ಸಾರಾಂಶ
ಗದಗ: ಅತ್ಯಂತ ಕುತೂಹಲ ಕೆರಳಿಸಿದ್ದ, ಜುಲೈ 24ರಂದೇ 1ನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಪೂರ್ಣಗೊಳಿಸಿದ್ದ ಗದಗ ಬೆಟಗೇರಿ ನಗರಸಭೆಯ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಸೋಮವಾರ ರಾಜ್ಯ ಸರ್ಕಾರ ಪ್ರಕಟಿಸಿದ್ದು, ಜಿಲ್ಲೆಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಗದಗ ಬೆಟಗೇರಿ ಸೇರಿದಂತೆ ರಾಜ್ಯದ 61 ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಮೀಸಲಾತಿ ನಿಗದಿಗೊಳಿಸಿ ಆದೇಶ ಹೊರಡಿಸಲಾಗಿದೆ.ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಬಹುಮತವನ್ನು ಹೊಂದಿದ್ದು, ಒಟ್ಟು 35 ಸದಸ್ಯ ಬಲ ನಗರಸಭೆಯಲ್ಲಿ ಬಿಜೆಪಿ 18 ಸದಸ್ಯರನ್ನು ಹೊಂದಿದ್ದು, ಅವರಲ್ಲಿ 9 ಮಹಿಳಾ ಸದಸ್ಯರು, 9 ಪುರುಷರು ಆಯ್ಕೆಯಾಗಿದ್ದಾರೆ. ಎಲ್ಲ 18 ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಇರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.ವಿರೋಧ ಪಕ್ಷವಾಗಿರುವ ಕಾಂಗ್ರೆಸ್ಗೆ ಬಹುತಕಕ್ಕೆ ಕೇವಲ 1 ಸ್ಥಾನ ಕಡಿಮೆ ಇದ್ದು, 17 ಸದಸ್ಯರಿದ್ದಾರೆ. ಮೊದಲ 30 ತಿಂಗಳ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ವೇಳೆಯಲ್ಲಿಯೂ ಕಾಂಗ್ರೆಸ್, ಗದಗ ಶಾಸಕ ಎಚ್.ಕೆ. ಪಾಟೀಲ ಸೇರಿದಂತೆ ವಿಪ ಸದಸ್ಯರ ಮತ ಬಳಕೆ ಮಾಡಿಕೊಂಡು ಅಧಿಕಾರ ಹಿಡಿಯುವ ಭಾರೀ ಪ್ರಯತ್ನವನ್ನು ಮಾಡಿತ್ತು. ಆಗ ಬಿಜೆಪಿಯೂ ಅಂದು ಹಾವೇರಿ ಸಂಸದರಾಗಿದ್ದ ಶಿವಕುಮಾರ ಉದಾಸಿ ಮತ ಬಳಕೆ ಮಾಡಿಕೊಂಡು ಅಧಿಕಾರ ಹಿಡಿದಿತ್ತು.
ಬದಲಾದ ಕಾಲ ಘಟ್ಟದಲ್ಲಿ ಹಿಂದಿನ ಅವಧಿಯಲ್ಲಿ ಬಿಜೆಪಿಯಿಂದ ಅಧ್ಯಕ್ಷರಾಗಿ ಅಧಿಕಾರ ನಡೆಸಿದವರು ಹಾಗೂ ಅವರ ಕುಟುಂಬದ ಹಸ್ತಕ್ಷೇಪದಿಂದಾಗಿ ಬಹುಮತ ಹೊಂದಿರುವ ಬಿಜೆಪಿಯಲ್ಲಿ ಹಲವಾರು ಜನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ, ವಿರೋಧ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವ ಬಲವಾದ ಚರ್ಚೆಗಳು ಪ್ರಚಲಿತದಲ್ಲಿದ್ದವು. ಈಗ ನೂತನ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು. ಸಹಜವಾಗಿಯೇ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲು ಪ್ರಯತ್ನಿಸುವುದರಲ್ಲಿ ಯಾವುದೇ ಸಂಶಯವಿಲ್ಲ.ಇದರೊಟ್ಟಿಗೆ ಜನರು ಕೊಟ್ಟಿರುವ ಅಧಿಕಾರವನ್ನು ಎರಡನೇ ಅವಧಿಗೆ ಉಳಿಸಿಕೊಳ್ಳುವಲ್ಲಿ ಬಿಜೆಪಿ ಶತ ಪ್ರಯತ್ನ ಮಾಡಬೇಕಿದೆ. ಕೊಂಚ ಎಡವಿದರೂ ಈ ಬಾರಿ ಕಾಂಗ್ರೆಸ್ ಅದರ ಲಾಭ ಪಡೆಯಲು ತುದಿಗಾಲ ಮೇಲೆ ನಿಂತಿದೆ. ಒಟ್ಟಿನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಎರಡೂ ಪಕ್ಷಗಳಲ್ಲಿ ಪೈಪೋಟಿ ಜೋರಾಗಲಿದೆ. ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಲಿದೆ. ಅಧ್ಯಕ್ಷ ಸಾಮಾನ್ಯ ಮಹಿಳೆ, ಎಸ್ಸಿ ಮಹಿಳೆಗೆ ಉಪಾಧ್ಯಕ್ಷ ಮೀಸಲು
ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಸೋಮವಾರ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಪಟ್ಟಣ ಪಂಚಾಯ್ತಿ ಒಟ್ಟು 19
ಸದಸ್ಯ ಸ್ಥಾನಗಳನ್ನ ಹೊಂದಿದ್ದು, 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15,ಬಿಜೆಪಿ 3 ಹಾಗೂ ಪಕ್ಷೇತರರು ಒಂದು ಸ್ಥಾನದಲ್ಲಿ ಗೆಲವು ಸಾಧಿಸಿದ್ದರು. 30 ತಿಂಗಳ ಮೊದಲನೆಅಧಿಕಾರ ಅವಧಿ ಮುಗಿದು ವರ್ಷವೇ ಕಳೆದಿದ್ದು, ಎರಡನೇ ಅವಧಿಗೆ ಮೀಸಲಾತಿ ಈಗಪ್ರಕಟವಾಗಿದೆ.