ಮೂತ್ರಪಿಂಡ ಕಸಿ, ಅಂಗಾಂಗ ದಾನ ಸೇರಿದಂತೆ ವೈದ್ಯಕೀಯ ಸಾಧನೆಗೆ ಗದಗ ತನ್ನದೇ ಆದ ಛಾಪು ಮೂಡಿಸಿದೆ. ಇಂತಹ ಐತಿಹಾಸಿಕ ಸಾಧನೆ ಇತಿಹಾಸದ ಪುಟ ಸೇರುವಂತದ್ದಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಮೂತ್ರಪಿಂಡ ಕಸಿ, ಅಂಗಾಂಗ ದಾನ ಸೇರಿದಂತೆ ವೈದ್ಯಕೀಯ ಸಾಧನೆಗೆ ಗದಗ ತನ್ನದೇ ಆದ ಛಾಪು ಮೂಡಿಸಿದೆ. ಇಂತಹ ಐತಿಹಾಸಿಕ ಸಾಧನೆ ಇತಿಹಾಸದ ಪುಟ ಸೇರುವಂತದ್ದಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಸ್ಥಳೀಯ ಎಂ.ಜಿ.ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಮೂತ್ರಶಾಸ್ತ್ರ ಸಂಘ ಹಾಗೂ ಗದಗ ಕಸಿ ಮತ್ತು ಮೂತ್ರಜನಕಾಂಗ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕುವಾಕಾನ್-2026 ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕಳೆದ ಎರಡು ವರ್ಷಗಳಲ್ಲಿ ಗದಗದಲ್ಲಿ ಸಿ.ಜಿ.ಪಿ ಸಮ್ಮೇಳನ, ವೈದ್ಯ-ಕಾನೂನು ಸಮ್ಮೇಳನ, ಚರ್ಮರೋಗ ಸಮ್ಮೇಳನ, ಸ್ತ್ರೀರೋಗ ಸಮ್ಮೇಳನ ನಡೆದಿವೆ. ಈಗ ಮೂತ್ರಶಾಸ್ತ್ರ ಸಮ್ಮೇಳನ ನಡೆಯುತ್ತಿದೆ. ಗದಗ ಇಂದು ರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ನಡೆಸುವಷ್ಟು ಬೆಳೆದಿದೆ. ಇದು ಗದಗದ ವೈದ್ಯ ಪರಂಪರೆ ಅಜ್ಜನ ಕಾಲದಿಂದಲೂ ಎಷ್ಟು ದೂರದೃಷ್ಟಿ ಮತ್ತು ನಾಯಕತ್ವ ಗುಣ ಹೊಂದಿತ್ತು ಎಂಬುದನ್ನು ತೋರಿಸುತ್ತದೆ ಎಂದರು.

ಮೂತ್ರಪಿಂಡ ಕಸಿ ಎಂಬುದು 20 ವರ್ಷಗಳ ಹಿಂದೆ ಬಡವರಿಗೆ, ಗ್ರಾಮೀಣ ಜನರಿಗೆ ಕನಸು ಮಾತ್ರವಾಗಿತ್ತು. ಮೂತ್ರಪಿಂಡ ವಿಫಲವಾಯಿತು ಎಂದರೆ ಜೀವನ ಮುಗಿಯಿತು ಎಂದು ಲೆಕ್ಕಾಚಾರವಿತ್ತು. ಮೂತ್ರಪಿಂಡ ಕಸಿ ಇನ್ನು ಕನಸಲ್ಲ, ಗ್ರಾಮೀಣರಿಗೂ ವರವಾಗಿದೆ. ಡಯಾಲಿಸಿಸ್ ಯಂತ್ರ ತರುವುದಕ್ಕೇ ಒಂದು ಕಾಲದಲ್ಲಿ ದೊಡ್ಡ ಹೋರಾಟ, ರಾಜಕೀಯ ನಾಯಕರು, ಸರ್ಕಾರ, ವೈದ್ಯರು ಎಲ್ಲರೂ ಕೈಜೋಡಿಸಬೇಕಿತ್ತು. ಯಂತ್ರ ಸಿಕ್ಕರೂ ತಾಂತ್ರಿಕ ಜನರು, ಮಾನವ ಸಂಪನ್ಮೂಲ ಸಿಗುತ್ತಿರಲಿಲ್ಲ. ಆದರೆ ಇಂದು ಗದಗದಂತಹ ಗ್ರಾಮೀಣ ಪ್ರದೇಶದಲ್ಲೇ ಸುಮಾರು 30 ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ ಎಂಬುದು ಹೆಮ್ಮೆಯ ಸಂಗತಿ ಎಂದರು.

ಮೂತ್ರಪಿಂಡ ಕಸಿಗೆ ಸಾಮಾನ್ಯವಾಗಿ ₹15 ರಿಂದ 25 ಲಕ್ಷ ವೆಚ್ಚವಾಗುತ್ತದೆ. ಸಂಸ್ಥೆ ದಯಾಳುವಾಗಿದ್ದರೆ ₹15 ಲಕ್ಷ, ಕಾರ್ಪೊರೇಟ್ ಮನೋಭಾವ ಹೊಂದಿದ್ದರೆ ₹25-30 ಲಕ್ಷವಾಗುತ್ತದೆ. ಇದನ್ನು ಅರಿತ ಡಾ. ನಾಗನೂರು ನೇತೃತ್ವದ ಗ್ರಾಮೀಣ ವೈದ್ಯಕೀಯ ಸೇವಾ ಸಂಘವು ತಿಂಗಳಿಗೆ ಒಂದು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ, ಉಚಿತ ಔಷಧದೊಂದಿಗೆ ಮಾಡಿಕೊಡುವ ಪ್ರತಿಜ್ಞೆ ಮಾಡಿದೆ. ಜೊತೆಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡುವ ಯೋಜನೆಯನ್ನು ಬಡವರಿಗಾಗಿ ರೂಪಿಸಿದೆ ಎಂದು ತಿಳಿಸಿದರು.

ಕುಡಿಯುವ ಗುಣಮಟ್ಟದ ನೀರು ಹಳ್ಳಿಯ ಕೊನೆಯ ವ್ಯಕ್ತಿಗೂ ಸಿಗಬೇಕು ಎಂಬುದು ನಮ್ಮ ಗುರಿ, ಘೋಷಣೆ ಮತ್ತು ಕಾರ್ಯಯೋಜನೆಯಾಗಿತ್ತು. ಶುದ್ಧ ನೀರು ಮೂತ್ರಶಾಸ್ತ್ರ ಸಂಬಂಧಿ ರೋಗಗಳಿಗಷ್ಟೇ ಅಲ್ಲ, ಒಟ್ಟಾರೆ ಆರೋಗ್ಯ ಮತ್ತು ನೀರಿನಿಂದ ಹರಡುವ ರೋಗಗಳಿಗೆ ರಾಮಬಾಣ ಎಂದರು.

ಒಂದು ಕಾಲದಲ್ಲಿ ಮೂತ್ರಪಿಂಡ ಕಸಿ ಮಾಡುವ ವೈದ್ಯರು ಎಂಟು ದಿನಕ್ಕೊಮ್ಮೆ ಪೊಲೀಸ್ ಠಾಣೆಗೆ ಹೋಗಿ ಭೇಟಿಯಾಗಬೇಕಾದ ಕಾಲವಿತ್ತು. ಕಸಿಯನ್ನು ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಈಗ ಶವದಾನದ ಮೂಲಕ ಅಂಗಾಂಗ ಕಸಿ (ಕಾಡವರ್ ಟ್ರಾನ್ಸ್‌ಪ್ಲಾಂಟೇಶನ್) ನಡೆಯುತ್ತಿದೆ. ಇದಕ್ಕೆ ಅಗತ್ಯವಿರುವ ಸರ್ಕಾರದ ನೀತಿ ಬದಲಾವಣೆ ಮಾಡಿದ್ದು ಇನ್ನೂ ಏನಾದರೂ ಅಗತ್ಯವಿದ್ದರೆ, ಕರ್ನಾಟಕ ಮೂತ್ರಶಾಸ್ತ್ರ ಸಂಘ ಪಟ್ಟಿ ಮಾಡಿಕೊಟ್ಟರೆ ಸರ್ಕಾರದ ಮೂಲಕ ಅದನ್ನು ಸಾಕಾರಗೊಳಿಸುವ ಭರವಸೆ ನೀಡಿದರು.

ಡಾ. ಶಾಂತನು ಭಟ್ಟಾಚಾರ್ಯ, ಡಾ. ಎಸ್.ಐ. ನೀಲಿ, ಡಾ. ಭರತ್ ಭೂಷಣ್, ಡಾ. ನಾಗನೂರ, ಡಾ. ಬಸವರಾಜ ಎಂ. ಆಲೂರ ಡಾ.ಭೂಸರಡ್ಡಿ, ಡಾ. ಪ್ರವೀಣ ಡಂಬಳ, ಡಾ. ಪವನಕುಮಾರ ಕೋಳಿವಾಡ ಸೇರಿದಂತೆ ವೈದ್ಯರು ಇದ್ದರು. ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಶರಣ್ ಆಲೂರ ಸ್ವಾಗತಿಸಿದರು. ಡಾ. ವೀನಿ ಚಾವ್ಲಾ ಹಾಗೂ ಡಾ. ಅರವಿಂದ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಅವಿನಾಶ ಓದುಗೌಡರ ವಂದಿಸಿದರು.