ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ನನ್ನ ತಂದೆ, ಮಾಜಿ ಸಂಸದ ಜಿ.ಮಾದೇಗೌಡರ ಆಶಯದಂತೆ ಬಡವರು, ಜನಸಾಮಾನ್ಯರಿಗೆ ನುರಿತ ವೈದ್ಯರಿಂದ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಜಿ.ಮಾದೇಗೌಡರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪುನರಾರಂಭ ಮಾಡಲಾಗಿದೆ ಎಂದು ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ಭಾರತೀ ಎಜುಕೇಷನ್ ಟ್ರಸ್ಟ್ ನೇತೃತ್ವದಲ್ಲಿ ಭಾರತೀನಗರದ ಹೃದಯಭಾಗದಲ್ಲಿನ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ವೃತಿಕಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್‌ನ ಘಟಕ)ಯ ಪುನರಾರಂಭದ ಅಂಗವಾಗಿ ಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮೀಣ ಜನರು ಉತ್ತಮ ಚಿಕಿತ್ಸೆಗಾಗಿ ದೊಡ್ಡ ನಗರಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಟ್ರಸ್ಟ್ ಸಹಯೋಗದೊಂದಿಗೆ ಉತ್ತಮ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ದೊರೆಯಬೇಕು ಎಂಬ ಧ್ಯೇಯದೊಂದಿಗೆ ಆಸ್ಪತ್ರೆ ಕಾರ್ಯಾರಂಭ ಮಾಡಲಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರ ಜೊತೆಗೆ ಆಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ಒದಗಿಸಲಾಗುವುದು. ಆಸ್ಪತ್ರೆಯಲ್ಲಿ ಸಾಮಾನ್ಯ ವೈದ್ಯಕೀಯ ಸೇವೆಗಳ ಜೊತೆಗೆ ವಿವಿಧ ವಿಶೇಷ ವಿಭಾಗಗಳ ತಜ್ಞ ವೈದ್ಯರಿಂದ ತಪಾಸಣೆ, ಸಲಹೆ, ಚಿಕಿತ್ಸೆ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಅನುಭವಿ ವೈದ್ಯರ ಮಾರ್ಗದರ್ಶನ ಹಾಗೂ ಉತ್ತಮ ರೋಗಿ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.


ಸಾರ್ವಜನಿಕರು ಈ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಬೆಳಗ್ಗೆ 6.30ರಿಂದ 10.30ರವರೆಗೆ ನಡೆದ ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹೋಮ, ನವಗ್ರಹ ಪೂಜೆ, ಲಕ್ಷ್ಮೀ ಪೂಜೆ ಹಾಗೂ ಗಣಪತಿ ಪೂಜೆಗಳನ್ನು ನೆರವೇರಿಸಲಾಯಿತು. ಟ್ರಸ್ಟ್ ಪದಾಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಪೂಜೆಯಲ್ಲಿ ಭಾಗವಹಿಸಿ ಆಸ್ಪತ್ರೆ ಯಶಸ್ಸಿಗಾಗಿ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ವೃತಿಕ ಆಸ್ಪತ್ರೆಯ ಡಾ.ವಿಜಯ್, ಭಾರತೀ ಶಿಕ್ಷಣ ಸಂಸ್ಥೆ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಭಾರತೀ ಹೆಲ್ತ್ ಸೈನ್ಸ್ ನಿರ್ದೇಶಕ ಡಾ.ತಮಿಳ್‌ಮಣಿ, ಭಾರತೀ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ.ಎಸ್. ನಾಗರಾಜು, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಡಾ.ಚಂದನ್, ಡಾ.ಎಸ್.ಎಲ್.ಸುರೇಶ್, ಜಿ.ಕೃಷ್ಣ, ಸಿ.ವಿ.ಮಲ್ಲಿಕಾರ್ಜುನ, ಡಾ. ಬಾಲಸುಬ್ರಹ್ಮಣ್ಯ, ಡಾ.ಮಂಜು ಜೇಕಬ್, ಡಾ.ಮಹೇಶ್ ಕುಮಾರ್ ಲೋನಿ, ಜಿ.ಬಿ.ಪಲ್ಲವಿ, ಸಿ.ರಮ್ಯಾ, ಜಗದೀಶ್ ಸೇರಿ ಹಲವರು ಉಪಸ್ಥಿತರಿದ್ದರು.-----

ಹಳ್ಳಿಗಾಡಿನ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಭಾರತೀ ವಿದ್ಯಾಸಂಸ್ಥೆ ನೇತೃತ್ವದಲ್ಲಿ ಆಸ್ಪತ್ರೆಯನ್ನು ಪುನಾರಾರಂಭಿಸಲಾಗಿದೆ. ಸುತ್ತಮುತ್ತಲಿನಲ್ಲಿರುವ ಗ್ರಾಮಗಳ ಜನರು, ಬಡವರು ದುಬಾರಿ ವೆಚ್ಚ ಭರಿಸಿ ಪಟ್ಟಣ, ನಗರ ಪ್ರದೇಶಗಳ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ಬದಲು ನಮ್ಮಲ್ಲೇ ಸಿಗುವ ಗುಣಮಟ್ಟ ಹಾಗೂ ಕಡಿಮೆ ವೆಚ್ಚದ ಚಿಕಿತ್ಸಾ ಸೌಲಭ್ಯ ಪಡೆದು ಉತ್ತಮ ಆರೋಗ್ಯ ಹೊಂದಬೇಕು.

ಆಶಯ್ ಮಧು, ನಿರ್ದೇಶಕರು, ಜಿ.ಮಾದೇಗೌಡ ಸೂಪರ್ ಸ್ಪಷಾಲಿಟಿ ಆಸ್ಪತ್ರೆ