ಶಿವಕುಮಾರ ಕುಷ್ಟಗಿ
ಗದಗ: ಸ್ವಚ್ಛ ಭಾರತ ಯೋಜನೆಯಡಿ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಅದರ ಭಾಗವಾಗಿಯೇ 2019ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಆದರೆ ವಾಸ್ತವದಲ್ಲಿ ಇದುವರೆಗೂ ಬಯಲು ಬಹಿರ್ದೆಸೆ ಎನ್ನುವುದು ಜಿಲ್ಲೆಯ ಗ್ರಾಮೀಣ ಬದುಕಿನಲ್ಲಿ ಇಂದಿಗೂ ಹಾಸು ಹೊಕ್ಕಾಗಿದೆ.ಶೌಚ ಸಂಕಟ ಎನ್ನುವುದು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತೀರಾ ಸಾಮಾನ್ಯ ಸಂಗತಿ ಎನ್ನುವಂತಾಗಿದ್ದು, ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಜನಸಂಖ್ಯೆ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ಸೂಕ್ತವಾದ ಅನುದಾನ ಲಭ್ಯತೆ ಇಲ್ಲದೇ ಇರುವುದರಿಂದಾಗಿ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರಸಕ್ತ ಮಾರ್ಚ್ ಅಂತ್ಯದವರೆಗೆ 30 ಸಾವಿರಕ್ಕೂ ಅಧಿಕ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಬೇಕಿದೆ.
ಹಿನ್ನೆಲೆ: 2012ರ ನಿರ್ಮಲ ಭಾರತ ಯೋಜನೆ ಮತ್ತು 2012ರ ಬೇಸಿಕ್ ಲೈನ್ ಸರ್ವೇ ಹಾಗೂ 2014ರಲ್ಲಿ ಜಾರಿ ಮಾಡಲಾದ ಸ್ವಚ್ಛ ಭಾರತ ಯೋಜನೆಯ ಪ್ರಕಾರ ಕುಟುಂಬಗಳನ್ನು ಆಧರಿಸಿ ಜಿಲ್ಲೆಯಲ್ಲಿ 1.35 ಲಕ್ಷ ಕುಟುಂಬಗಳಿಗೆ ಶೌಚಾಲಯಗಳಿಲ್ಲ ಎಂಬುದು ತಿಳಿದುಬಂದಿತ್ತು.ಈ ಹಿನ್ನೆಲೆ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಇದ್ದ ಶೌಚಾಲಯಗಳ ಬಳಕೆಯ ಪ್ರಮಾಣವೂ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಶೌಚಾಲಯ ಬಳಕೆ ಮಾಡುವ ಅಭಿಯಾನ ಮಾಡಿ, ಬಯಲಲ್ಲಿ ಶೌಚ ಮಾಡುವವರಿಗೆ ಸೀಟಿ ಹೊಡೆಯುವುದು, ಗುಲಾಬಿ ಹೂವು ನೀಡುವುದು, ಶಾಲೆಗಳಲ್ಲಿ ಮಕ್ಕಳಿಗೆ ತಿಳಿವಳಿಕೆ ನೀಡಿ ಶೌಚಾಲಯ ನಿರ್ಮಾಣ ಮತ್ತು ಬಳಕೆಗೆ ಉತ್ತೇಜನ ನೀಡಲಾಗಿತ್ತು.
ವೈಯಕ್ತಿಕ ಶೌಚಾಲಯ: 2019ರಲ್ಲಿ ಘೋಷಣೆಯಾದ ನಂತರ ಸ್ಥಗಿತಗೊಂಡಿದ್ದ ಸಿಟಿಜನ್ ಪೋರ್ಟಲ್‌ನ 2022- 23ರಿಂದ ಮತ್ತೆ ಪ್ರಾರಂಭವಾಗಿ ಶೌಚಾಲಯಗಳಿಲ್ಲದ ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಬೇಕಾದ ಅನುದಾನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಎಸ್ಸಿ, ಎಸ್ಟಿಗೆ ₹20 ಸಾವಿರ, ಇತರೆ ಸಮುದಾಯಗಳಿಗೆ ₹12 ಸಾವಿರ ಅನುದಾನ ನೀಡಲಾಗುತ್ತಿದೆ. ಈ ಹಿನ್ನೆಲೆ ಹೊಸದಾಗಿ ಶೌಚಾಲಯಕ್ಕಾಗಿ 30 ಸಾವಿರ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿವೆ.
ಮನಸ್ಥಿತಿ ಬದಲಾಗಲಿ: ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸಿದ್ದರೂ ಬಯಲಿಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ಶೌಚಾಲಯ ಬಳಸುವ ಮನಸ್ಥಿತಿಗೆ ಕೆಲವರು ಹೊಂದಿಕೊಂಡಿಲ್ಲ, ಪೂರ್ಣ ಪ್ರಮಾಣದಲ್ಲಿ ಉಪಯೋಗಿಸುತ್ತಿಲ್ಲ. ಕೆಲ ಮನೆಗಳಲ್ಲಿ ಶೌಚಾಲಯ ನಿರ್ಮಾಣದ ಜಾಗದ ಕೊರತೆಯಿಂದ ಶೌಚಾಲಯಗಳು ನಿರ್ಮಾಣಗೊಂಡಿಲ್ಲ. ಈಗಾಗಲೇ ಶೇ. 80 ಉತ್ತಮ ಸಾಧನೆ ಮಾಡಿದ್ದೇವೆ. ಶೌಚಾಲಯ ಬಳಕೆಗೆ ಜನರ ಮನಸ್ಥಿತಿಯೂ ಬದಲಾಗಬೇಕಿದೆ ಎನ್ನುತ್ತಾರೆ ಗ್ರಾಪಂ ಮಟ್ಟದ ಅಧಿಕಾರಿಗಳು (ಪಿಡಿಒಗಳು).ಜಿಲ್ಲೆಯ ಪ್ರತಿ ಗ್ರಾಪಂಗಳಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಹಂತ 1ರಲ್ಲಿ (2018-19ನೇ ಸಾಲಿನಲ್ಲಿ) ಘೋಷಣೆ ಮಾಡಲಾಗಿತ್ತು. ಅಂದಿನ ಅಂಕಿ ಸಂಖ್ಯೆಗಳು ಮತ್ತು ಕುಟುಂಬಗಳ ಸಂಖ್ಯೆಗಳ ಆಧಾರವಾಗಿಟ್ಟುಕೊಂಡು 2019ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗಿತ್ತು. ನಂತರ ಈ ಕುರಿತು ವ್ಯಾಪಕ ಪ್ರಚಾರ ಕೊರತೆ, ಇಲಾಖೆಗಳ ನಿರ್ಲಕ್ಷ್ಯದಿಂದ ಜಿಲ್ಲೆಯ 7 ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ಸಾಮಾನ್ಯ ಎನ್ನುವಂತಿದೆ.ತಿಳಿವಳಿಕೆ ಕಾರ್ಯಕ್ರಮ: 2019ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆಯಾದ ನಂತರ ಕುಟುಂಬಗಳ ಸಂಖ್ಯೆ ಹೆಚ್ಚಾಗಿವೆ. ಹೊಸ ಮನೆಗಳು ನಿರ್ಮಾಣವಾಗಿವೆ. ಪ್ರತಿಯೊಂದು ಕುಟುಂಬಗಳು ಶೌಚಾಲಯ ಹೊಂದಬೇಕು ಎಂಬ ಆಶಯದಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಅನೇಕ ತಿಳಿವಳಿಕೆ ಕಾರ್ಯಕ್ರಮಗಳು ಜರುಗುತ್ತಿವೆ. ಶೌಚಾಲಯ ನಿರ್ಮಾಣಕ್ಕೆ ಮುಂದೆ ಬರುವವರಿಗೆ ಅನುದಾನ ನೀಡಲಾಗುತ್ತಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ತಿಳಿಸಿದರು.