ಗದಗ-ಹಾವೇರಿ ಏಕ ಮಾದರಿ ಕಾರ್ಯಾಚರಣೆ, ಸಮನ್ವಯ ಸಮಿತಿಯಲ್ಲಿ ನಿರ್ಧಾರ

| Published : Mar 24 2024, 01:36 AM IST

ಗದಗ-ಹಾವೇರಿ ಏಕ ಮಾದರಿ ಕಾರ್ಯಾಚರಣೆ, ಸಮನ್ವಯ ಸಮಿತಿಯಲ್ಲಿ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಲೋಕಸಭಾ ಕ್ಷೇತ್ರದ ಗದಗ-ಹಾವೇರಿ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು , ಮಾದರಿ ನೀತಿ ಸಂಹಿತೆ ಅನುಷ್ಠಾನ ಅಧಿಕಾರಿಗಳ ಸಮನ್ವಯ ಸಭೆ ನಡೆಸಿ, ಸುಗಮ ಚುನಾವಣೆಗಾಗಿ ಉಭಯ ಜಿಲ್ಲೆಗಳಲ್ಲಿ ಏಕ ಮಾದರಿಯ ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಗದಗ-ಹಾವೇರಿ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು , ಮಾದರಿ ನೀತಿ ಸಂಹಿತೆ ಅನುಷ್ಠಾನ ಅಧಿಕಾರಿಗಳ ಸಮನ್ವಯ ಸಭೆ ನಡೆಸಿ, ಸುಗಮ ಚುನಾವಣೆಗಾಗಿ ಉಭಯ ಜಿಲ್ಲೆಗಳಲ್ಲಿ ಏಕ ಮಾದರಿಯ ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ೨೮ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ. ರಾಜ್ಯ ಚುನಾವಣಾ ಆಯೋಗದಿಂದ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಚೆಕ್ ಪೋಸ್ಟ್‌ಗಳ ಮೇಲೆ ನೇರ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿದೆ. ಪ್ಲೈಯಿಂಗ್ ಸ್ಕ್ವಾಡ್ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಯಾವ ವಾಹನ ಎಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಕಣ್ಗಾವಲು ಇರಿಸಲಾಗಿದೆ. ಚುನಾವಣಾ ದೂರುಗಳು ಸ್ವೀಕರಿಸಿದ ತಕ್ಷಣ ಪ್ಲೈಯಿಂಗ್ ಸ್ಕ್ವಾಡ್‌ಗೆ ರವಾನಿಸಲಾಗುವುದು. ಕರೆ ಸ್ವೀಕರಿಸಿದ ತಕ್ಷಣ ತಂಡ ಸ್ಥಳಕ್ಕೆ ಹಾಜರಿರಲಿದೆ ಎಂದು ತಿಳಿಸಿದರು.

ಚುನಾವಣಾ ದೂರು ಹಾಗೂ ಮಾಹಿತಿ ಸ್ವೀಕಾರ, ಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳು ಹಾಗೂ ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮೇಲೆ ನಿಗಾವಹಿಸಲು ಎಂ.ಸಿ.ಎಂ.ಸಿ. ತಂಡ, ಚೆಕ್ ಪೋಸ್ಟ್‌ಗಳ ಕಾರ್ಯಾಚರಣೆಯನ್ನು ವೀಕ್ಷಿಸಲು ಕೇಂದ್ರೀಕೃತ ವ್ಯವಸ್ಥೆಯುಳ್ಳ ಕಂಟ್ರೋಲ್ ರೂಂಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸ್ಥಾಪಿಸಲಾಗಿದೆ. ದಿನದ ೨೪ ತಾಸು ಕಾರ್ಯನಿರ್ವಹಿಸಲು ಮೂರು ಪಾಳೆಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದರು.

೮೫ಕ್ಕಿಂತ ಹೆಚ್ಚು ವಯೋಮಾನದ ಹಿರಿಯ ಮತದಾರರು ಹಾಗೂ ಶೇ. ೪೦ರಷ್ಟು ವಿಕಲತೆ ಹೊಂದಿರುವ ಅಂಕವಿಕಲ ಮತದಾರರು ಅಂಚೆ ಮತದಾನ ಮಾಡಲು ಮನೆ ಮನೆಗೆ ತೆರಳಿ ಪ್ರಪತ್ರ ನೀಡಲಾಗುವುದು. ಬೇಡಿಕೆ ಪತ್ರ ಪಡೆದ ಮತದಾರರು ಮನೆಯಲ್ಲೇ ಮತದಾನ ಮಾಡಲು ಇಚ್ಛಿಸಿದಲ್ಲಿ ನಮೂನೆ ೧೨ಡಿ ಭರ್ತಿಮಾಡಿದ ಅರ್ಜಿಯನ್ನು ಬಿಎಲ್‌ಒಗಳಿಗೆ ಹಿಂದಿರುಗಿಸಬೇಕು. ಸೆಕ್ಟರ್ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಈ ಕಾರ್ಯದ ಮೇಲ್ವಿಚಾರಣೆ ಮಾಡಲಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ಎಲೆಕ್ಟ ಒನ್ ಮೊಬೈಲ್ ಆ್ಯಪ್‌ನಲ್ಲಿ ಇಂದೀಕರಿಸುತ್ತಾರೆ. ಇಂತಹ ಮತದಾರರಿಗೆ ಮೂರು ದಿನಗಳ ಕಾಲ ಮತದಾನಕ್ಕೆ ಸಮಯ ನಿಗದಿಪಡಿಸಲಾಗುವುದು. ಮೊದಲ ದಿನ ಸಾಧ್ಯವಾಗದಿದ್ದರೆ ಮತ್ತೊಂದು ದಿನ ಸಮಯ ನಿಗದಿಪಡಿಸಲಾಗುವುದು. ಈ ಸಮಯದಲ್ಲಿ ಮತ ಚಲಾಯಿಸಬೇಕು. ಇಂತಹವರು ಮತಗಟ್ಟೆಯಲ್ಲಿ ಮತ ಚಲಾಯಿಸಲು ಅವಕಾಶ ಇರುವುದಿಲ್ಲ ಎಂದರು.

ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಜಿ.ಪಂ. ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ ಉಪಸ್ಥಿತರಿದ್ದರು.