ಸಾರಾಂಶ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಇಲ್ಲಿನ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ರೂಪಾ ದಲಬಂಜನ ಎಂಬುವರು ಸರ್ಕಾರಕ್ಕೆ ಭರಿಸಬೇಕಿದ್ದ ಲಕ್ಷಾಂತರ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರೂಪಾ ಅವರನ್ನು ಸೇವೆಯಿಂದ ಅಮಾನತು ಮಾಡಿ, ಅವರ ವಿರುದ್ಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.ಏನಿದು ಪ್ರಕರಣ?: ರೂಪಾ ದಲಬಂಜನ 2023ರ ಅಕ್ಟೋಬರ್ 9ರಿಂದ ಗದಗ ತಹಸೀಲ್ದಾರ್ ಕಚೇರಿಯಲ್ಲಿ ಪಹಣಿ ವಿತರಣೆ ನಿರ್ವಾಹಕ ಕೆಲಸ ವಹಿಸಿಕೊಂಡಿದ್ದರು. ಹೀಗೆ ಪಹಣಿ ವಿತರಣೆ ಮಾಡಿ ಸಾರ್ವಜನಿಕರಿಂದ ಸಂಗ್ರಹವಾಗುವ ಹಣವನ್ನು ಮರು ದಿನವೇ (K2) ಚಲನ್ ಮೂಲಕ ಸರ್ಕಾರಕ್ಕೆ ಪಾವತಿ, ಕ್ಯಾಶ್ ಬುಕ್ ಬರೆದು ಮೇಲಧಿಕಾರಿಗಳ ಅನುಮೋದನೆಗೆ ಹಾಜರು ಪಡಿಸುವುದು ನಿಯಮ. ಆದರೆ ರೂಪಾ ಇದ್ಯಾವುದನ್ನು ಮಾಡದೇ, ಸರ್ಕಾರಕ್ಕೆ ಕಟ್ಟಬೇಕಾಗಿದ್ದ ₹16,33,110 ಮೊತ್ತವನ್ನು ವರ್ಷದುದ್ದಕ್ಕೂ ಹಂತ ಹಂತವಾಗಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದು ಈ ಹಗರಣ ಕುರಿತು ತನಿಖೆ ನಡೆಸಿದ ಶಿರಸ್ತೆದಾರರ ವರದಿಯಲ್ಲಿ ದಾಖಲಾಗಿದೆ.
ಅಧಿಕಾರಿಗಳ ಮೌನ: ದಿನ ನಿತ್ಯವೂ ಪಹಣಿಗಾಗಿ ನೂರಾರು ಸಂಖ್ಯೆಯ ಸಾರ್ವಜನಿಕರು ಆಗಮಿಸುತ್ತಾರೆ. ಅದರಿಂದ ಅಪಾರ ಪ್ರಮಾಣದ ಹಣ ಸಂಗ್ರಹವಾಗುತ್ತದೆ. ಹೀಗೆ ದಿನವೂ ಸಂಗ್ರಹವಾಗುವ ಹಣ ಎಲ್ಲಿ ಹೋಗುತ್ತಿದೆ? ಈ ವಿಭಾಗವನ್ನು ನಿಭಾಯಿಸುವ ಸಿಬ್ಬಂದಿ ಆ ಹಣವನ್ನು ಸರ್ಕಾರಕ್ಕೆ ಅದೇಕೆ ಭರಿಸಿಲ್ಲ? ಎನ್ನುವ ಬಗ್ಗೆ ಹಿರಿಯ ಅಧಿಕಾರಿಗಳು ಕಿಂಚಿತ್ತಾದರೂ ಗಮನಿಸಿದ್ದರೆ ಇಂದು ಈ ಸಮಸ್ಯೆ ಬರುತ್ತಿರಲಿಲ್ಲ. ಆದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದರೂ ಅವರು ಅದೇಗೆ ಸುಮ್ಮನೇ ಕುಳಿತರು ಎನ್ನುವ ಸಂಶಯ ಬಲವಾಗಿ ಕಾಡುತ್ತಿದೆ. 2023ರಿಂದಲೇ ನಿತ್ಯವೂ ಹಣ ನುಂಗುವ ಈ ಕೆಲಸ 2025ರ ವರೆಗೂ ಮೇಲಧಿಕಾರಿಗಳ ಗಮನಕ್ಕೆ ಬರದೇ ಹೋಗಿರುವುದು ನಿಜಕ್ಕೂ ವಿಪರ್ಯಾಸ.ಜ.27ರಂದು ವರದಿ: ಪಹಣಿ ಮುಟೇಶನ್ ವಿತರಿಸಿದ ದಾಖಲಾತಿಗಳನ್ನು ಪರಿಶೀಲಿಸಿದ ಭೂಮಿ ಶಿರಸ್ತೆದಾರರು, ₹16 ಲಕ್ಷಕ್ಕೂ ಅಧಿಕ ಹಣ ಸರ್ಕಾರಕ್ಕೆ ಸಲ್ಲಿಕೆ ಆಗಿಯೇ ಇಲ್ಲ ಎಂದು ಕಳೆದ ಜ. 27ರಂದು ತಹಸೀಲ್ದಾರ್‌ಗೆ ವರದಿ ನೀಡಿದ್ದಾರೆ. ಈ ಕುರಿತು ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಎರಡೆರಡು ಬಾರಿ ನೋಟಿಸ್ ನೀಡಿದರೂ ರೂಪಾ ದಲಬಂಜನರಿಂದ ಯಾವುದೇ ಉತ್ತರ ಬಂದಿಲ್ಲ.
ಫೆ. 9ರಿಂದ ಅವರು ಕಚೇರಿಗೆ ಬಂದೇ ಇಲ್ಲ ಎನ್ನಲಾಗಿದೆ. ಕಚೇರಿಗೆ ಬಾರದ ರೂಪಾ ಅವರ ನಿವಾಸಕ್ಕೂ ಸಿಬ್ಬಂದಿಗಳು ತೆರಳಿ, ಈ ಬಗ್ಗೆ ವಿಚಾರಿಸಿದಾಗ ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಯಾವುದೇ ದಾರಿ ಕಾಣದೇ, ಗದಗ ಶಹರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.ರೂಪಾ ಅವರಿಂದ ತೀವ್ರ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆ, ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10(1)(ಡಿ) ರನ್ವಯ ವಿಚಾರಣೆ ಕಾಯ್ದಿರಿಸಿ 5-3-2025ರಂದು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರ ಸೂಚನೆಯ ಮೇರೆಗೆ ಗದಗ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹೇಳಿದರು.