ಸಾರಾಂಶ
ರಾಜ್ಯದಲ್ಲಿ ಗದಗ ಎಂದ ತಕ್ಷಣ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆ ಎಲ್ಲರಿಗೂ ನೆನಪಾಗುತ್ತದೆ.
ಗದಗ: ಸಂಗೀತ ಕ್ಷೇತ್ರಕ್ಕೆ ಗದುಗಿನ ಕೊಡುಗೆ ಅಪಾರವಾಗಿದೆ. ವಿಶ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಸಂಗೀತ ವಿದ್ವಾಂಸರು ಗದಗಿನ ಪಂಡಿತ ಭೀಮಸೇನ ಜೋಶಿಯವರು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರು ಹೇಳಿದರು.
ಇಲ್ಲಿಯ ರಾಜೀವ ಗಾಂಧಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ 2025-26 ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ನಡೆದ ಸುಗಮ ಸಂಗೀತ ಕಲಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯದಲ್ಲಿ ಗದಗ ಎಂದ ತಕ್ಷಣ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆ ಎಲ್ಲರಿಗೂ ನೆನಪಾಗುತ್ತದೆ.ಅಂತಹ ಸಂಗೀತದ ಪರಂಪರೆ ಹೊಂದಿರುವ ಗದಗ ಜಿಲ್ಲೆ ಸಂಗೀತದಲ್ಲಿ ಸಮೃದ್ಧವಾಗಿದೆ.
ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಿಕ್ಷಣ, ವಸತಿ ಜತೆಗೆ ಸುಗಮ ಸಂಗೀತ ತರಬೇತಿ ನೀಡುತ್ತಿರುವುದು ಸಂತಸದ ವಿಷಯ.ಇದನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ತಮ್ಮಲ್ಲಿ ಅಡಗಿರುವ ಸಂಗೀತ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಲಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ.ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ವಸತಿ ಶಾಲೆಯ ಮಕ್ಕಳಿಗೆ ಸುಗಮ ಸಂಗೀತ ತರಬೇತಿಯನ್ನು ನುರಿತ ಕಲಾವಿದರಿಂದ ಮುಂದಿನ 6 ತಿಂಗಳವರೆಗೆ ನೀಡಲಾಗುವುದು. ವಾದ್ಯ ಪರಿಕರಗಳ ಜತೆಗೆ ತರಬೇತಿ ನೀಡಲಾಗುತ್ತಿದ್ದು ಮಕ್ಕಳು ತಮಗಿರುವ ಸಂಗೀತದ ಅಭಿರುಚಿ ಅಭಿವ್ಯಕ್ತಿಗೊಳಿಸುವ ಮೂಲಕ ಸಂಗೀತ ಕಲಾವಿದರಾಗಲು ಇದೊಂದು ಸುವರ್ಣಾವಕಾಶವಾಗಿದೆ ಎಂದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಸಹಾಯಕ ನಿರ್ದೇಶಕಿ ಮಂಜುಳಾ ಎನ್, ವಸತಿ ನಿಲಯ ಪಾಲಕಿ ವಿದ್ಯಾ ಬೆಳವಣಕಿ, ಕಲಾವಿದೆ ಸಾವಿತ್ರಿ ಎಂ. ಲಮಾಣಿ, ರಾಜಕುಮಾರ ಸೋಪಡ್ಲಾ, ನವೀನ ಪತ್ತಾರ ಸೇರಿದಂತೆ ಇತರರು ಇದ್ದರು.