ಪಾಲಿನ ಹಣ ಭರಿಸದ ಗದಗ-ಬೆಟಗೇರಿ ನಗರಸಭೆ !

| Published : Jul 27 2024, 12:45 AM IST

ಸಾರಾಂಶ

ಅಧಿಕಾರಿಗಳನ್ನು ಕೇಳಿದರೆ ನಗರಸಭೆಯಲ್ಲಿ ಹಲವಾರು ರೀತಿಯ ಸಮಸ್ಯೆ ಇರುತ್ತವೆ. ಅದರಲ್ಲಿಯೂ ತೆರಿಗೆ ಸಂಗ್ರಹದಲ್ಲಿ ಇಷ್ಟೊಂದು ಹಣ ಭರಿಸಲು ಕಷ್ಟ ಸಾಧ್ಯ

ಶಿವಕುಮಾರ ಕುಷ್ಟಗಿ ಗದಗ

ಗದಗ-ಬೆಟಗೇರಿ ಅವಳಿ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವದ ಜವಾಬ್ದಾರಿ ಹೊಂದಿರುವ ನಗರಸಭೆಯೇ ಇದುವರೆಗೂ ಕೆರೆ ನಿರ್ಮಾಣಕ್ಕಾಗಿ ತಾನೇ ಒಪ್ಪಿಕೊಂಡ ಹಣ ಭರಿಸದೇ ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ಯೋಜನೆ ವಿಳಂಬವಾಗಿದ್ದು, ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.

ಕೆರೆ ನಿರ್ಮಾಣಕ್ಕಾಗಿ ಸರ್ಕಾರ ಅನುಮೋದನೆ ನೀಡಿರುವ ₹ 10 ಕೋಟಿ ಜತೆಗೆ ಹೆಚ್ಚುವರಿಯಾಗಿ ಬೇಕಾಗುವ ₹20.21 ಕೋಟಿ ಪ್ರಸ್ತಾವನೆಯನ್ನು ಕೆಯುಐಡಿಎಫ್ಸಿ ಸರ್ಕಾರಕ್ಕೆ ಸಲ್ಲಿಸುತ್ತದೆ. ಇದನ್ನು ನಗರಾಭಿವೃದ್ಧಿ ಇಲಾಖೆ ₹ 16.66 ಕೋಟಿ ಸರ್ಕಾರಿ ವೆಚ್ಚಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸುತ್ತದೆ. ಇದರೊಟ್ಟಿಗೆ ಇನ್ನುಳಿದ ಬಾಕಿ ಹಣ ₹ 3.55 ಕೋಟಿ ಅನುದಾನವನ್ನು ಅನುಷ್ಠಾನ ಪ್ರಾಧಿಕಾರವಾಗಿರುವ ಗದಗ -ಬೆಟಗೇರಿ ನಗರಸಭೆ ಭರಿಸಬೇಕು ಎಂದು ಗದಗ ಬೆಟಗೇರಿ ನಗರಸಭೆಗೆ ಏಪ್ರಿಲ್‌ 27, 2021 ರಂದು ಪತ್ರ ರವಾನಿಸಿದೆ.

ಒಪ್ಪಿಕೊಂಡಿದ್ದ ನಗರಸಭೆ: ಕೆಯುಐಡಿಎಫ್ಸಿಯಿಂದ ನಗರಸಭೆಗೆ ಬಂದಿದ್ದ ಪತ್ರ ಆಧಾರವಾಗಿಟ್ಟುಕೊಂಡು ಗದಗ-ಬೆಟಗೇರಿ ನಗರಸಭೆಯ ಆಡಳಿತ ಮಂಡಳಿಯು ತನ್ನ ಪಾಲಿನ ₹ 3.55 ಕೋಟಿ ಭರಿಸಲು ನಿರ್ಧರಿಸಿ, ಅನುದಾನ ವ್ಯವಸ್ಥೆಗೆ ಸಂಬಂಧಿಸಿದಂತೆ ನಗರಸಭೆಯ ತೆರಿಗೆ ಹಣದ ಸಾಮಾನ್ಯ ನಿಧಿಯಲ್ಲಿ ಹಾಗೂ 14 ನೇ ಹಣಕಾಸು ಉಳಿಕೆ ಮೊತ್ತ, ಎಸ್ಎಫ್ಸಿ, ಮುಕ್ತನಿಧಿ ಮತ್ತು ಎಸ್ಎಫ್ ಸಿ ಕ್ರೊಢೀಕರಿಸಿ ಭರಿಸಲಾಗುವುದು. ಟೆಂಡರ್ ಪ್ರೀಮಿಯಂ ಬೇರೆ ಯಾವುದೇ ಕಾರಣದಿಂದ ಹೆಚ್ಚುವರಿ ಆಗುವ ಮೊತ್ತ ಕ್ರೊಢೀಕೃತ ಅನುದಾನದ ಮೂಲಕ ಭರಿಸಲಾಗುವುದು ಎಂದು 2021 ರ ಜೂ.25 ರಂದು ಕೆಯುಐಡಿಎಫ್ಸಿಗೆ ಬರೆದಿರುವ ಪತ್ರದಲ್ಲಿ ಒಪ್ಪಿಗೆ ಸೂಚಿಸಿದೆ. ಅದರೊಟ್ಟಿಗೆ ಠರಾವು ಕಾಫಿ ಲಗತ್ತಿಸಿದೆ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ನಗರಸಭೆಯಲ್ಲಿ ಹಲವಾರು ರೀತಿಯ ಸಮಸ್ಯೆ ಇರುತ್ತವೆ. ಅದರಲ್ಲಿಯೂ ತೆರಿಗೆ ಸಂಗ್ರಹದಲ್ಲಿ ಇಷ್ಟೊಂದು ಹಣ ಭರಿಸಲು ಕಷ್ಟ ಸಾಧ್ಯ. ತೆರಿಗೆ ಹಣ ಬೇರೆ ಅವಶ್ಯಕ ಕಾರ್ಯಗಳಿಗೆ ಬಳ‍ಕೆಯಾಗಿರುವ ಹಿನ್ನೆಲೆಯಲ್ಲಿ ಹಣ ಭರಿಸಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಾರೆ.

ಈ ಬಗ್ಗೆ ಪರಿಶೀಲಿಸಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ ತಿಳಿಸಿದ್ದಾರೆ.