ಸಾರಾಂಶ
ಕನ್ನಡಪ್ರಭ ವಾರ್ತೆ ಸಾವಳಗಿ
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳ ಮೂಲಕ ತುಳಿತಕ್ಕೆ ಒಳಗಾದ ಬಡವರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಹೇಳಿದರು.ಸಾವಳಗಿ ಗ್ರಾಮದ ಮಾಳಿ ಸಮುದಾಯ ಭವನದಲ್ಲಿ ನಡೆದ ಜಮಖಂಡಿ ಮತ್ತು ಸಾವಳಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಗದ್ದಿಗೌಡರು ಬಾಗಲಕೋಟೆ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾದರೂ ಈ ಭಾಗದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಕೇಂದ್ರದಿಂದ ಹೊಸ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿಲ್ಲ. 20 ವರ್ಷಗಳಿಂದ ಸಂಸದರಾಗಿದ್ದವರು ನಿಮ್ಮ ಸಮಸ್ಯೆ ಆಲಿಸಲು ಎಷ್ಟು ಬಾರಿ ನಿಮ್ಮೂರಿಗೆ ಬಂದಿದ್ದಾರೆ ಎಂಬುದನ್ನು ಆತ್ಮಸಾಕ್ಷಿಯಿಂದ ಹೇಳಿ ಎಂದರು.ಕೇವಲ ಚುನಾವಣೆಯಲ್ಲಿ ಇನ್ನೊಬ್ಬರ ನಾಮಬಲದಿಂದ ಚುನಾವಣೆಯಲ್ಲಿ ಗೆದ್ದು ಅಧಿಕಾರ ಅನುಭವಿಸುವುದೇ ಗುರಿಯಾಗಬಾರದು. ಮತದಾರರ ಆಶೀರ್ವಾದದಿಂದ ಜಯ ಸಾಧಿಸಿದ ಬಳಿಕ ಮತದಾರ ಪ್ರಭುಗಳ ಕೆಲಸವೇ ನಮಗೆ ಶ್ರೀರಕ್ಷೆಯಾಗಬೇಕು. ಇದೊಂದು ಬಾರಿ ನನಗೊಂದು ಅವಕಾಶ ನೀಡಿ, ಜನರ ಸೇವೆ ಮಾಡೋದು ಹೇಗೆ ಎಂಬುದನ್ನು ತೋರಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮಹಿಳೆಯರಿಗೆ ಓಡಾಡಲು ಉಚಿತ ಬಸ್, ಪ್ರತಿ ತಿಂಗಳು ಮನೆ ಯಜಮಾನಿಗೆ ₹2000, ಪಡಿತರದಾರರಿಗೆ ಅಕ್ಕಿ ಬದಲಾಗಿ ಅವರ ಖಾತೆಗಳಿಗೆ ಹಣ, ಉಚಿತ ವಿದ್ಯುತ್ ಹೀಗೆ ಚುನಾವಣೆಯಲ್ಲಿ ನೀಡಿದ ಪಂಚ ಗ್ಯಾರಂಟಿಗಳ ಮೂಲಕ ಜನರ ನಿತ್ಯ ಜೀವನಕ್ಕೆ ನೆರವಾಗುತ್ತಿದೆ. ಪ್ರತಿ ಮನೆಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣ ಬರುತ್ತಿದೆ. ಲೋಕಸಭೆಯಲ್ಲಿ ಜನರು ಆಶೀರ್ವಾದ ಮಾಡಿದರೆ ಮತ್ತಷ್ಟು ಅನುಕೂಲಗಳು ಸಿಗಲಿವೆ ಎಂದು ಹೇಳಿದರು.ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಮಹಿಳೆಯರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮೀ, ಉಚಿತ ಬಸ್ ಪ್ರಯಾಣದಂತಹ ಸೌಲಭ್ಯ ಒದಗಿಸಿ ನುಡಿದಂತೆ ನಡೆದು ತೋರಿಸಿದೆ. ಬಿಜೆಪಿಯ ಬಣ್ಣದ ಮಾತಿಗೆ ಮರುಳಾಗದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವ ಮೂಲಕ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಈ ವೇಲೆವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ಶ್ರೀಶೈಲ ದಳವಾಯಿ, ಅರ್ಜುನ ದಳವಾಯಿ, ಬಸವರಾಜ ಸಿಂಧೂರ, ನಜೀರ ಕಂಗನೊಳ್ಳಿ, ಮುತ್ತಣ್ಣ ಹಿಪ್ಪರಗಿ, ಅಶೋಕ ಮಾಳಿ, ರಾಜು ಮೇಲಿನಕೇರಿ, ಸಮೀರ ಕಂಗನೋಳ್ಳಿ, ಅಭಯಕುಮಾರ ನಾಂದ್ರೇಕರ ಮುಂತಾದವರು ಇದ್ದರು.