ಸಾರಾಂಶ
ಹುಬ್ಬಳ್ಳಿ:
ವಿವಿಧ ರಾಜ್ಯಗಳಲ್ಲಿ ದರೋಡೆ ಮೂಲಕ ಕುಖ್ಯಾತಿ ಪಡೆದಿರುವ "ಗಾಯ್ ಪರ್ದಿ ಗ್ಯಾಂಗ್ "ನ ಸದಸ್ಯನೊಬ್ಬ ಹುಬ್ಬಳ್ಳಿ ಪೊಲೀಸರ ಗುಂಡೇಟು ತಿಂದು ಗಾಯಗೊಂಡಿದ್ದಾನೆ. ಇನ್ನುಳಿದ ಐದಾರು ಜನ ಪರಾರಿಯಾಗಿದ್ದಾರೆ.
ಆಗಿದ್ದೇನು?:ನಗರದ ಹೊರವಲಯದಲ್ಲಿರುವ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿತ್ತು ಈ ಗ್ಯಾಂಗ್. ಅದೇ ರೀತಿ ಇಲ್ಲಿನ ಗೋಕುಲ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ 3ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ದರೋಡೆ ನಡೆಸಲು ಈ ಗ್ಯಾಂಗ್ ಯತ್ನಿಸಿದೆ. ಆದರೆ ಆ ಮನೆಯ ಅಕ್ಕ ಪಕ್ಕದವರಿಗೆ ಎಚ್ಚರವಾಗಿದೆ. ಕೂಡಲೇ ಪಕ್ಕದ ಮನೆಯಲ್ಲಿ ಸಪ್ಪಳ ಬರುತ್ತಿರುವುದನ್ನು ಗಮನಿಸಿ ಸಂಶಯಗೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಅಕ್ಕಪಕ್ಕದವರು ಎದ್ದು ಲೈಟ್ ಹಚ್ಚುತ್ತಿದ್ದಂತೆ ಗ್ಯಾಂಗ್ ಅಲ್ಲಿಂದ ಪರಾರಿಯಾಗಿದೆ. ಆದರೆ ಸೀತಾರಾಮ ಕಾಳೆ ಮಾತ್ರ ಬೈಕ್‌ನಲ್ಲಿ ಹಿಂದೆ ಉಳಿದಿದ್ದ. ಈತ ಗೋಕುಲ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ಹೋಗುತ್ತಿದ್ದಾಗ ಪೊಲೀಸರಿಗೆ ಸಂಶಯ ಬಂದು ತಡೆದು ವಿಚಾರಣೆ ನಡೆಸಿದ್ದಾರೆ. ಆಗ ಈತ ತಾನು ಗಾಯ್ ಪರ್ದಿ ಗ್ಯಾಂಗ್‌ನ ಸದಸ್ಯ. ಮನೆ ದರೋಡೆ ನಡೆಸಲು ಬಂದಿದ್ದೆ. ತನ್ನೊಂದಿಗೆ ಇರುವ ಸಹಚರರು ರೇವಡಿಹಾಳ ಬ್ರಿಡ್ಜ್ ಬಳಿ ಇದ್ದಾರೆ ಎಂದು ತಿಳಿಸಿದ್ದಾನೆ. ಈತನನ್ನು ಕರೆದುಕೊಂಡು ರೇವಡಿಹಾಳ ಬ್ರಿಡ್ಜ್ ಬಳಿ ಪೊಲೀಸರು ತೆರಳುತ್ತಿದ್ದಂತೆ ಅಲ್ಲಿದ್ದ ಎಲ್ಲರೂ ಕಾಲ್ಕಿತ್ತಿದ್ದಾರೆ. ಈತ ಕೂಡ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಪೊಲೀಸರು ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಈತನನ್ನು ಎಚ್ಚರಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳುವ ತನ್ನ ಪ್ರಯತ್ನ ಮುಂದುವರಿಸಿದ್ದಾನೆ. ಆಗ ಆತನ ಬಲಗಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಬಳಿಕ ಬಂಧಿಸಿ ಕೆಎಂಸಿಆರ್‌ಐಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಈತನ ಹಲ್ಲೆಯಿಂದ ಪಿಎಸ್‌ಐ ಸಚಿನ ದಾಸರೆಡ್ಡಿ, ಮುಖ್ಯಪೇದೆ ವಸಂತ ದೊಡ್ಡಮನಿ ಅವರಿಗೂ ಗಾಯಗಳಾಗಿದ್ದು, ಅವರೂ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗೋಕುಲರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಮಿಷನರ್ ಭೇಟಿ:
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಕೆಎಂಸಿಆರ್‌ಐಗೆ ಭೇಟಿ ನೀಡಿ, ಗಾಯಗೊಂಡ ಪೊಲೀಸರು ಹಾಗೂ ಆರೋಪಿಯ ಆರೋಗ್ಯ ವಿಚಾರಿಸಿದರು.ಏನಿದು ಗಾಯ್ ಪರ್ದಿ ಗ್ಯಾಂಗ್?:ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಗಾಯ್ ಪರ್ದಿ ಎಂಬ ಸಮುದಾಯವಿದೆಯಂತೆ. ಈ ಸಮುದಾಯದ ಎಂಟ್ಹತ್ತು ಜನ ಸೇರಿಕೊಂಡು ಒಂಟಿ ಮನೆ ಅಥವಾ ಊರ ಹೊರವಲಯಗಳಲ್ಲಿರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಾರೆ. ಮನೆಗೆ ಮೊದಲು ಕಲ್ಲು ಹೊಡೆದು ನೋಡುತ್ತಾರೆ. ಅಲ್ಲಿಂದ ಪ್ರತಿಕ್ರಿಯೆ ಬರಲಿಲ್ಲವೆಂದರೆ ಆ ಮನೆಯಲ್ಲಿ ಯಾರು ಇಲ್ಲ ಎಂದು ಭಾವಿಸಿ ಒಳಗೆ ನುಗ್ಗಿ ದರೋಡೆ ನಡೆಸುತ್ತದೆ. ಒಂದು ವೇಳೆ ಮನೆಯೊಳಗೆ ಇದ್ದರೂ ಪ್ರತಿಕ್ರಿಯೆ ನೀಡದಿದ್ದರೆ ಮನೆಯಲ್ಲಿದ್ದವರನ್ನು ಹಗ್ಗದಿಂದ ಕಟ್ಟಿಹಾಕಿ ಚಿನ್ನಾಭರಣ ದೋಚುತ್ತದೆ. ಸೋಮವಾರ ಬೆಳಗಿನ ಜಾವ ಕೂಡ ಅದೇ ರೀತಿ ಮಾಡಿದೆ. ಮೊದಲು ಕಲ್ಲು ಹೊಡೆದಿದೆ. ಆದರೆ ಆ ಸಪ್ಪಳಕ್ಕೆ ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಹೀಗಾಗಿ ಈ ಗ್ಯಾಂಗ್ ತಪ್ಪಿಸಿಕೊಳ್ಳಲು ಯತ್ನಿಸಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ 26 ದರೋಡೆ ಪ್ರಕರಣಗಳು ಈ ಗ್ಯಾಂಗ್‌ನ ಮೇಲೆ ದಾಖಲಾಗಿವೆ.
ಕಳೆದ ವರ್ಷವೂ ಆಗಿತ್ತು:
2023ರಲ್ಲಿ ಗೋಕುಲರಸ್ತೆಯ ರಜನಿಕಾಂತ್ ದೊಡ್ಡಮನಿ ಎಂಬುವರ ಮನೆಯಲ್ಲಿ ದರೋಡೆ ನಡೆದಿತ್ತು. ಆ ದರೋಡೆ ಮಾಡಿದ್ದು ಇದೇ ಗ್ಯಾಂಗ್. ಆಗ ಸುಮಾರು ₹ 2 ಕೆಜಿಗೂ ಅಧಿಕ ಚಿನ್ನಾಭರಣ ಕದ್ದು ಪರಾರಿಯಾಗಿತ್ತು. ಆ ಪ್ರಕರಣದಲ್ಲಿ ಈಗಾಗಲೇ ಮುಖ್ಯ ಆರೋಪಿ ಸುನಿಲ್ ಚವ್ಹಾಣ ಎಂಬಾತನನ್ನು ಬಂಧಿಸಲಾಗಿದೆ. ಇದೀಗ ಇದೇ ಗ್ಯಾಂಗ್‌ನ ಮತ್ತೊಬ್ಬ ಸದಸ್ಯನನ್ನು ಬಂಧಿಸಲಾಗಿದೆ. ಬಂಧಿತ ನೀಡಿದ ಪ್ರಾಥಮಿಕ ಮಾಹಿತಿ ಮೇರೆಗೆ ಇನ್ನು 15-20 ಜನ ಸದಸ್ಯರು ಇದ್ದಾರೆ. ಶೀಘ್ರದಲ್ಲೇ ಈ ಗ್ಯಾಂಗ್‌ನ ಸದಸ್ಯರನ್ನು ಬಂಧಿಸುವುದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ ತಿಳಿಸಿದ್ದಾರೆ.ಅಂತಾರಾಜ್ಯ ದರೋಡೆ ನಡೆಸುವ ಗಾಯ್ ಪರ್ದಿ ಎಂಬ ಗ್ಯಾಂಗ್‌ನ ಸದಸ್ಯರು ಗೋಕುಲ ಗ್ರಾಮದಲ್ಲಿ ಮನೆ ದರೋಡೆಗೆ ಯತ್ನಿಸಿತ್ತು. ಬಂಧಿಸಿದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಅದರ ಓರ್ವ ಸದಸ್ಯನಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಹೇಳಿದರು.