದರು. ಅದಕ್ಕೆ ನಾವು ಒಪ್ಪಲಿಲ್ಲ. ಎಲ್ಲರನ್ನೂ ಒಳಗೊಂಡು ಸಭೆ ಕರೆಯಬೇಕಿತ್ತು. ಕಾವೇರಿ ಕಣಿವೆ ಪ್ರದೇಶದವರನ್ನೂ ಸಮಿತಿಗೆ ಸೇರಿಸಿಕೊಳ್ಳಬೇಕಿತ್ತು. ಪೂರ್ವಭಾವಿಯಾಗಿ ಸಭೆಯನ್ನೇ ಕರೆಯದೆ, ಯಾರೊಂದಿಗೂ ಚರ್ಚಿಸದೆ, ಅಭಿಪ್ರಾಯಗಳನ್ನು ಪಡೆಯದೆ ಇವರಿಗಿಷ್ಟ ಬಂದವರನ್ನು ಸೇರಿಸಿಕೊಂಡು ಸಭೆ ನಡೆಸಿದರೆ ಒಪ್ಪಲು ಸಾಧ್ಯವೇ. ಸರ್ವಸಮ್ಮತ, ಸಮರ್ಥರಾದ ಅಧ್ಯಕ್ಷರನ್ನು ನೇಮಕ ಮಾಡಿ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುವಂತೆ ಸಮಿತಿ ರೂಪುಗೊಂಡಿದ್ದರೆ ಹೊಸ ಶಕ್ತಿ ಬರುತ್ತಿತ್ತು. ನಮ್ಮ ಹೋರಾಟಕ್ಕೆ ಅವರು ಎಂದಿಗೂ ಕೈಜೋಡಿಸಿರಲಿಲ್ಲ. ಈಗ ಅವರು ಕರೆದಾಕ್ಷಣ ಸೇರಿಕೊಳ್ಳಲಾಗುವುದೇ. ಅವರ ಹೋರಾಟ ಅವರು ಮಾಡಲಿ. ನಮ್ಮ ಹೋರಾಟ ನಾವು ಮಾಡುತ್ತೇವೆ.
- ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘ