ಗಜಾನನೋತ್ಸವ ದೇಶಪ್ರೇಮ ಬೆಳೆಸಲು ಪೂರಕ

| Published : Aug 29 2025, 01:00 AM IST

ಸಾರಾಂಶ

ಗಜಾನನೋತ್ಸವ ಯುವಪೀಳಿಗೆಯಲ್ಲಿ ಭಕ್ತಿಭಾವ, ದೇಶಪ್ರೇಮ ಬೆಳೆಸಲು ಪೂರಕವಾಗಿದೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಗದಗ: ಗಜಾನನೋತ್ಸವ ಯುವಪೀಳಿಗೆಯಲ್ಲಿ ಭಕ್ತಿಭಾವ, ದೇಶಪ್ರೇಮ ಬೆಳೆಸಲು ಪೂರಕವಾಗಿದೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ವೀರಶೈವ ಲೈಬ್ರರಿ ಬಳಿ ಬುಧವಾರ ಸಂಜೆ ಸುದರ್ಶನ ಚಕ್ರ ಯುವ ಮಂಡಳ ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸಮಿತಿಯಿಂದ ಪ್ರತಿಷ್ಠಾಪನೆಗೊಂಡ ಗಜಾನನ ವೇದಿಕೆಯಲ್ಲಿ ಮಾತನಾಡಿದರು.

ಲೋಕಮಾನ್ಯ ಬಾಲಗಂಗಾಧನಾಥ ತಿಲಕ್ ನೇತೃತ್ವದಲ್ಲಿ ಪ್ರಾರಂಭಗೊಂಡ ಸಾರ್ವಜನಿಕ ಗಜಾನನ ಪ್ರತಿಷ್ಠಾಪನಾ ಮಂಡಳಿಗಳು ಇಂದು ಜನ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿರುವುದು ಪ್ರಶಂಸನೀಯ. ರಾಜ್ಯದಲ್ಲಿ ಮೊಟ್ಟಮೊದಲ ಸಾರ್ವಜನಿಕ ಗಜಾನನೋತ್ಸವ ಬೆಳಗಾವಿಯಲ್ಲಿ ಪ್ರಾರಂಭವಾಗಿದ್ದು, ಇಂದು ಪ್ರತಿ ದೇವರಿಗೆ ಒಂದೊಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಎಲ್ಲರಲ್ಲಿಯೂ ಜಾತಿ, ಭೇದಭಾವವಿಲ್ಲದೇ ಹಿಂದೂ ಸಮಾಜ ಒಗ್ಗಟ್ಟಾಗಿ ವಿಜೃಂಭಣೆಯಿಂದ ಆಚರಿಸುವ ಹಬ್ಬ ಯಾವುದಾದರೂ ಇದ್ದಲ್ಲಿ ಅದು ಸರ್ವರ ಇಷ್ಟಾರ್ಥಸಿದ್ಧಿ ಗಣೇಶ ಚತುರ್ಥಿಯಾಗಿದೆ ಎಂದರು.

ಸುದರ್ಶನ ಚಕ್ರ ಯುವ ಮಂಡಳ ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸಮಿತಿಯಿಂದ ಲಕ್ಷ ದೀಪೋತ್ಸವ, ಧರ್ಮಸಭೆ, ಗಣಹೋಮ ಮುಂತಾದ ಕಾರ್ಯಕ್ರಮಗಳು ಜರುಗುತ್ತಿದ್ದು, ಈ ರೀತಿಯ ಸಾಮಾಜಿಕ ಧಾರ್ಮಿಕ ಚಿಂತನೆ ಯುವಪೀಳಿಗೆಯಲ್ಲಿ ಭಕ್ತಿಭಾವ ಹಾಗೂ ದೇಶಪ್ರೇಮ ಬೆಳೆಸಲು ಪೂರಕವಾಗಿವೆ ಎಂದರು.

ಈ ವೇಳೆ ಗಜಾನನೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀಕಾಂತ ಖಟವಟೆ, ಅಧ್ಯಕ್ಷ ರವಿರಾಜ ಮಾಳೇಕೊಪ್ಪಮಠ, ಕೃಷ್ಣಗೌಡ ಪಾಟೀಲ, ಸುಧೀರ ಕಾಟೀಗಾರ, ಶಂಕರ ದಹಿಂಡೆ, ಕುಮಾರ ಮಾರನಬಸರಿ, ಜಗನ್ನಾಥಸಾ ಭಾಂಡಗೆ, ಎಚ್.ಎಸ್. ಶಿವನಗೌಡ್ರ, ರಾಜು ಕುರುಡಗಿ, ರಮೇಶ ಸಜ್ಜಗಾರ, ಸಾಗರ ಪವಾರ, ವಿನಾಯಕ ಹಬೀಬ ಮುಂತಾದವರಿದ್ದರು.

ಗಜಾನನ ಪ್ರತಿಷ್ಠಾಪನೆಗೂ ಮುನ್ನ ಬಸವೇಶ್ವರ ವೃತ್ತ ಬಳಿ ಇರುವ ಈಶ್ವರ ದೇವಸ್ಥಾನದಿಂದ ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಬ್ಯಾಂಕ್ ರೋಡ ಹಳೆ ಬಸ್ಟ್ಯಾಂಡ ರಸ್ತೆ ಮೂಲಕ ಗಜಾನನ ವೇದಿಕೆ ತಲುಪಿತು.