ಸಾರಾಂಶ
- ದಿಬ್ಬದಹಳ್ಳಿ ಶ್ರೀನಿವಾಸ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ - - -
ಕನ್ನಡಪ್ರಭ ವಾರ್ತೆ ಜಗಳೂರುತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಮಂಡಲಗೊಂದಿ ಜಿ.ಎಂ.ಶಾಂತಮ್ಮ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಗ್ರಾಪಂನಲ್ಲಿ 2ನೇ ಅವಧಿಗೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಮಲ್ಲಾಪುರ ಗ್ರಾಮ ಪಂಚಾಯಿತಿ ಸದಸ್ಯ ದಿಬ್ಬದಹಳ್ಳಿ ಶ್ರೀನಿವಾಸ್ ದಿಢೀರ್ ರಾಜೀನಾಮೆಯಿಂದ ಅಧ್ಯಕ್ಷರ ಹುದ್ದೆ ಖಾಲಿಯಾಗಿತ್ತು. ತೆರವಾಗಿದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು.ಕಮಂಡಲಗೊಂದಿ ಗ್ರಾಪಂ ಸದಸ್ಯೆ ಜಿ.ಎಂ.ಶಾಂತಮ್ಮ ಒಬ್ಬರೇ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರಿಂದ ಸಮಯಕ್ಕೆ ಸರಿಯಾಗಿ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಘೋಷಿಸಲಾಯಿತು. ಚುನಾವಣಾ ಅಧಿಕಾರಿಯಾಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ರವಿಶಂಕರ್ ಕರ್ತವ್ಯ ನಿರ್ವಹಿಸಿ, ಆಯ್ಕೆ ಘೋಷಣೆ ಮಾಡಿದರು.
ಅಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಗ್ರಾಪಂ ಹೊರಗಡೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅನಂತರ ನೂತನ ಅಧ್ಯಕ್ಷರು ಹಾಗೂ ಸದಸ್ಯರು ಕಮಂಡಲಗೊಂದಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶ್ರಾವಣ ಅಂಗವಾಗಿ ವಿಶೇಷಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿದರು.ಮೂಲ ಸೌಕರ್ಯ ಭರವಸೆ:
ನೂತನ ಅಧ್ಯಕ್ಷೆ ಜಿ.ಎಂ.ಶಾಂತಮ್ಮ ಅಧಿಕಾರ ಸ್ವೀಕರಿಸಿ ಮಾತನಾಡಿ, ಹಿರೇಮಲ್ಲನಹೊಳೆ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 20 ಸದಸ್ಯರಿದ್ದಾರೆ. ಎಲ್ಲರ ಸಹಕಾರ ಮೇರೆಗೆ ಗ್ರಾಮಗಳಲ್ಲಿ ಮೂಲಸೌಲಭ್ಯಗಳ ಕಲ್ಪಿಸಲು ಆದ್ಯತೆ ನೀಡುತ್ತೇನೆ. ಸದಸ್ಯರ ಸಹಕಾರ, ಅಧಿಕಾರಿಗಳ ಯೋಜನೆಯಂತೆ ಅಧಿಕಾರವಧಿಯಲ್ಲಿ ಮಾದರಿ ಗ್ರಾಪಂ ರೂಪಿಸಲು ಶ್ರಮಿಸಲಾಗುವುದು. ಅಧ್ಯಕ್ಷರಾಗಲು ಸಹಕರಿಸಿದ ತೊರೆಸಾಲು ಭಾಗದ ಎಲ್ಲ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಗ್ರಾಪಂ ಮಾಜಿ ಉಪಾಧ್ಯಕ್ಷ ಅನೂಪ್ ರೆಡ್ಡಿ ಮಾತನಾಡಿ, 2ನೇ ಅವಧಿಯಲ್ಲಿ ಮೊದಲ ಪ್ರಯತ್ನದಲ್ಲಿ ಶಾಂತಮ್ಮ ಅಧ್ಯಕ್ಷರಾಗಬೇಕಿತ್ತು. ಕೊನೆ ಕ್ಷಣದಲ್ಲಿ ಕೈತಪ್ಪಿದ್ದರಿಂದ ಈ ಬಾರಿ ಅದೃಷ್ಟ ಹುಡುಕಿಕೊಂಡು ಬಂದಿದೆ. ಹಿರಿಯ ಸದಸ್ಯೆಗೆ ಒಳ್ಳೆಯ ಜವಾಬ್ದಾರಿ ನೀಡಲಾಗಿದೆ. ಎಲ್ಲ ಸದಸ್ಯರನ್ನು ಒಂದುಗೂಡಿಸಿಕೊಂಡು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ ಎಂದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಬೇಬಿ ನಾಗರಾಜ್ , ಪಿಡಿಒ ಅರವಿಂದ್, ಮಾಜಿ ಉಪಾಧ್ಯಕ್ಷ ಅನೂಪ್ ರೆಡ್ಡಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಜಿ.ಎಸ್. ವೇಣುಗೋಪಾಲ ರೆಡ್ಡಿ, ಬಿಜೆಪಿ ಮುಖಂಡರಾದ ಕಮಂಡಲಗೊಂದಿ ರಘುರಾಮ್ ರೆಡ್ಡಿ, ತಾಯಿಟೋಣಿ ಅರವಿಂದ್ ಪಾಟೀಲ್, ಜಿ.ಆರ್. ಇಂದ್ರೇಶ್, ಗ್ರಾಪಂ ಸದಸ್ಯರಾದ ರಜಿಯಾಬಿ, ಬಿ.ಸುರೇಶ್, ಎಂ.ಈರಮ್ಮ, ಪದ್ಮಕ್ಕ, ಟಿ.ಒ. ಶ್ರೀನಿವಾಸ್ ಕಾಂಗ್ರೆಸ್ ಮುಖಂಡರು, ಗ್ರಾಮ ಮುಖಂಡರು ಇದ್ದರು.- - -
-26ಜೆ.ಜಿ.ಎಲ್.1.ಜೆಪಿಜಿ:ಹಿರೇಮಲ್ಲನಹೊಳೆ ಗ್ರಾಪಂ ಅಧ್ಯಕ್ಷರಾಗಿ ಕಮಂಡಲಗೊಂದಿ ಜಿ.ಎಂ.ಶಾಂತಮ್ಮ ಅವಿರೋಧ ಆಯ್ಕೆಯಾಗಿದ್ದು, ಅಭಿನಂದಿಸಲಾಯಿತು.