ಅಮಾವಾಸೆ ಹಿನ್ನೆಲೆಯಲ್ಲಿ ಗಜಪಡೆ ತಾಲೀಮಿಗೆ ಬ್ರೇಕ್

| Published : Aug 24 2025, 02:00 AM IST

ಸಾರಾಂಶ

ಮೈಸೂರು ಅರಮನೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ಹಾಗೂ ಸ್ಥಳೀಯರು ಆನೆ ಬಿಡಾರದತ್ತ ಧಾವಿಸುತ್ತಿದ್ದರು. ದಸರಾ ಆನೆಗಳನ್ನು ನೋಡಲು ಹಪ ಹಪಿಸುತ್ತಿದ್ದರು.

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಅಮಾವಾಸೆ ಹಿನ್ನೆಲೆಯಲ್ಲಿ ದಸರಾ ಗಜಪಡೆಯು ಶನಿವಾರ ನಡಿಗೆ ತಾಲೀಮು ನಡೆಸಲಿಲ್ಲ. ಹೀಗಾಗಿ, ಎಲ್ಲಾ ಆನೆಗಳು ಅರಮನೆ ಆವರಣದ ಆನೆ ಬಿಡಾರದಲ್ಲೇ ವಿಶ್ರಾಂತಿ ಪಡೆಯುತ್ತಿದ್ದವು.

ಪ್ರತಿ ಬಾರಿಯೂ ಅಮಾವಾಸೆ ದಿನಗಳಂದು ದಸರಾ ಆನೆಗಳನ್ನು ತಾಲೀಮು ನಡೆಸಲು ಮಾವುತರು ಮತ್ತು ಕಾವಾಡಿಗರು ಹಿಂದೇಟು ಹಾಕುತ್ತಾರೆ. ಹೀಗಾಗಿ, ಅಮಾವಾಸೆ ದಿನದಂದು ತಾಲೀಮಿಗೆ ಬ್ರೇಕ್ ಹಾಕಲಾಗುತ್ತದೆ.

ಅದೇ ರೀತಿ ಶನಿವಾರ ಸಹ ಮೊದಲ ತಂಡದಲ್ಲಿ ಬಂದಿರುವ 9 ಆನೆಗಳು ಬಿಡಾರದಲ್ಲೇ ವಿಶ್ರಾಂತಿ ಪಡೆಯುತ್ತಿದ್ದವು. ಲಕ್ಷ್ಮೀ, ಪ್ರಶಾಂತ, ಭೀಮ ಆನೆಗಳಿಗೆ ಮಾವುತರು ಮತ್ತು ಕಾವಾಡಿಗಳು ನೀರಿನ ತೊಟ್ಟಿಯಲ್ಲಿ ಸ್ನಾನ ಮಾಡಿಸುತ್ತಿದ್ದರು. ಉಳಿದ ಆನೆಗಳು ಅವುಗಳಿಗೆ ನಿಗದಿಯಾಗಿದ್ದ ಜಾಗಗಳಲ್ಲಿ ಸೊಪ್ಪು, ಹುಲ್ಲನ್ನು ಮೇಯುತ್ತಾ ನಿಂತಿದ್ದವು.

ಮಾವುತರು ಮತ್ತು ಕಾವಾಡಿಗರು ತಮ್ಮ ಆನೆಗಳ ಆರೈಕೆಯಲ್ಲಿ ತೊಡಗಿದ್ದರು. ಇನ್ನೂ ಮಾವುತರು ಮತ್ತು ಕಾವಾಡಿಗರ ಕುಟುಂಬದ ಮಹಿಳೆಯರು ನೀರಿನ ತೊಟ್ಟಿಯಲ್ಲಿ ಬಟ್ಟೆಗಳನ್ನು ತೊಳೆಯುತ್ತಿದ್ದರು.

ಆನೆ ನೋಡಲು ಜನ ಜಂಗುಳಿ:

ಮೈಸೂರು ಅರಮನೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ಹಾಗೂ ಸ್ಥಳೀಯರು ಆನೆ ಬಿಡಾರದತ್ತ ಧಾವಿಸುತ್ತಿದ್ದರು. ದಸರಾ ಆನೆಗಳನ್ನು ನೋಡಲು ಹಪ ಹಪಿಸುತ್ತಿದ್ದರು.

ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ಎಷ್ಟೇ ನಿಯಂತ್ರಿಸಿದರೂ ಪ್ರವಾಸಿಗರು ಆನೆ ನೋಡಲು ಮುಗಿ ಬೀಳುತ್ತಿದ್ದರು. ದೂರದಿಂದಲೇ ಆನೆಗಳ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮದಿಂದ ಹೋಗುತ್ತಿದ್ದದ್ದು ಸಹ ಕಂಡು ಬಂತು.

ನಾಳೆ ಎರಡನೇ ತಂಡದಲ್ಲಿ 5 ಆನೆಗಳು ಆಗಮನ:

2025ನೇ ಸಾಲಿನ ದಸರಾ ಮಹೋತ್ಸವಕ್ಕೆ 10 ಗಂಡು, 4 ಹೆಣ್ಣು ಸೇರಿ 14 ಆನೆಗಳು ಆಯ್ಕೆಯಾಗಿವೆ. ಇದರಲ್ಲಿ ಮೊದಲ ತಂಡದಲ್ಲಿ 7 ಗಂಡಾನೆ, 2 ಹೆಣ್ಣಾನೆ ಸೇರಿದಂತೆ 9 ಆನೆಗಳು ಈಗಾಗಲೇ ಅರಮನೆ ಆವರಣಕ್ಕೆ ಆಗಮಿಸಿದ್ದು, ನಿತ್ಯ ತಾಲೀಮು ಆರಂಭಿಸಿವೆ.

ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು, ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಕಾವೇರಿ ಮತ್ತು ಲಕ್ಷ್ಮಿ ಆನೆಗಳು ಮೊದಲ ತಂಡದಲ್ಲಿ ಬಂದಿವೆ.

ಇನ್ನೂ ಎರಡನೇ ತಂಡದಲ್ಲಿ ದುಬಾರೆ ಆನೆ ಶಿಬಿರದಿಂದ ಗೋಪಿ (42 ವರ್ಷ), ಸುಗ್ರೀವ (43 ವರ್ಷ), ಹೊಸ ಆನೆಗಳಾದ ಮತ್ತಿಗೋಡು ಆನೆ ಶಿಬಿರದಿಂದ ಶ್ರೀಕಂಠ (56 ವರ್ಷ), ಭೀಮನಕಟ್ಟೆ ಆನೆ ಶಿಬಿರದಿಂದ ರೂಪಾ (44 ವರ್ಷ) ಮತ್ತು ದುಬಾರೆ ಶಿಬಿರದಿಂದ 11 ವರ್ಷದ ಹೇಮಾವತಿ ಆನೆ ಆ.25 ರಂದು ಮೈಸೂರಿಗೆ ಆಗಮಿಸಲಿದ್ದು, ಅಂದು ಸಂಜೆ 4ಕ್ಕೆ ಪೂಜಾ ಕಾರ್ಯಕ್ರಮದ ಮೂಲಕ ಆನೆಗಳನ್ನು ಬರ ಮಾಡಿಕೊಳ್ಳಲು ಅರಣ್ಯ ಇಲಾಖೆಯು ನಿರ್ಧರಿಸಿದೆ.

ಅಲ್ಲದೆ, 2ನೇ ತಂಡದ ಆನೆಗಳ ಮಾವುತರು ಮತ್ತು ಕಾವಾಡಿಗರ ಕುಟುಂಬಕ್ಕಾಗಿ ತಾತ್ಕಾಲಿಕ ಶೆಡ್ ಸಹ ನಿರ್ಮಿಸಲಾಗುತ್ತಿದೆ.