ಸಾರಾಂಶ
ನಗರಸಭೆ 54 ವಕಾರಗಳ ಲೀಸ್ ಅವಧಿ ವಿಸ್ತರಣೆ ವಿಷಯವಾಗಿ ಕೈಗೊಂಡ ಠರಾವು ನಕಲಿಯಾಗಿರುವುದು. ಇದರೊಟ್ಟಿಗೆ ಅಂದಿನ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಈ ಸಂಬಂಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು
ಗದಗ: ಗದಗ-ಬೆಟಗೇರಿ ನಗರಸಭೆಯ ನೂರಾರು ಕೋಟಿ ಬೆಲೆ ಬಾಳುವ ವಕಾರಗಳ ಲೀಸ್ ಅವಧಿ ವಿಸ್ತರಣೆಯ ಠರಾವು ನಕಲಿ ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ನಗರಸಭೆ 3 ಜನ ಬಿಜೆಪಿ ಸದಸ್ಯರ ಸದಸ್ಯತ್ವ ಅಮಾನತುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಗದಗ ಜಿಲ್ಲಾಧಿಕಾರಿಗಳು ಮತ್ತು ನಗರಸಭೆಯ ಪೌರಾಯುಕ್ತರು ಸಲ್ಲಿಸಿದ ಪ್ರಸ್ತಾವನೆಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ ಫೆ.13ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ಅವರ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದರು. ವಿಚಾರಣೆ ನಡೆದ ದಿನವೇ ಅಮಾನತು ಆದೇಶ ಹೊರಡಿಸಿದ್ದು, ಶನಿವಾರ ಆದೇಶದ ಅಧಿಕೃತ ಪ್ರತಿ ಲಭ್ಯವಾಗಿದೆ. ಕರ್ನಾಟಕ ಪೌರಸಭೆ ಅಧಿನಿಯಮ 1964 ಕಲಂ 41(1) ಅನ್ವಯ ಚುನಾಯಿತ ಪ್ರತಿನಿಧಿಗಳ ವಿರುದ್ಧ ವಿಚಾರಣೆ ನಡೆಸುವ ಅಧಿಕಾರ ಹೊಂದಿರುವ ಪ್ರಾದೇಶಿಕ ಆಯುಕ್ತರು, 3 ಜನ ಸದಸ್ಯರು ವಿಚಾರಣೆಗೂ ಹಾಜರಾಗಿ ತಮ್ಮ ವಿವರಣೆ ನೀಡಿದ್ದರು ಎನ್ನಲಾಗಿದೆ.ನಗರಸಭೆ 54 ವಕಾರಗಳ ಲೀಸ್ ಅವಧಿ ವಿಸ್ತರಣೆ ವಿಷಯವಾಗಿ ಕೈಗೊಂಡ ಠರಾವು ನಕಲಿಯಾಗಿರುವುದು. ಇದರೊಟ್ಟಿಗೆ ಅಂದಿನ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಈ ಸಂಬಂಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಪ್ರಾಥಮಿಕ ತನಿಖೆಯಲ್ಲಿ ಮೂವರು ಸದಸ್ಯರು ಸಹಿ ಮಾಡಿರುವುದು ದೃಢಪಟ್ಟಿದೆ. ಪ್ರಕರಣದ ವಿಚಾರಣೆಗೆ ತಡೆ ಕೋರಿ ಈ ಮೂವರು ಬಿಜೆಪಿ ಸದಸ್ಯರು ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ ಮೆಟ್ಟಿಲೇರಿದ್ದರು. ಆ ಎರಡೂ ನ್ಯಾಯಾಲಯಗಳಲ್ಲಿ ದೂರುದಾರರ ಅರ್ಜಿ ತಿರಸ್ಕರಿಸಲಾಗಿದೆ. ಅಲ್ಲದೇ ಈಚೆಗಷ್ಟೆ ತಮ್ಮ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದ್ದನ್ನು ಮೂವರು ಸದಸ್ಯರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯರು ತಮ್ಮ ಕರ್ತವ್ಯಗಳ ನಿರ್ವಹಣೆಯಲ್ಲಿ ದುರ್ವತನೆ ಮತ್ತು ಅಪಮಾನಕರ ರೀತಿಯಲ್ಲಿ ವರ್ತಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ಪೌರಸೇವೆಗಳ ಅಧಿನಿಯಮ 1964 ಕಲಂ 41 (1) (2) ರಂತೆ ನಗರಸಭೆ ಬಿಜೆಪಿ ಸದಸ್ಯರಾದ ಮಾಜಿ ಅಧ್ಯಕ್ಷೆ ಉಷಾ ದಾಸರ, ಅನಿಲ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ಅವರನ್ನು ಸದಸ್ಯತ್ವ ದಿಂದ ತೆಗೆದುಹಾಕಲು ಆದೇಶಿಸಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟಣ್ಣವರ ಆದೇಶ ಹೊರಡಿಸಿದ್ದಾರೆ.