ಸಾರಾಂಶ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಂಗಳವಾರ ರಂಗಪಂಚಮಿಯನ್ನು ಸಾರ್ವಜನಿಕರು ಸಡಗರದಿಂದ ಆಚರಿಸಿ, ಬಣ್ಣದೊಕುಳಿಯಲ್ಲಿ ಸಂಭ್ರಮದಿಂದ ಮಿಂದೆದ್ದರು. ನಸುಕಿನ ಜಾವದಲ್ಲಿಯೇ ಕಾಮ ದಹನ ಪೂರ್ಣಗೊಳ್ಳುತ್ತಿದ್ದಂತೆ ಬಣ್ಣಕ್ಕೆ ಅಣಿಯಾದ ಜನರು ಸಂಜೆಯವರೆಗೂ ಪರಸ್ಪರ ಬಣ್ಣ ಎರಚಿ ಖುಷಿ ಪಟ್ಟರು.
ಅವಳಿ ನಗರದ ಎಲ್ಲಾ ಬಡಾವಣೆಗಳಲ್ಲಿಯೂ ಕಾಮದಹನದ ಪ್ರಕ್ರಿಯೆಗಳು ಸಾಂಗವಾಗಿ ನಡೆದು ಓಣಿ ಓಣಿಗಳಲ್ಲಿ ಬಣ್ಣದಾಟದಲ್ಲಿ ಮುಳುಗಿದ್ದರು. ಯುವಕ, ಯುವತಿಯರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾ ಸಂಬಂಧಿಕರು, ಗೆಳೆಯ, ಗೆಳತಿಯರ ಮನೆಗಳಿಗೆ ತೆರಳಿ ಅವರೆಲ್ಲರೂ ಸೇರಿ ರಂಗಪಂಚಮಿ ಆಚರಿಸಿದರು.ರೇನ್ ಡ್ಯಾನ್ಸ್: ಗದಗ ನಗರದ ಬ್ಯಾಂಕ್ ರೋಡ್ ನಲ್ಲಿ ಆಯೋಜಿಸಲಾಗಿದ್ದ ರೇನ್ ಡ್ಯಾನ್ಸ್ ಎಲ್ಲರ ಗಮನ ಸೆಳೆಯಿತು. ಅವಳಿ ನಗರದ ಎಲ್ಲಾ ಬಡಾವಣೆಗಳ ಯುವಕರು ಈ ರೇನ್ ಡ್ಯಾನ್ಸ್ ನಲ್ಲಿ ಪಾಲ್ಗೊಂಡು ಅಬ್ಬರದ ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದಕ್ಕೆ ಯುವತಿಯರು ಕೂಡಾ ಹೊರತಾಗಿರಲಿಲ್ಲ, ನಾವೇನು ಕಡಿಮೆ ಇಲ್ಲ ಎನ್ನುವಂತೆ ಅವರು ಸಖತ್ ಸೆಪ್ ಹಾಕುತ್ತಾ ಹೋಳಿ ಸಂಭ್ರಮಿಸಿದರು.
ಮಹಿಳೆಯರು ಭಾಗಿ: ಇತ್ತೀಚಿಗಷ್ಟೇ ವಿಶ್ವ ಮಹಿಳಾ ದಿನ ಆಚರಿಸಿದ್ದ ಗೃಹಿಣಿಯರು ಈ ಬಾರಿ ರಂಗಪಂಚಮಿಯನ್ನು ವಿಶೇಷವಾಗಿ ಆಚರಿಸಿದರು. ತಮ್ಮ ಓಣಿಯ, ಸ್ವಸಹಾಯ ಗುಂಪುಗಳ, ಲೇಡಿಸ್ ಕ್ಲಬ್ ಗಳ ಸದಸ್ಯರು ಒಂದೆಡೆ ಸೇರಿ ವಿಶೇಷ ಹಾಡುಗಳನ್ನು ಹಾಕಿಕೊಂಡು ಡ್ಯಾನ್ಸ್ ಮಾಡುವ ಮೂಲಕ ಹಬ್ಬವನ್ನು ಆಚರಿಸಿದರು.ಗಮನ ಸೆಳೆದ ಮುಖವಾಡಗಳು: ರಂಗಪಂಚಮಿ ಹಿನ್ನೆಲೆಯಲ್ಲಿ ಯುವಕರ ವಿಶೇಷ ವಿನ್ಯಾಸದ ಮುಖವಾಡಗಳನ್ನು ಧರಿಸಿಕೊಂಡು ಚಿಕ್ಕ ಮಕ್ಕಳಂತೆ ತುತ್ತೂರಿಗಳನ್ನು (ಪೀಂಯಾ) ಊದುತ್ತಾ ರಸ್ತೆಗಳಲ್ಲಿ ಸಂಚರಿಸುವವರನ್ನು ಕಿಚಾಯಿಸುತ್ತಿದ್ದರು. ಅದರಲ್ಲಿಯೂ ಕೆಲವರು ಸಿಂಹ, ಹುಲಿ ಮುಖವಾಡ ಧರಿಸಿದ್ದರೆ ಇನ್ನು ಕೆಲವರು ಋಷಿಗಳ ಕೇಶ ವಿನ್ಯಾಸ, ಇನ್ನು ಕೆಲವರು ದೆವ್ವದ ಮುಖವಾಡಗಳನ್ನು ಧರಿಸಿಕೊಂಡು ಓಡಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಜೋರಾಗಿತ್ತು ಎಣ್ಣೆ ಗಮ್ಮತ್ತು: ರಂಗಪಂಚಮಿ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಹಬ್ಬದ ವೇಳೆಯಲ್ಲಿ ತಮಗೆ ಬೇಕಾಗುವ ಮದ್ಯವನ್ನು ಮದ್ಯ ಪ್ರಿಯರು ಮೊದಲೇ ಸಂಗ್ರಹಿಸಿಕೊಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಯಾರಿಗೂ ಅದರ ಕೊರತೆ ಕಂಡು ಬರಲಿಲ್ಲ. ಗದಗ ನಗರದಿಂದ ಅಕ್ಕ ಪಕ್ಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಪಕ್ಕದ ಹೊಲಗಳಲ್ಲಿಯೇ ವಿಶೇಷ ಔತಣ ಕೂಟಗಳು ವ್ಯಾಪಕವಾಗಿ ಆಯೋಜನೆಗೊಂಡಿದ್ದು ಅಲ್ಲಿಯೇ ಕುಣಿದು ಕುಪ್ಪಳಿಸಿದರು.