ಸಾರಾಂಶ
ಚಳ್ಳಕೆರೆ: ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ತಂದು ಶಿಕ್ಷಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂಬ ಪ್ರಚಾರವನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ. ಆದರೆ ಇಂದಿಗೂ ಅನೇಕ ಶಾಲೆಗಳಲ್ಲಿ ಕೊಠಡಿ, ಕಾಂಪೌಂಡ್, ಶೌಚಾಲಯ, ಮಕ್ಕಳು ಕುಳಿತು ಊಟ ಮಾಡಲು ಸ್ಥಳವಿಲ್ಲದ ಹತ್ತಾರು ಸಮಸ್ಯೆಗಳ ನಡುವೆ ಹಲವಾರು ಸಮಸ್ಯೆಗಳನ್ನು ಹೊಂದಿದ ತಾಲೂಕಿನ ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ.ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ ನೋಡಿದರೆ ಶಿಕ್ಷಣ ಇಲಾಖೆ ಮಕ್ಕಳಿಗೆ ಕನಿಷ್ಠ ಸೌಲಭ್ಯವನ್ನು ನೀಡದೆ ನಿರ್ಲಕ್ಷ್ಯ ವಹಿಸುತ್ತಿದೆ. ಸರ್ಕಾರಿ ಶಾಲೆಯಲ್ಲಿ ಕಲಿತು ಬದುಕು ರೂಪಿಸಿಕೊಳ್ಳುವ ವಿದ್ಯಾರ್ಥಿಗಳು ಪ್ರತಿನಿತ್ಯ ಹತ್ತಾರು ತೊಂದರೆಗಳನ್ನು ಎದುರಿಸಿ ಶಿಕ್ಷಣ ಕಲಿಯಬೇಕಿದೆ. ಜಿ.ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಕುಳಿತು ಪಾಠ ಕೇಳುವ ಭಾಗ್ಯವಿಲ್ಲ, ಕಾರಣ ಶಾಲಾ ಕೊಠಡಿ ದುರಸ್ತಿ ಹಿನ್ನೆಲೆಯಲ್ಲಿ ಪ್ರತಿನಿತ್ಯ ನೂರಾರು ಮಕ್ಕಳು ಶಾಲಾ ಹೊರಭಾಗದ ಬಯಲಿನಲ್ಲೇ ಪಾಠಪ್ರಚನಗಳನ್ನು ಕೇಳಬೇಕಿದೆ. ಕುಳಿತು ಊಟ ಮಾಡಲು ಸ್ಥಳವಿಲ್ಲ, ಶಾಲಾ ಮಕ್ಕಳು ಊಟ ಮಾಡುವಾಗ ನಾಯಿ ಹಾಗೂ ಇನ್ನಿತರ ಪ್ರಾಣಿಗಳು ಬಂದು ತೊಂದರೆ ನೀಡುತ್ತಿವೆ. ಮಳೆ ಬಂದ ಸಂದರ್ಭದಲ್ಲಿ ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ರಸ್ತೆಯ ಮೇಲಿನ ನೀರು ಶಾಲೆಯ ಒಳಗೆ ನುಗ್ಗುತ್ತಿವೆ. ಈ ಬಗ್ಗೆ ಹಲವಾರು ಬಾರಿ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ.
ಶಾಲೆಯಲ್ಲಿ 1ರಿಂದ 8ನೇ ತರಗತಿಯ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಮೂವರು ಶಿಕ್ಷಕರು ಮಾತ್ರ ಎಂಟೂ ತರಗತಿ ಮಕ್ಕಳಿಗೆ ಪಾಠಮಾಡುತ್ತಿದ್ದಾರೆ. ಹೆಚ್ಚುವರಿ ಶಿಕ್ಷಕರನ್ನು ನೀಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಗ್ರಂಥಾಲಯ, ಆಟದ ಮೈದಾನ, ಕುಡಿಯುವ ನೀರಿನ ವ್ಯವಸ್ಥೆ, ಹೆಚ್ಚುವರಿ ಕೊಠಡಿ, ಕಾಂಪೌಂಡ್ ನಿರ್ಮಾಣ ಮಾಡಲು ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.