ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
ಮೂರು ವರ್ಷಗಳ ಹಿಂದೆ ಶಿರ್ವದಲ್ಲಿ ತನ್ನ ಮಾತಾಪಿತರ ಸವಿನೆನಪಿನಲ್ಲಿ ತನ್ನ ಸ್ವಂತ ಜಮೀನಿನಲ್ಲಿ ಶ್ರೀಸಿದ್ಧಿವಿನಾಯಕ ದೇವಸ್ಥಾನವನ್ನು ನಿರ್ಮಿಸಿ ಸಮಾಜಕ್ಕೆ ಬಿಟ್ಟುಕೊಟ್ಟಿದ್ದ ಗ್ಯಾಬ್ರಿಯಲ್ ನಜ್ರೆತ್ (87) ಭಾನುವಾರ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವಿವಾಹಿತರಾಗಿದ್ದ ಅವರು, ಹಲವು ಬಡ ಕುಟುಂಬಗಳ ಹೆಣ್ಣು ಮಕ್ಕಳ ವಿವಾಹಕ್ಕೆ, ಮನೆ ನಿರ್ಮಾಣಕ್ಕೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ರೋಗಿಗಳಿಗೆ ಚಿಕಿತ್ಸೆ ಸಹಾಯ ಮಾಡಿದ್ದರು.ಹೇರೂರು ಕಲ್ಲುಗುಡ್ಡೆಯಲ್ಲಿದ್ದ ತಮ್ಮ ಜಮೀನಿನಲ್ಲಿ ಆಶ್ವತ್ಥ ವೃಕ್ಷಕ್ಕೆ ಕಟ್ಟೆಕಟ್ಟಿ, ವೈದಿಕರಿಂದ ಅಶ್ವತ್ಥಪೂಜೆ, ಸತ್ಯನಾರಾಯಣ ಪೂಜೆ ನಡೆಸಿ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಿದ್ದರು. ಜಾತಿ ಮತ ಭೇದವಿಲ್ಲದೆ ಎಲ್ಲರೊಂದಿಗೂ ಸೌಹಾರ್ದವಾಗಿದ್ದು, ಅಜಾತಶತ್ರುವಾಗಿದ್ದರು.ಶಿರ್ವದ ಸಿದ್ಧಿವಿನಾಯಕ ದೇವಸ್ಥಾನ ಕೇವಲ ಮೂರು ವರ್ಷಗಳಲ್ಲಿಯೇ ಪ್ರಸಿದ್ಧ ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು, ಇಂದು ಪ್ರತೀ ದಿನ ನೂರಾರು ಭಕ್ತರು ಬರುತ್ತಾರೆ. ಪ್ರತೀ ಸಂಕಷ್ಟಿಯಂದು ಸಾವಿರಕ್ಕೂ ಅಧಿಕ ಭಕ್ತರು ವಿವಿಧ ಸೇವೆಯನ್ನು ನೀಡಿ ಕೃತಾರ್ಥರಾಗುತ್ತಾರೆ. ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಮೂರು ಸಾವಿರಕ್ಕೂ ಅಧಿಕ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದಾರೆ.
ಅಂತಿಮ ದರ್ಶನಇಂದು (ಸೋಮವಾರ) ಮಧ್ಯಾಹ್ನ 12. 00 ಗಂಟೆಯಿಂದ ಶ್ರೀ ದೇವಳದ ಸಮೀಪದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮದರ್ಶನ ಅವಕಾಶ ಮಾಡಲಾಗಿದ್ದು, ಸಂಜೆ 4 ಗಂಟೆಗೆ ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಅಂತ್ಯಸಂಸ್ಕಾರವಿಧಿ ನೆರವೇರಲಿದೆ ಎಂದು ದೇವಳದ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.