ರೋಣದಲ್ಲಿ ವಿವಿಧ ಕಾಮಗಾರಿ ಪರಿಶೀಲಿಸಿದ ಗದಗ ಜಿಪಂ ಸಿಇಒ ಭರತ್

| Published : Oct 03 2024, 01:17 AM IST

ಸಾರಾಂಶ

ಗದಗ ಜಿಪಂ ಸಿಇಒ ಭರತ್ ಎಸ್. ಅವರು ರೋಣ ತಾಲೂಕಿನ ವಿವಿಧ ಗ್ರಾಪಂಗೆ ಭೇಟಿ ನೀಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದರು. ಯಾವಗಲ್, ಬೆಳವಣಕಿ, ಮಲ್ಲಾಪುರ, ಚಿಕ್ಕಮಣ್ಣೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ವೀಕ್ಷಿಸಿದರು.

ರೋಣ: ಜಿಪಂ ಸಿಇಒ ಭರತ್ ಎಸ್. ಅವರು ತಾಲೂಕಿನ ವಿವಿಧ ಗ್ರಾಪಂಗೆ ಭೇಟಿ ನೀಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದರು.

ಯಾವಗಲ್, ಬೆಳವಣಕಿ, ಮಲ್ಲಾಪುರ, ಚಿಕ್ಕಮಣ್ಣೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ, ಬದು ನಿರ್ವಹಣೆ ಕಾಮಗಾರಿ, ಗ್ರಂಥಾಲಯ, ದನದ ಕೊಟ್ಟಿಗೆ, ವೈಯಕ್ತಿಕ ಶೌಚಾಲಯ, ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕಾಮಗಾರಿ ಕಡತಗಳು ಹಾಗೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಳತೆಯ ಪ್ರಮಾಣ ಪರಿಶೀಲನೆ ನಡೆಸಿದರು.

ಯಾವಗಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಇಒ ಅವರು, ಆರೋಗ್ಯ ಕೇಂದ್ರದಲ್ಲಿ ರಜಿಸ್ಟರ್ ಚೆಕ್ ಮಾಡಿ, ಮಾಹಿತಿ ಪಡೆದರು. ಸೆಪ್ಟೆಂಬರ್ ತಿಂಗಳಲ್ಲಿ ಎಷ್ಟು ಜನರ ಬ್ಲಡ್ ಚೆಕ್ ಮಾಡಿಸಲಾಗಿದೆ? ಅದರಲ್ಲಿ ಹಿಮೋಗ್ಲೋಬಿನ್ ಕೊರತೆ ಎಷ್ಟು ಮಕ್ಕಳಿಗೆ ಇದೆ? ಎಂಬುದರ ಕುರಿತು ಮಾಹಿತಿ ಪಡೆದರು. ಆಸ್ಪತ್ರೆ ಶುಚಿಯಾಗಿಡಲು ಸೂಚನೆ ನೀಡಿದ ಅವರು, ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಬಳಿಕ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ ಬೆಳವಣಕಿ ಹಾಗೂ ಯಾವಗಲ್ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣದ ಅಳತೆ ಹಾಗೂ ಗ್ರಾಮದಲ್ಲಿ ನಿರ್ಮಾಣವಾದ ಉದ್ಯಾನ, ಬದು ನಿರ್ವಹಣೆ ಕಾಮಗಾರಿ ಪರಿಶೀಲನೆ ನಡೆಸಿದರು.

ತಾಲೂಕಿನ ಮಲ್ಲಾಪುರ ಗ್ರಾಪಂ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಿಇಒ ಅವರು, ಮಕ್ಕಳ ಜತೆಗೂಡಿ ಕುಳಿತು, ಮಧ್ಯಾಹ್ನದ ಬಿಸಿಯೂಟ ಸವಿದು, ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಿದರು. ಊಟ ಮಾಡುತ್ತ ವಿದ್ಯಾರ್ಥಿಗಳೊಂದಿಗೆ ಕೆಲ ಹೊತ್ತು ಪ್ರಶ್ನೋತ್ತರ ನಡೆಸಿದ ಅವರು, ಮೂಲಭೂತ ಸೌಕರ್ಯ ಹಾಗೂ ಊಟದ ಗುಣಮಟ್ಟ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ಮಕ್ಕಳ ಜತೆಗೆ ಸಂವಾದ: ಮಲ್ಲಾಪುರ ಗ್ರಾಮದ ವಿವಿಧ ಕಾಮಗಾರಿಗಳ ವೀಕ್ಷಣೆ ಬಳಿಕ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ಕುಳಿತು ಮಕ್ಕಳ ಸಂಖ್ಯೆ ಬಗ್ಗೆ ಮಾಹಿತಿ ಪಡೆದರು. ಮಕ್ಕಳ ಸಂಖ್ಯೆ ಕಡಿಮೆ ಆಗಲು ಕಾರಣವನ್ನು ಮಕ್ಕಳಿಂದ ಪಡೆದರು. ಮಕ್ಕಳಿಗೆ ತಮ್ಮ ಪರಿಚಯ ಮಾಡಿಕೊಂಡು ಪ್ರತ್ಯೇಕವಾಗಿ 15 ನಿಮಿಷಗಳ ಕಾಲ ಶಾಲಾ ಕೊಠಡಿಯಲ್ಲಿ ಮಕ್ಕಳೊಂದಿಗೆ ಸಂವಾದ ಮಾಡಿದರು.

ಈ ವೇಳೆ ತಾಪಂ ಇಒ ಮಂಜುಳಾ ಹಕಾರಿ, ಸಹಾಯಕ ನಿರ್ದೇಶಕ (ಗ್ರಾ.ಉ.) ಚಂದ್ರಶೇಖರ ಕಂದಕೂರ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವಿವಿಧ ಗ್ರಾಪಂ ಚುನಾಯಿತ ಜನಪ್ರತಿನಿಧಿಗಳು, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.