ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ದಾವಣಗೆರೆ ವಿ.ವಿ.ಯಲ್ಲಿ ಯುಯುಸಿಎಂಎಸ್‌ನಲ್ಲಿ ಸಾಫ್ಟ್‌ವೇರ್ ಸಮಸ್ಯೆ ಹೊರತುಪಡಿಸಿದರೆ, ಇತರೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ಯುಯುಸಿಎಂಎಸ್ ಸಾಫ್ಟ್‌ವೇರ್ 35 ಯೂನಿವರ್ಸಿಟಿಗಳಿಗೆ ಒಂದೇ ಇದೆ. ಆದ್ದರಿಂದ ಸರ್ವರ್ ಡೌನ್‌ನಿಂದಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಾಗ ಅಂಕಗಳ ಜೊತೆಗೆ ಕೌಶಲ್ಯಗಳನ್ನು ಗಳಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಸಿ.ಕೆ. ರಮೇಶ್ ಹೇಳಿದರು.ಸೋಮವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1, 2, ಯುವ ರೆಡ್ ಕ್ರಾಸ್, ರೇಂಜರ್ಸ.ರೋವರ್ಸ ಘಟಕಗಳ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಗೈಡ್‌ಲೈನ್ ಪ್ರಕಾರ ನಾವು ಒಂದೂವರೆ ತಿಂಗಳು ಹಿಂದೆ ಇದ್ದೇವೆ. ಹೀಗಾಗಿ, ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ. ಮುಂದೂಡಿದರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಎನ್‌ಇಪಿಯಂತೆ ಎಸ್‌ಇಪಿನಲ್ಲೂ ಕೌಶಲ್ಯಕ್ಕೆ ಹೆಚ್ಚು ಉತ್ತೇಜನ ಕೊಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಶಿಸ್ತಿನಿಂದ, ಶ್ರದ್ಧೆಯಿಂದ ಹೆಚ್ಚು ಹೆಚ್ಚು ಅಭ್ಯಾಸ ಮಾಡುವ ಮೂಲಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಕರ್ನಾಟಕ ಕಾಲೇಜು ಮತ್ತು ವಿ.ವಿ. ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ. ಸಿ.ಎಚ್. ಮುರುಗೇಂದ್ರಪ್ಪ ಮಾತನಾಡಿ, ಜಿಲ್ಲೆಗೆ ದಾವಣಗೆರೆ ವಿವಿ ತರಲು, ಸ್ಥಾಪನೆ ಮಾಡಲು ಸಾಕಷ್ಟು ಹೋರಾಟಗಳನ್ನು ಮಾಡಲಾಗಿದೆ. ಕುವೆಂಪು ವಿ.ವಿ.ಗಿಂತ ಈಗ ದಾವಣಗೆರೆ ವಿ.ವಿ.ಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸುಮಾರು 30 ವರ್ಷಗಳ ಕಾಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪರವಾಗಿ ಹೋರಾಟ ಮಾಡಿದ್ದೇನೆ ಎಂದರು.
ವಿದ್ಯಾರ್ಥಿಗಳು ಇತ್ತೀಚೆಗೆ ಹೆಚ್ಚು ಓದುತ್ತಿಲ್ಲ. ಆದರೆ, ನನ್ನ ಪ್ರಕಾರ ಮ್ಯಾಂಡೇಟರಿ ಸಿಸ್ಟಂ ಜಾರಿಗೆ ತಂದರೆ ಓದುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಸಾವಿರ ವಿದ್ಯಾರ್ಥಿಗಳ ಪೈಕಿ ಎಷ್ಟು ಜನ ದಿನಪತ್ರಿಕೆಗಳನ್ನು ಓದುತ್ತೀರಿ ಎಂಬ ಪ್ರಶ್ನೆಗೆ, ಯಾರೊಬ್ಬರೂ ಕೈ ಎತ್ತದಿರುವುದನ್ನ ಕಂಡ ಅವರು, ಹೀಗಾದರೆ ನಿಮಗೆ ಸಾಮಾನ್ಯ ಜ್ಞಾನ ಬಾ ಎಂದರೆ ಎಲ್ಲಿಂದ ಬರುತ್ತದೆ ಎಂದು ಬೇಸರದಿಂದ ನುಡಿದರು.ನಾನು ವಿವಿಧ ಕನ್ನಡ ದಿನಪತ್ರಿಕೆಗಳನ್ನು ಓದಿ ಬೆಳೆದವನು. ನಿಮಗೆ ಬೇಕಾದ ಎಲ್ಲ ವಿಷಯಗಳು ಇದರಲ್ಲಿವೆ. ಕನಿಷ್ಠ ಅರ್ಧ ಗಂಟೆ ಸಮಯ ಮೀಸಲಿಟ್ಟು, ಪತ್ರಿಕೆಗಳನ್ನು ಓದಿದರೆ, ನಿಮಗೆ ಐಎಎಸ್, ಐಪಿಎಸ್‌ನಂತಹ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಬರುತ್ತದೆ ಎಂದರು.
ಪ್ರಾಂಶುಪಾಲ ಪ್ರೊ. ಡಾ. ಬಿ.ಜಿ. ಧನಂಜಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋನ ಬಿಂದು ಹೊನ್ನಾಳಿ ಮಾತನಾಡಿದರು. ಉಪನ್ಯಾಸಕಿ ಎಚ್.ವಿ. ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ನಾಗರಾಜ ನಾಯ್ಕ ಕಾರ್ಯಕ್ರಮ ನಡೆಸಿಕೊಟ್ಟರು.ಕಾಲೇಜಿನಿಂದ ವರ್ಗಾವಣೆಗೊಂಡ ಅಧ್ಯಾಪಕರುಗಳನ್ನು ಸನ್ಮಾನಿಸಲಾಯಿತು. 25 ಬಾರಿ ರಕ್ತದಾನ ಮಾಡಿದ ಎನ್.ಕೆ. ಆಂಜನೇಯ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಹರಾಳು ಮಹಾಬಲೇಶ್ವರ ಎಲ್ಲರಿಗೂ ವಂದನೆ ಸಲ್ಲಿಸಿದರು.
- - - -24ಎಚ್.ಎಲ್.ಐ1:ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ವಿವಿಧ ಘಟಕಗಳ ಉದ್ಘಾಟನೆ ಸಮಾರಂಭವನ್ನು ದಾವಣಗೆರೆ ವಿ.ವಿ. ಕುಲಸಚಿವ ಪ್ರೊ. ಸಿ.ಕೆ. ರಮೇಶ್ ಉದ್ಘಾಟಿಸಿದರು.