ಸಾರಾಂಶ
ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘಗಳು ಸಾರ್ವಜನಿಕರ ಜೀವನ ಮಟ್ಟ ಎತ್ತರಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ
ಲಕ್ಷ್ಮೇಶ್ವರ: ಗದಗ ಜಿಲ್ಲೆಯಲ್ಲಿ ಸಹಕಾರಿ ರಂಗ ಇನ್ನೂ ಬಲಿಷ್ಠವಾಗಿದೆ. ಸಹಕಾರಿ ರಂಗದಲ್ಲಿ ಅಡರಕಟ್ಟಿ ಗ್ರಾಮದ ಪ್ರಾಥಮಿಕ ಸಹಕಾರಿ ಸಂಘವು 75 ವರ್ಷಗಳ ದೀರ್ಘಕಾಲ ನಡೆದು ಬಂದಿರುವುದು ಸಣ್ಣ ಸಾಧನೆಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬುಧವಾರ ಸಮೀಪದ ಅಡರಕಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘಗಳು ಸಾರ್ವಜನಿಕರ ಜೀವನ ಮಟ್ಟ ಎತ್ತರಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ. ಸಹಕಾರಿ ಸಂಸ್ಥೆಗಳು ಸುಲಭದಲ್ಲಿ ರೈತರಿಗೆ ಹಾಗೂ ಜನರಿಗೆ ಸಾಲ ಹಾಗೂ ಮತ್ತಿತರ ಸೌಲಭ್ಯ ನೀಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ನೀಡಿದೆ. ಬೆವರು ಸುರಿಸಿ ದೇಶಕ್ಕೆ ಅನ್ನ ನೀಡುವ ರೈತರು ಇನ್ನೂ ಬಡವನಾಗಿರುವುದು ನೋವಿನ ಸಂಗತಿಯಾಗಿದೆ. ರೈತರ ಜೀವನಮಟ್ಟ ಸುಧಾರಣೆಗೆ ಸರ್ಕಾರಗಳು ಮುಂದಾಗಬೇಕು ಎಂದು ಹೇಳಿದ ಅವರು, ದೇಶ ಸಂಪತ್ತು ಕೇವಲ ಶೇ. 5ರಷ್ಟು ಜನರ ಬಳಿ ಶೇಖರಣೆಯಾಗಿರುವುದು ಅಸಮಾನತೆಯ ಸಂಕೇತವಾಗಿದೆ. ಸರ್ಕಾರಗಳು ಸಂಪತ್ತಿನ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ದುಡಿಯುವ ವರ್ಗದ ಜನರ ಸುಧಾರಣೆಗೆ ಮುಂದಾಗಬೇಕು ಎಂದು ಹೇಳಿದರು.ಸಭೆಯಲ್ಲಿ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಸ್ವಾಮಿಗಳು, ಗಂಜಿಗಟ್ಟಿಯ ವೈಜನಾಥ ಶಿವಲಿಂಗ ಸ್ವಾಮಿಗಳು, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಸ್ವಾಮಿಗಳು ಹಾಗೂ ಸಂಕದಾಳದ ಹಾಲ ಸ್ವಾಮಿಗಳು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಹಾಗೂ ಸಹಕಾರಿ ಸಂಸ್ಥೆಯ ಅನೇಕ ಪದಾಧಿಕಾರಿಗಳು ಇದ್ದರು.