ಸಾರಾಂಶ
ಗದಗ: ಗದಗ-ಬೆಟಗೇರಿ ಕುಡಿಯುವ ನೀರಿನ ಅವ್ಯವಸ್ಥೆ ಗಂಭೀರವಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಪೂರೈಕೆ ವಿಷಯವಾಗಿ ಕಾರ್ಯಗಳ ಪಟ್ಟಿ ತಯಾರು ಮಾಡಲಾಗಿದೆ. ಶೀಘ್ರವೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಬುಧವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಕುರಿತಂತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.ಸದ್ಯ ಗದಗ ನಗರಕ್ಕೆ 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು. ಮುಂಬರುವ ಫೆಬ್ರುವರಿ ಅಂತ್ಯಕ್ಕೆ 4 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ನೀರು ಪೂರೈಕೆ ವಿಷಯ ಗಂಭೀರವಾಗಿ ತೆಗೆದುಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ. ನಗರದ ತಿಲಕ್ ಪಾರ್ಕ್ ನಲ್ಲಿ ಓವರ್ ಹೆಡ್ ಟ್ಯಾಂಕ್ ಸ್ವಚ್ಛತೆ ಕಾರ್ಯ ಮಾಡಲಾಗುತ್ತಿದೆ ಎಂದರು.
ತುಂಗಭದ್ರಾ ನೀರು ಹಸಿರು ಬಣ್ಣ: ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ಪಾತ್ರದ ಕೊರ್ಲಹಳ್ಳಿ ಮತ್ತು ಗಂಗಾಪೂರ ಗ್ರಾಮಗಳ ವ್ಯಾಪ್ತಿಯ ನೀರು ಹಸಿರು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಿ ಜಿಲ್ಲಾಡಳಿತ ಈಗಾಗಲೇ ತಾಲೂಕಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಈ ವಿಷಯದ ಬಗ್ಗೆ ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿತ್ತು. ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವಾಗಿರುವ ಅಂಶ ಪತ್ತೆ ಹಚ್ಚಲು ನದಿ ನೀರಿನ ಮಾದರಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷಿಸಲಾಗಿದ್ದು ಈ ನೀರು ಕುಡಿಯಲು ಯೋಗ್ಯವಿಲ್ಲವೆಂದು ವರದಿ ನೀಡಿದ್ದು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿಜಯನಗರ ಶುಗರ್ ಪ್ರೈವೇಟ್ ಲಿಮಿಟೆಡ್‌ನವರು ಕಾರ್ಖಾನೆಯ ತ್ಯಾಜ್ಯ ನದಿಗೆ ನೀರು ಬಿಡುಗಡೆ ಮಾಡದಂತೆ ನಿರ್ಬಂಧಿಸಿದ್ದಾರೆ. ಈ ಕುರಿತು ಸ್ಥಳ ಪರಿಶೀಲನೆಗೆ ಜಿಲ್ಲಾಧಿಕಾರಿಗಳ ಹಂತದಲ್ಲಿ ತಂಡ ಭೇಟಿ ನೀಡಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಗ್ರಾಮಸ್ಥರು ಆತಂಕ ಪಡುವ ಅವಶ್ಯತೆ ಇಲ್ಲ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್,ಎಸ್ಪಿ ಬಿ.ಎಸ್.ನೇಮಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಲಕ್ಕುಂಡಿಯ ಸ್ತಬ್ದ ಚಿತ್ರ : ಲಕ್ಕುಂಡಿಯು ಶಿಲ್ಪಕಲೆಯ ತೊಟ್ಟಲು ಎಂದರೆ ಅತಿಶಯೋಕ್ತಿಯಲ್ಲ. ದೆಹಲಿಯ ಗಣರಾಜ್ಯೋತ್ಸವ ಪರೇಡ್‌ಗೆ ಲಕ್ಕುಂಡಿಯ ಬ್ರಹ್ಮ ಜಿನಾಲಯದ ಸ್ತಬ್ದ ಚಿತ್ರವು ಆಯ್ಕೆಯಾಗಿದ್ದು ಪೂರ್ವ ಸಿದ್ಧತೆ ಅಂತಿಮ ಹಂತದಲ್ಲಿದೆ. ಇದು ಗದಗ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.ಮೈಕ್ರೋ ಫೈನಾನ್ಸ್ ನೂತನ ಕಾಯ್ದೆ ಜಾರಿಗೆ ಕ್ರಮ: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಂಧೆ ಹಾಗೂ ಮೀಟರ್ ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕಲು ನೂತನ ಕಾಯ್ದೆ ಜಾರಿ ತರಲು ಸರ್ಕಾರ ನಿರ್ಧರಿಸಿದೆ. ಮುಂದಿನ ಅಧಿವೇಶನದಲ್ಲಿಯೇ ವಿಧೇಯಕ ಮಂಡಿಸಲಾಗುವುದು. ಬಡವರ ಮಧ್ಯಮ ವರ್ಗದವರ ಶೋಷಣೆ ತಡೆಗಟ್ಟುವುದು ಹಾಗೂ ಅವರನ್ನು ಸಂರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.