ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶನಿವಾರದಂದು ನಡೆದ ಚುನಾವಣೆಯಲ್ಲಿ ಗೊಲ್ಲರಹೊಸಹಳ್ಳಿ ಕ್ಷೇತ್ರದ ನಿರ್ದೇಶಕ ಜಿ.ಕೆ.ಮಧು ಅವಿರೋಧವಾಗಿ ಆಯ್ಕೆಯಾದರು.ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷರಾದ ಡಿ.ಕಾಳೇನಹಳ್ಳಿ ಕ್ಷೇತ್ರದ ಡಿ.ಸಿ.ರಂಗಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ, ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಇಲಾಖೆ ಶನಿವಾರದಂದು ಚುನಾವಣೆ ನಿಗದಿಗೊಳಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಗೊಲ್ಲರಹೊಸಹಳ್ಳಿ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಜಿ.ಕೆ.ಮಧು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಧಿಕಾರಿ ಹೇಮಚಂದ್ರರವರು ಜಿ.ಕೆ.ಮಧುರವರ ಅಯ್ಕೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷರನ್ನು ಶಾಸಕರಾದ ಸಿ.ಎನ್.ಬಾಲಕೃಷ್ಣ, ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಸಹಕಾರ ಸಂಘದ ಉಪಾಧ್ಯಕ್ಷ ಸುರೇಶ್ ಬಾಳೆಮಂಡಿ, ಮಾಜಿ ಅಧ್ಯಕ್ಷ ಡಿ.ಸಿ.ರಂಗಸ್ವಾಮಿ ಸೇರಿ ಎಲ್ಲ ನಿರ್ದೇಶಕರು, ಅವರ ಬೆಂಬಲಿಗರು, ಹಿತೈಷಿಗಳು ಹಾರ ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿದರು.ಈ ವೇಳೆ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ, ಕಸಬಾ ಸೊಸೈಟಿ ಆರ್ಥಿಕವಾಗಿ ಸದೃಢವಾಗಿ ಬೆಳೆದಿದ್ದು, ಅತ್ಯುತ್ತಮವಾದ ಸ್ವಂತ ಕಟ್ಟಡವನ್ನು ಹೊಂದಿ ಬಾಡಿಗೆ ರೂಪದಲ್ಲಿ ಸಂಪನ್ಮೂಲವನ್ನು ಕ್ರೋಡಿಕರಿಸಿಕೊಳ್ಳುವಲ್ಲಿ ಮುಂದಾಗಿದೆ. ಸೊಸೈಟಿಯಡಿ ಡಿ.ಕಾಳೇನಹಳ್ಳಿ, ಯಾಚೇನಹಳ್ಳಿ, ಮಳ್ಳೇನಹಳ್ಳಿ, ನಾಗಮುದ್ರ, ಮಾರೇನಹಳ್ಳಿ ಗ್ರಾಮಗಳಿಗೆ ತೆರಳಿ ಪಡಿತರ ನೀಡುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ನಿರ್ದೇಶಕರ ಸಹಕಾರದಿಂದ ಅಧ್ಯಕ್ಷರಾಗಿರುವ ಮಧು ತಮ್ಮ ಅವಧಿಯಲ್ಲಿ ಉತ್ತಮ ಕೆಲಸಕ್ಕೆ ಮುಂದಾಗಲಿ, ಅದೇ ರೀತಿ ಖಾಲಿ ಇದ್ದ ಒಂದು ನಿರ್ದೇಶಕ ಸ್ಥಾನಕ್ಕೆ ಗೊಲ್ಲರಹೊಸಹಳ್ಳಿ ಗ್ರಾಮದ ಶ್ರೀನಿವಾಸ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೂ ಶುಭಾಶಯ ಸಲ್ಲಿಸುವುದಾಗಿ ಹೇಳಿದರು.
ನೂತನ ಅಧ್ಯಕ್ಷ ಜಿ.ಕೆ.ಮಧು ಮಾತನಾಡಿ, ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಹಿಂದೆ ಅಧ್ಯಕ್ಷರಾಗಿದ್ದವರೆಲ್ಲ ಸಂಘವನ್ನು ಅಭಿವೃದ್ಧಿಯತ್ತ ಮುನ್ನಡೆಸಿದ್ದಾರೆ. ಅವರೆಲ್ಲರ ಮಾರ್ಗದರ್ಶನ, ಸಲಹೆಯನ್ನು ಪಡೆದು ಸಂಘವನ್ನು ನಡೆಸಿಕೊಂಡು ಹೋಗುವುದರ ಜೊತೆಗೆ ನಮ್ಮ ನಾಯಕರಾದ ತಾಲೂಕಿನ ನೀರಾವರಿ ಹರಿಕಾರ, ಭಗೀರಥ ಬಾಲಕೃಷ್ಣರವರಿಂದ ಹೆಚ್ಚಿನ ಅನುದಾನ ತಂದು ರೈತರಿಗೆ ಮತ್ತಷ್ಟು ಸಾಲ ನೀಡುವ ಮೂಲಕ ಅವರ ಆರ್ಥಿಕತೆಯನ್ನು ಬಲಗೊಳಿಸಲಾಗುವುದು ಎಂದರು.ಕಸಬಾ ಸೊಸೈಟಿಯಲ್ಲಿ 7 ಕೋಟಿ 98 ಲಕ್ಷ ರು. ಬೆಳೆ ಸಾಲ ನೀಡಲಾಗಿದೆ. ಹೈನುಗಾರಿಕೆಗೆ 6 ಲಕ್ಷ 70 ಸಾವಿರ ರು, ಮಧ್ಯಮಾವಧಿ ಸಾಲವಾಗಿ 1 ಕೋಟಿ 21 ಲಕ್ಷ ರು. ನೀಡಲಾಗಿದೆ ಎಂದರು.
ಸೊಸೈಟಿ ನಿರ್ದೇಶಕರಾದ ಸುರೇಶ್ ಬಾಳೆಮಂಡಿ, ಕೆ.ಎಸ್.ಮಂಜಪ್ಪ, ಕೆ.ಎನ್.ಬೋರೆಗೌಡ, ಎಂ.ವಿ.ನಂಜುಂಡಸ್ವಾಮಿ, ಬಿ.ಕೆ.ಲತಾ, ಗೋವಿಂದಯ್ಯ ಸೇರಿ ಸಿಇಒ ರಮೇಶ್‌ಕುಮಾರ್, ಸಿಬ್ಬಂದಿ ಲೋಕೇಶ್, ಮಣಿ, ಗಿರೀಶ್ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಅಭಿನಂದಿಸಿದರು.