ಗದಗ: ಒಂದು ಕಡೆ ದಿನೇ ದಿನೆ ಏರಿಕೆಯಾಗುತ್ತಿರುವ ಇಂಧನ ಬೆಲೆಯಿಂದ ಕಂಗಾಲಾಗಿದ್ದ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿಯ ಬೆನ್ನಲ್ಲೇ ಇದೀಗ ಜಿಲ್ಲೆಯ ಪ್ರಮುಖ ಪೆಟ್ರೋಲ್ ಬಂಕ್‌ಗಳು ಬಂದ್ ಆಗುತ್ತಿದ್ದು, ಗ್ರಾಹಕರಿಗೆ ನೋ ಸ್ಟಾಕ್ ಶಾಕ್ ಎದುರಾಗಿದೆ.
ಕಳೆದ ಮೂರು ದಿನಗಳಿಂದಲೇ ಜಿಲ್ಲೆಯ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಇದೀಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.ನಗರದ ಅತ್ಯಂತ ಜನದಟ್ಟಣೆಯ ಪ್ರಮುಖ ವೃತ್ತಗಳಲ್ಲಿರುವ ಮೂರು ಪೆಟ್ರೋಲ್ ಬಂಕ್‌ಗಳು ಸಂಪೂರ್ಣವಾಗಿ ಬಂದ್ ಆಗಿವೆ. ನಗರದ ಮುಳಗುಂದ ನಾಕಾ, ಹಳೆಯ ಡಿಸಿ ಆಫೀಸ್ ಸರ್ಕಲ್ ಹಾಗೂ ಹೊಸ ಬಸ್ ನಿಲ್ದಾಣದ ಬಳಿ ಇರುವ ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಸಂಪೂರ್ಣ ಖಾಲಿಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಇಲ್ಲದ ಕಾರಣ ಬಂಕ್ ಸಿಬ್ಬಂದಿ ಮುಂಭಾಗದಲ್ಲೇ ನೋ ಸ್ಟಾಕ್ ಬೋರ್ಡ್ ತೂಗುಹಾಕಿದ್ದು, ವಾಹನ ಸವಾರರು ಇಂಧನಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಮೂಲಗಳ ಪ್ರಕಾರ, ಹುಬ್ಬಳ್ಳಿಯ ಮುಖ್ಯ ಡಿಪೋದಿಂದ ಗದಗಕ್ಕೆ ಬರಬೇಕಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಸ್ಟಾಕ್ ಸಕಾಲಕ್ಕೆ ತಲುಪದ ಹಿನ್ನೆಲೆ ತೀವ್ರ ಅಭಾವ ಸೃಷ್ಟಿಯಾಗಿದೆ ಎನ್ನಲಾಗಿದೆ.
ಗದಗ ನಗರ ಮಾತ್ರವಲ್ಲದೆ, ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳಾದ ಹುಬ್ಬಳ್ಳಿ ರಸ್ತೆ, ಕೊಪ್ಪಳ ರಸ್ತೆ ಹಾಗೂ ಬಾಗಲಕೋಟೆ ರಸ್ತೆಗೆ ಹೊಂದಿಕೊಂಡಿರುವ ಹೆದ್ದಾರಿ ಬಂಕ್‌ಗಳಲ್ಲಿಯೂ ಇದೇ ಸಮಸ್ಯೆ ಎದುರಾಗಿದ್ದು, ಲಾರಿ, ಬಸ್ ಹಾಗೂ ಸರಕು ಸಾಗಣೆ ವಾಹನಗಳ ಸವಾರರು ಕಂಗಾಲಾಗಿದ್ದಾರೆ.
ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಾದ ಶಿರಹಟ್ಟಿ, ಬೆಳ್ಳಟ್ಟಿ, ರೋಣ ಹಾಗೂ ನರಗುಂದ ಭಾಗಗಳಿಗೂ ವ್ಯಾಪಿಸಿದೆ. ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ರೈತರು ತಮ್ಮ ಕೃಷಿ ವಾಹನಗಳಿಗೆ ಡೀಸೆಲ್ ಸಿಗದೆ ಪರದಾಡುವಂತಾಗಿದೆ.
ಸತತ ಮೂರು ದಿನಗಳಿಂದ ತೈಲ ಅಭಾವ ತಲೆದೋರಿರುವುದು ಮತ್ತು ಬಂಕ್‌ಗಳ ಮುಂದೆ ಸಾಲು ಸಾಲಾಗಿ ನೋ ಸ್ಟಾಕ್ ಬೋರ್ಡ್‌ಗಳು ಕಾಣಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿದೆ.ಮುಂದಿನ ದಿನಗಳಲ್ಲಿ ಇಂಧನ ಸಂಪೂರ್ಣ ಕೈಕೊಡಲಿದೆಯೇ ಎಂಬ ಭೀತಿಯಲ್ಲಿ ಸವಾರರು ಸಿಕ್ಕ ಸಿಕ್ಕ ಬಂಕ್‌ಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತೈಲ ಕಂಪನಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಸರಬರಾಜು ಸುಗಮಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.