ಗದಗ: ಅವಳಿ ನಗರದಲ್ಲಿ ಜೀವಜಲಕ್ಕೆ ಹಾಹಾಕಾರ!

| Published : May 20 2024, 01:42 AM IST / Updated: May 20 2024, 12:17 PM IST

ಸಾರಾಂಶ

ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಕ್ರಮ ಪ್ರಾರಂಭಿಸಿದ್ದರೂ ಬಿರು ಬೇಸಿಗೆಯ ಅಬ್ಬರದಿಂದ ಜನರ ದಾಹ ತೀರಿಸಲು ಸಾಧ್ಯವೇ ಆಗದಂತಾಗಿದ್ದು

ಶಿವಕುಮಾರ ಕುಷ್ಟಗಿ 

ಗದಗ :  ಮಳೆ ಕೊರತೆಯಿಂದ ಉಂಟಾಗಿರುವ ನೀರಿನ ಸಮಸ್ಯೆಗೆ ಜಿಲ್ಲೆಯ ಜನರು ಕಂಗೆಟ್ಟಿದ್ದಾರೆ. ಅದರಲ್ಲಿಯೂ ಅತೀ ಹೆಚ್ಚು ಬಾಧಿತವಾಗಿರುವುದು ಜಿಲ್ಲಾ ಕೇಂದ್ರವಾಗಿರುವ ಗದಗ-ಬೆಟಗೇರಿ ಅವಳಿ ನಗರದ ಸಾರ್ವಜನಿಕರು. ನಿತ್ಯ ಕೊಡ ನೀರಿಗೂ ಪರಿತಪಿಸುತ್ತಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ತುಂಗಭದ್ರಾ ನದಿ ಪಾತ್ರದಲ್ಲಿ ಹನಿ ನೀರಿಲ್ಲದಿರುವುದು.

ಗದಗ-ಬೆಟಗೇರಿ ಅವಳಿ ನಗರದ 35 ವಾರ್ಡ್‌ಗಳು ಹಾಗೂ ಗದಗ ತಾಲೂಕಿನ 28 ಗ್ರಾಮಗಳಲ್ಲಿ ಸದ್ಯ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಕ್ರಮ ಪ್ರಾರಂಭಿಸಿದ್ದರೂ ಬಿರು ಬೇಸಿಗೆಯ ಅಬ್ಬರದಿಂದ ಜನರ ದಾಹ ತೀರಿಸಲು ಸಾಧ್ಯವೇ ಆಗದಂತಾಗಿದ್ದು, ಜನರು ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ನಿತ್ಯ 224 ಟ್ಯಾಂಕರ್ ನೀರು: ಗದಗ -ಬೆಟಗೇರಿ ಅವಳಿ ನಗರದಲ್ಲಿ 35 ವಾರ್ಡ್‌ಗಳಿದ್ದು, ವಾರ್ಡ್‌ಗೆ ಒಂದು ಟ್ಯಾಂಕರ್ ನಿಯುಕ್ತಿಗೊಳಿಸಿದ್ದು, ದಿನಕ್ಕೆ ಒಟ್ಟು 224 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಸದ್ಯ ಪೂರೈಕೆ ಮಾಡುತ್ತಿರುವ ನೀರಿನ ಪ್ರಮಾಣ ಮಾತ್ರ ಅವಳಿ ನಗರದ ಸಾರ್ವಜನಿಕರ ದಾಹ ನೀಗಿಸುತ್ತಿಲ್ಲ. ಬದಲಾಗಿ ದಿನ ಕಳೆದಂತೆ ನೀರಿನ ಬೇಡಿಕೆ ಹೆಚ್ಚತ್ತಲೇ ಇದ್ದು, ನಗರಸಭೆ ಅಧಿಕಾರಿಗಳು ನೀರು ಪೂರೈಕೆ ಪ್ರಮಾಣ ಇನ್ನಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ.

ನೀರು ಪೂರೈಕೆ ಪ್ರಯತ್ನ: ಗದಗ-ಬೆಟಗೇರಿ ಅವಳಿ ನಗರದ 35 ವಾರ್ಡ್‌ಗಳಲ್ಲಿ ಕಳೆದ ಮೇ.1 ರಂದು 28 ಟ್ರ್ಯಾಕ್ಟರ್ ಮೂಲಕ 190 ಟ್ಯಾಂಕರ್, ಮೇ. 2 ರಂದು 29 ಟ್ರ್ಯಾಕ್ಟರ್ ಮೂಲಕ 193, ಮೇ.3 ರಂದು 29 ಟ್ರ್ಯಾಕ್ಟರ್ ಮೂಲಕ 185 ಟ್ಯಾಂಕರ್, ಮೇ. 4 ರಂದು 27 ಟ್ರ್ಯಾಕ್ಟರ್ ಮೂಲಕ 151 ಟ್ಯಾಂಕರ್, ಮೇ. 5 ರಂದು 144, ಮೇ. 6 ರಂದು 204, ಮೇ. 7 ರಂದು 102, ಮೇ. 8 ರಂದು 197, ಮೇ. 9 ರಂದು 195, ಮೇ. 10 ರಂದು 170, ಮೇ. 11 ರಂದು 145, ಮೇ. 12 ರಂದು 151, ಮೇ. 13 ರಂದು 162, ಮೇ. 14 ರಂದು 121, ಮೇ. 15 ರಂದು 175 ಹಾಗೂ ಮೇ. 16 ರಂದು 224 ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ. ಮೇ 1ರಿಂದ 16 ರ ಇಲ್ಲಿವರೆಗೆ ಒಟ್ಟು 2709 ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ.

ಹಗಲು ರಾತ್ರಿ ಕಾಯುವುದು ಅನಿವಾರ್ಯ: ನಗರಸಭೆಯವರು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಪ್ರತಿ ವಾರ್ಡಿಗೊಂದು ಟ್ಯಾಂಕರ್ ನಿಯುಕ್ತಿ ಮಾಡಿದ್ದಾರೆ. ಆದರೆ ದೊಡ್ಡ ವಾರ್ಡಗಳ ಒಂದು ಭಾಗದಲ್ಲಿ ನೀರು ಪೂರೈಕೆಯಾದರೆ ಇನ್ನೊಂದು ಭಾಗದಲ್ಲಿನ ಜನರಿಗೆ ಮರಳಿ ಸರದಿ ಬರುವುದು ನಾಲ್ಕೈದು ದಿನಗಳ ನಂತರ ಹಾಗಾಗಿ ರಾತ್ರಿ ಹಗಲು ಎನ್ನದೇ ಕಾಯಬೇಕು, ಇನ್ನು ಟ್ಯಾಂಕರ್ ಬರುವ ನಾಲ್ಕೈದು ತಾಸು ಮೊದಲೇ ಅಲ್ಲಿ ಕೊಡಗಳನ್ನು ಇಟ್ಟುಕೊಂಡು ಸರದಿ ಕಾಯಬೇಕಾದ ಪರಿಸ್ಥಿತಿ ಅವಳಿ ನಗರದ ಜನರಿಗೆ ಎದುರಾಗಿದೆ. ಆದರೆ ಟ್ಯಾಂಕರ್ ಗಳಿಗೆ ಜಿಪಿಎಸ್ ಅಳವಡಿಸಿದ ಹಿನ್ನೆಲೆಯಲ್ಲಿ ನಿಗದಿತ ಸ್ಥಳಗಳಿಗೆ ನೀರು ತಲುಪುತ್ತಿರುವುದು ಕೊಂಚ ಸಮಾಧಾನದ ಸಂಗತಿಯಾಗಿದೆ.

ಕೈಕೊಡುತ್ತಿವೆ ಶುದ್ಧ ಕುಡಿವ ನೀರಿನ ಘಟಕ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿವ ನೀರಿನ ಪರಿಸ್ಥಿತಿ ಸುಧಾರಿಸಲು ಶುದ್ಧ ಕುಡಿವ ನೀರಿನ ಘಟಕಗಳು ಆಸರೆಯಾಗಿದ್ದವು. ಆದರೆ, ಅಂತರ್ಜಲಮಟ್ಟ ಕುಸಿತದಿಂದ ಕೊಳವೆಬಾವಿಗಳು ಸ್ಥಗಿತ, ಸರಿಯಾಗಿ ನಿರ್ವಹಣೆ ಇಲ್ಲದೇ ಇರುವ ಘಟಕಗಳ ಮೋಟರ್‌ಗಳ ದುರಸ್ತಿ, ಘಟಕಗಳಲ್ಲಿನ ನೀರು ಶುದ್ಧೀಕರಣ ಘಟಕಗಳ ರಿಪೇರಿ ಹೀಗೆ ಸಾಲು ಸಾಲು ಸಮಸ್ಯೆಗಳಿಂದ ಶುದ್ಧ ಕುಡಿವ ನೀರಿನ ಘಟಕಗಳೇ ನರಳುತ್ತಿವೆ.

ಅವಳಿ ನಗರದ 35 ವಾರ್ಡ್‌ಗಳಿಗೆ ಪ್ರತ್ಯೇಕ ಟ್ಯಾಂಕರ್‌ ನಿಗದಿಪಡಿಸಿ ಪ್ರತಿನಿತ್ಯ ವಾರ್ಡ್‌ಗೆ 7 ರಿಂದ 8 ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಜರುಗಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ 654 ಕೊಳವೆ ಬಾವಿಗಳಿದ್ದು, ಅವುಗಳಿಂದ ನಿರಂತರವಾಗಿ ನೀರೆತ್ತುವ ಕಾರ್ಯ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಿತ್ಯ 8 ಕ್ಕೂ ಹೆಚ್ಚಿನ ಕೊಳವೆ ಬಾವಿಗಳ ಮೋಟರ್‌ಗಳು ರಿಪೇರಿಗೆ ಬರುತ್ತಿವೆ. ಅವುಗಳನ್ನು ತಕ್ಷಣ ರಿಪೇರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ನಗರಸಭೆ ನೀರು ಪೂರೈಕೆ ಮಾಡುವಲ್ಲಿ ಎಲ್ಲ ಅಗತ್ಯ ಕ್ರಮ ಜರುಗಿಸಿದೆ ಎಂದು ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ ತಿಳಿಸಿದ್ದಾರೆ.