ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಮ್ಮದೇ ಶೈಲಿಯಲ್ಲಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುವ ಅಜ್ಜಂಪುರ ಜಿ.ಸೂರಿ ಜಿಲ್ಲೆ ಕಂಡ ಅತ್ಯುತ್ತಮ ಕನ್ನಡ ಹಾಗೂ ಸಾಹಿತ್ಯ ಪ್ರೇಮಿ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು ಹೇಳಿದರು.ನಗರದ ಎನ್.ಎಂ.ಸಿ. ವೃತ್ತದ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಅಜ್ಜಂಪುರ ಜಿ.ಸೂರಿ ಸಾಂಸ್ಕೃತಿಕ ಪ್ರತಿಷ್ಠಾನ ಸಾಹಿತಿ ಅಜ್ಜಂಪುರ ಜಿ.ಸೂರಿ ಅವರ 87ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇತ್ತೀಚಿನ ಲೇಖಕರು ಸಾಹಿತ್ಯದ ಗಂಧ ಅರಿಯದೇ ಕೆಲವೇ ಪುಸ್ತಕಗಳನ್ನು ರಚಿಸಿ ಬೀಗುತ್ತಿದ್ದಾರೆ. ಆದರೆ ಸೂರಿಯವರು ಸುಮಾರು 150 ಪುಸ್ತಕ ಗಳನ್ನು ಸ್ವಯಂ ರಚಿಸಿದರೂ ಯಾವುದೇ ಅಹಂವಿಲ್ಲದೇ ವಿನಯದಿಂದ ನಡೆದುಕೊಂಡವರು. ಅಲ್ಲದೇ ಅವರ ಮಕ್ಕಳು, ಹಿರಿಯರೊಂದಿಗಿನ ಒಡನಾಟವೂ ಗೌರವದಿಂದ ಕೂಡಿರುತ್ತಿತ್ತು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಸಾಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಜಿ.ಸೂರಿ ಹೋಬಳಿ ಮಟ್ಟದಲ್ಲಿ ಮೊದಲ ಘಟಕ ಸ್ಥಾಪಿಸಿದ ಕೀರ್ತಿ ಅವರಿಗಿದೆ. ಯಾವುದೇ ಜವಾಬ್ದಾರಿಯನ್ನು ಕಾಟಾಚಾರದಿಂದ ನಿರ್ವಹಿಸದೇ ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಅವರಲ್ಲಿತ್ತು. ಸಾಹಿತ್ಯ ಕ್ಷೇತ್ರವಲ್ಲದೇ ಉತ್ತಮ ವಾಗ್ಮಿಯಾಗಿದ್ದರು. ಮಗುವಿನ ಮನಸ್ಸಿನ ಅವರು ಕಲ್ಮಶವಿಲ್ಲದವರು, ಶತೃವಿಗೂ ಒಳ್ಳೆಯದನ್ನೇ ಬಯಸುವ ಗುಣ ಹೊಂದಿದ್ದರು ಎಂದರು.ಸಾಹಿತಿ ಡಿ.ಎಂ. ಮಂಜುನಾಥಸ್ವಾಮಿ ಮಾತನಾಡಿ, ಸಾಹಿತ್ಯ ಚಟುವಟಿಕೆ ಅಲ್ಲದೇ ನಾಟಿ ವೈದ್ಯರಾಗಿ ಪರಿಣಿತಿ ಜಿ.ಸೂರಿ ಹೊಂದಿದ್ದರು. ಜೊತೆಗೆ ಇಡೀ ಕುಟುಂಬವೇ ಭುವನೇಶ್ವರಿ ಸೇವೆಯಲ್ಲಿ ಇಂದಿಗೂ ತೊಡಗಿರುವುದು ಸಾಮಾನ್ಯವಲ್ಲ. ಕಲೆ, ಸಾಹಿತ್ಯ, ಕಾದಂಬರಿ, ಕಥೆಗಳು ರಚಿಸುವಲ್ಲಿ ಅನನ್ಯ ಸೇವೆ ನೀಡಿದವರು ಎಂದು ಹೇಳಿದರು.
ಹಿರಿಯ ಪತ್ರಕರ್ತ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಕಾಲೇಜಿನ ಹಲವಾರು ಯುವ ಬರಹಗಾರರಿಗೆ ಸಾಹಿತ್ಯಾತ್ಮಕ ಒಲವು ಮೂಡಿಸಿ ಆತ್ಮವಿಶ್ವಾಸ ತುಂಬಿದ್ದರು. ಸರಳ, ಸಜ್ಜನಿಕೆ ಹಾಗೂ ನೇರ ನಡೆ, ನುಡಿ ಹೊಂದಿದ್ದರು. ಟೀಕೆ, ಟಿಪ್ಪಣಿಗಳಿಗೆ ಅವರ ಸ್ವರತರಂಗದಲ್ಲಿ ಸ್ಥಳವಿರಲಿಲ್ಲ. ಒಟ್ಟಾರೆ ಮುಗ್ದ ಮನಸ್ಸಿನ ಹಾಗೂ ಯುವ ಲೇಖಕರ ಪ್ರಿಯ ವಾದವರು ಎಂದು ಹೇಳಿದರು.ಈ ಸಂದರ್ಭದಲ್ಲಿ ಅಜ್ಜಂಪುರ ಜಿ.ಸೂರಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಪ್ರಭು, ಕಸಾಪ ತಾಲೂಕು ಅಧ್ಯಕ್ಷ ದಯಾನಂದ್ ಮಾವಿಕೆರೆ, ಮಾಜಿ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ದೇವಾಂಗ ಸಂಘದ ನಗರಾಧ್ಯಕ್ಷ ಭಗವತಿ ಹರೀಶ್, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್ ಉಪಸ್ಥಿತರಿದ್ದರು.19 ಕೆಸಿಕೆಎಂ 2ಚಿಕ್ಕಮಗಳೂರಿನ ಎನ್.ಎಂ.ಸಿ. ವೃತ್ತದ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಸಾಹಿತಿ ಅಜ್ಜಂಪುರ ಜಿ.ಸೂರಿ ಅವರ ಜನ್ಮದಿನಾಚರಣೆ ನಡೆಯಿತು.