ಸಮ್ಮೇಳನಕ್ಕೆ ನವವಧುವಿನಂತೆ ಶೃಂಗಾರಗೊಂಡ ಗಜೇಂದ್ರಗಡ

| Published : Jan 18 2025, 12:45 AM IST

ಸಮ್ಮೇಳನಕ್ಕೆ ನವವಧುವಿನಂತೆ ಶೃಂಗಾರಗೊಂಡ ಗಜೇಂದ್ರಗಡ
Share this Article
  • FB
  • TW
  • Linkdin
  • Email

ಸಾರಾಂಶ

ಜ. ೧೯, ೨೦ ಹಾಗೂ ೨೧ರಂದು ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣದ ರೋಣ ರಸ್ತೆಯ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಸಿ ಶಾಲೆಯಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ

ಎಸ್.ಎಂ. ಸೈಯದ್ ಗಜೇಂದ್ರಗಡ

ಜಿಲ್ಲಾ ಮಟ್ಟದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ. ಎಲ್ಲೆಡೆ ಕನ್ನಡ ಬಾವುಟ ಹಾರಾಡುತ್ತಿದ್ದು, ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿನ ವಿದ್ಯುತ್ ಕಂಬಗಳಿಗೆ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ ಕನ್ನಡ ಬಾವುಟ ಕಟ್ಟಿದ್ದು, ಸಾಹಿತ್ಯಾಸಕ್ತರ ಹಾಗೂ ಸಾರ್ವಜನಿಕರನ್ನು ಸಮ್ಮೇಳನಕ್ಕೆ ಪಟ್ಟಣವು ಕೈ ಬೀಸಿ ಕರೆಯುತ್ತಿವೆ.

ಜ. ೧೯, ೨೦ ಹಾಗೂ ೨೧ರಂದು ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣದ ರೋಣ ರಸ್ತೆಯ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಸಿ ಶಾಲೆಯಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ೩ ಸಾವಿರಕ್ಕೂ ಹೆಚ್ಚು ಜನರಿಗೆ ಆಸನದ ವ್ಯವಸ್ಥೆ, ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾ ತಂಡ ಹಾಗೂ ಸ್ಥಳೀಯ ಕಲಾ ತಂಡಗಳಿಗೆ ಪ್ರಮಾಣಪತ್ರ ಹಾಗೂ ಪುರಸ್ಕಾರಕ್ಕೆ ಸಿದ್ಧತೆ ಪೂರ್ಣಗೊಂಡಿವೆ.

೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡದ ಮನಸ್ಸುಗಳು ಪಣತೊಟ್ಟಿವೆ. ಅಲ್ಲಲ್ಲಿ ಕನ್ನಡ ಬಾವುಟ, ಬ್ಯಾನರ್‌ ಅಳವಡಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮೂರಿನ ಕನ್ನಡ ಸಮ್ಮೇಳನಕ್ಕೆ ಬನ್ನಿ ಎನ್ನುವ ಸ್ವಾಗತ ಕೋರಿಕೆ ಸಂದೇಶ ಹರಿದಾಡುತ್ತಿದೆ. ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಜಿಲ್ಲೆಯ ಸಮಸ್ಯೆ ಹಾಗೂ ಸವಾಲು ಮತ್ತು ಪರಿಹಾರದ ಸೂತ್ರಗಳ ಬಗ್ಗೆ ವಿವಿಧ ಗೋಷ್ಠಿಗಳಲ್ಲಿ ಚಿಂತನ-ಮಂಥನ ನಡೆಯಲಿದೆ. ಮಕ್ಕಳು, ಯುವ ಕವಿಗಳು ಹಾಗೂ ಹಿರಿಯ ಕವಿಗಳು ತಮ್ಮ ಕವನ ವಾಚಿಸಿದರೆ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಕನ್ನಡ ಸಾಹಿತ್ಯ ಸಮ್ಮೇಳನ ಒದಗಿಸಲಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯದ್ವಾರಕ್ಕೆ ಕಸಾಪ ನಿಕಟಪೂರ್ವ ಅಧ್ಯಕ್ಷ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಅಂದಾನಪ್ಪ ರೇವಡಿ ಹೆಸರು, ಮಹಾಮಂಟಪಕ್ಕೆ ತೋಂಟದಾರ್ಯ ಸಿದ್ದಲಿಂಗ ಶ್ರೀಗಳು, ಹಾಲಕೆರೆಯ ಅನ್ನದಾನ ಶ್ರೀಗಳು ಹಾಗೂ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಮುಖ್ಯ ವೇದಿಕೆಗೆ ಅಂದಾನಪ್ಪ ದೊಡ್ಡಮೇಟಿ, ವಿರೂಪಾಕ್ಷಪ್ಪ ಅಬ್ಬಿಗೇರಿ ಮತ್ತು ಇಡೀ ಮಂಟಪದ ಮುಖ್ಯದ್ವಾರಕ್ಕೆ ಹುಯಿಲಗೋಳ ನಾರಾಯಣರಾವ್, ಪಂಡಿತ ಭೀಮಸೇನ ಜೋಶಿ ಅವರ ಹೆಸರು, ಚಾಮರಸ, ಕುಮಾರವ್ಯಾಸ, ದುರ್ಗಸಿಂಹ, ಗೂಳಪ್ಪ ಕೊಟ್ರಪ್ಪ ಅರಳಿ, ಎಂ.ಡಿ. ಗೋಗೇರಿ, ಸಂಶಿ ಭೂಸನೂರಮಠ ಸೇರಿದಂತೆ ೧೨ ಮಹಾನ್ ಕವಿಗಳನ್ನು ಹೆಸರಿಡಲು ತೀರ್ಮಾನಿಸಲಾಗಿದೆ.

ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಉಪಾಹಾರ ಹಾಗೂ ಊಟದ ವ್ಯವಸ್ಥೆಗಾಗಿ ೧೫ರಿಂದ ೨೦ ಕೌಂಟರ್‌ ಮಾಡಲಾಗಿದೆ. ಜತೆಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ವಿವಿಧ ಪ್ರಕಾಶಕರಿಗೆ ಸಮ್ಮೇಳನದಲ್ಲಿ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ. ಜತೆಗೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮಳಿಗೆ ತೆಗೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಶಾಸಕರು, ಕಸಾಪ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರಾದಿಯಾಗಿ ನೂರಾರು ಕನ್ನಡ ಮನಸ್ಸುಗಳು ಹಲಿರುಳು ಶ್ರಮಿಸುತ್ತಿದ್ದು, ಅವರಿಗೆ ಅನೇಕ ಅಧಿಕಾರಿಗಳು ಸಾಥ್ ನೀಡುತ್ತಿರುವುದು ಎಲ್ಲೆಡೆ ಕನ್ನಡ ಕನ್ನಡ ಎನ್ನುವ ಕೂಗು ಕೇಳಿ ಬರುತ್ತಿವೆ.ಸರ್..

ಗ್ರಾಮೀಣ ಪ್ರದೇಶದವರ ಕಡೆಗಣನೆ ಆರೋಪ

ಗಜೇಂದ್ರಗಡದಲ್ಲಿ ನಡೆಯುತ್ತಿರುವ ೧೦ನೇ ಜಿಲ್ಲಾ ಕನ್ನಡ‌ ಸಾಹಿತ್ಯ ಸಮ್ಮೇಳನಕ್ಕೆ ಗ್ರಾಮೀಣ ಪ್ರದೇಶದವರನ್ನು ಕಡಗಣಿಸಿದ್ದಾರೆ, ನಾಮಕಾವಾಸ್ತೆ ಅಷ್ಟೇ ಅನ್ನೋ ಹಾಗೆ ಕಾಣುತ್ತದೆ, ಗ್ರಾಮೀಣ ಪ್ರದೇಶದವರ ಸಹಕಾರ ಇಲ್ಲದೆ ಕಾರ್ಯಕ್ರಮ ಯಶಸ್ವಿಯಾಗುತ್ತಾ ಎನ್ನುವ ಚರ್ಚೆಗಳು‌ ೧೦ನೇ ಜಿಲ್ಲಾ ಕಸಾಪ ವಾಟ್ಸಪ್ ಗ್ರುಪ್ ನಲ್ಲಿಯೇ ಚರ್ಚೆಗಳು ನಡೆಯುತ್ತಿವೆ. ಆದರೆ ಸಂಬಂಧಿಸಿದ ಪದಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ

ಗಜೇಂದ್ರಗಡ ಪಟ್ಟಣದಲ್ಲಿ ನಡೆಯುತ್ತಿರುವ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅನೇಕ ಪ್ರಥಮಗಳಿಗೆ ಕಾರಣವಾಗುವ ಜತೆಗೆ ಜಿಲ್ಲೆಯ ಗತವೈಭವ ಹಾಗೂ ಇತಿಹಾಸ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಇಲ್ಲಿಯ ಸಮಸ್ಯೆ, ಸವಾಲುಗಳಿಗೆ ಚಿಂತನ ಗೋಷ್ಠಿಗಳ ಮೂಲಕ ಪರಿಹಾರಕ್ಕೆ ಸೂತ್ರ ಕಂಡುಕೊಳ್ಳಲು ಪ್ರಯತ್ನ ನಡೆಯಲಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ ತಿಳಿಸಿದ್ದಾರೆ.

ಪಟ್ಟಣದಲ್ಲಿ ನಡೆಯುತ್ತಿರುವ ಕಸಾಪ ೧೦ನೇ ಜಿಲ್ಲಾ ಸಮ್ಮೇಳನಕ್ಕೆ ಶಾಸಕ ಜಿ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಭಾಗಶಃ ಕಾರ್ಯಕ್ರಮಗಳು ಪೂರ್ಣಗೊಂಡಿದ್ದು, ಆಗಮಿಸುವ ಸಾಹಿತ್ಯಾಸಕ್ತರಿಗೆ ಉತ್ತರ ಕರ್ನಾಟಕ ಶೈಲಿಯ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪ್ರಸಾದ ಸಮಿತಿ ಕಾರ್ಯದರ್ಶಿ ಶಶಿಧರ ಹೂಗಾರ ತಿಳಿಸಿದ್ದಾರೆ.