ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ವಿಶ್ವವಿಖ್ಯಾತ ಶಿವನಸಮುದ್ರ(ಬ್ಲಪ್) ಬಳಿಯ ಗಗನಚುಕ್ಕಿ ಜಲಪಾತೋತ್ಸವವು ಈ ವರ್ಷ ಸೆ.13 ಮತ್ತು 14ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಮಲ್ಲಿಕ್ಯಾತನಹಳ್ಳಿ ಬಳಿ ವಾಹನ ನಿಲುಗಡೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯುವ ಜಾಗವನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಜಲಪಾತೋತ್ಸವ ಯಶಸ್ಸಿಗೆ ಬೇಕಾದ ಸಿದ್ಧತೆಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
ದಸರಾ ಜೊತೆಗೆ ನಿರಂತರ ಕಾರ್ಯಕ್ರಮಗಳು ಇರುವುದರಿಂದ ಸೆ.13 ಮತ್ತು 14ರಂದು ಜಲಪಾತೋತ್ಸವ ಆಯೋಜಿಸಲಾಗಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಜಲಪಾತೋತ್ಸವಕ್ಕೆ ವಿನೂತನ ಲೈಟಿಂಗ್ಸ್ ಮತ್ತು ಲೇಸರ್ ಶೋ ಇರಲಿದೆ. ಅಲ್ಲದೇ ಜಲಪಾತೋತ್ಸವದ ಬಳಿಯಿಂದ ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನೇರಪ್ರಸಾರದ ವ್ಯವಸ್ಥೆ ಇರುತ್ತದೆ ಎಂದರು.ಎರಡು ದಿನಗಳ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ವೇದಿಕೆ ಕಾರ್ಯಕ್ರಮದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯಗಳಿಗೆ ಅವಕಾಶ ನೀಡುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಜಲಪಾತೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಕೋರಲಾಗಿದೆ. ಈ ಬಾರಿ ರೊಟ್ಟಿಕಟ್ಟೆ ಬಳಿ ಬೆಂಗಳೂರಿನ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿರುವುದರಿಂದ ವೇದಿಕೆ ಕಾರ್ಯಕ್ರಮವನ್ನು ಮಲ್ಲಿಕ್ಯಾತನಹಳ್ಳಿ ಸಮೀಪವೇ ನಡೆಸಲಾಗುತ್ತದೆ. ಜಲಪಾತೋತ್ಸವ ವೈಭವವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ಮಲ್ಲಿಕ್ಯಾತನಹಳ್ಳಿಯಿಂದ 25 ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ತಾಲೂಕಿನಿಂದ ಬರುವ ಜನರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಜಿಲ್ಲಾ ಕೇಂದ್ರದಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ. ಊಟ, ಕುಡಿಯುವ ನೀರು ಹಾಗೂ ಪ್ರತ್ಯೇಕ ಶೌಚಾಯಲದ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳು ವಿವಿಧ ಮಳಿಗೆಗಳನ್ನು ತೆರೆಯುವ ಸಂಬಂಧ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಇಲ್ಲಿನ ವ್ಯಾಪಾರಿಗಳಿಗೆ ಮಲ್ಲಿಕ್ಯಾತನಹಳ್ಳಿ ಬಳಿಯೇ ಸ್ಥಳಾವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ಜಲಪಾತೋತ್ಸವದಲ್ಲಿ ಜಾನಪದ ಸೊಗಡಿನ, ಹಳ್ಳಿಗಾಡಿನ ವೈಭವವನ್ನು ಬಿಂಬಿಸುವ ನಿಟ್ಟಿನಲ್ಲಿ ರೊಟ್ಟಿ ಕಟ್ಟೆಯಿಂದ ವೇದಿಕೆವರೆಗೂ ರಸ್ತೆ ಬದಿಯಲ್ಲಿ ಜಾನಪದ ಚಿತ್ರಗಳೊಂದಿಗೆ ಸ್ವಾಗತ ಫಲಕಗಳನ್ನು ಅಳವಡಿಸಬೇಕು ಹಾಗೂ ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದರು.ಮಲ್ಲಿಕ್ಯಾತನಹಳ್ಳಿ ಸಮೀಪವೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, ಕಳೆದ ಬಾರಿಯಂತೆ ಈ ಸಲವೂ ಕೆಆರ್ ಎಸ್ ಜಲಾಶಯ ತುಂಬಿದೆ. ಹೀಗಾಗಿ ವೈಭವದ ಜಲಪಾತೋತ್ಸವಕ್ಕೆ ನಿರ್ಧರಿಸಲಾಗಿದೆ. ಜಲಪಾತೋತ್ಸವದ ಅದ್ಧೂರಿ ಆಚರಣೆ ಹಾಗೂ ಯಶಸ್ವಿಗೆ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿ ನಿರ್ವಹಿಸಬೇಕು. ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಸಾರಿಗೆ ಸಮಿತಿ, ಆರೋಗ್ಯ ಸಮಿತಿ, ಸ್ವಚ್ಛತಾ ಸಮಿತಿ, ಆಹಾರ ಸಮಿತಿ ಸೇರಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ವಿ.ಕೃಷ್ಣಪ್ಪ, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಎ.ಎಂ.ಸೋಮಶೇಖರ್, ಅಪ್ಪಣ್ಣ ಬೋಯಿ, ಎಚ್.ಎಸ್.ಪ್ರೇಮ್ ಕುಮಾರ್, ಭರತೇಶ್ ಕುಮಾರ್, ರಂಗಸ್ವಾಮಿ, ಮನ್ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಸಿಪಿಐ ಬಿ.ಎಸ್.ಶ್ರೀಧರ್, ಎಂ.ಪಿ.ರವಿಶಂಕರ್, ಎಚ್.ಎಸ್.ಲಂಕೇಶ್, ಪಿಡಿಒ ಕುಮಾರ್, ಗ್ರಾಪಂ ಉಪಾಧ್ಯಕ್ಷ ಬಿ.ರಘು, ಮುಖಂಡರಾದ ಕೆ.ಜೆ.ದೇವರಾಜು, ಮಹದೇವು, ಶ್ರೀಕಾಂತ್, ಶ್ರೀನಿವಾಸ್, ಸಿ.ಎಂ.ವೇದಮೂರ್ತಿ, ಅಶ್ವತ್ಥ್ ಕುಮಾರ್ ಪಾಲ್ಗೊಂಡಿದ್ದರು.
;Resize=(128,128))
;Resize=(128,128))