ಸಾರಾಂಶ
ಗಜೇಂದ್ರಗಡ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಹಾಗೂ ಜನತೆಗೆ ಕಡಿಮೆ ದರದಲ್ಲಿ ಹಸಿವು ನೀಗಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲೆ ಉದ್ಘಾಟನೆಯಾಗಲಿದೆ ಎಂದು ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿನ ಇಂದಿರಾ ಕ್ಯಾಂಟಿನ್‌ಗೆ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ನೀಡುವ ಉಪಾಹಾರ ಹಾಗೂ ಊಟದ ಮಾಹಿತಿ ಪಡೆದ ಬಳಿಕ ಮಾತನಾಡಿದರು.ಕಡಿಮೆ ದರದಲ್ಲಿ ಜನರ ಹಸಿವು ನೀಗಿಸುವ ಆಶಯದಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಬೇಕಾದ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಹಸಿವು ಮುಕ್ತ ಕರ್ನಾಟಕ ಯೋಜನೆ ಅಡಿ ತಾಲೂಕಿಗೆ ಒಂದರಂತೆ ಇಂದಿರಾ ಕ್ಯಾಂಟೀನ್ ಆರಂಭಿಸುವ ಆಶಯದಡಿ ಸಿಎಂ ಸಿದ್ದರಾಮಯ್ಯ ಅವರು ಯೋಜನೆ ಯಶಸ್ಸಿಗೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಶಾಸಕ ಜಿ.ಎಸ್. ಪಾಟೀಲ ಜಾಗ ಗುರುತಿಸಿ ಸಕಾಲದಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಶಾಸಕರನ್ನು ಸಂಪರ್ಕಿಸಿದ್ದು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ ಎಂದ ಅವರು, ಜಿಲ್ಲೆಯ ಬಹುಮುಖ್ಯ ಪಟ್ಟಣಕ್ಕೆ ಶಿಕ್ಷಣ, ವ್ಯಾಪಾರ ಅರಸಿ ನೂರಾರು ವಿದ್ಯಾರ್ಥಿಗಳು ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿಸುವ ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಲಿದೆ. ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗ್ಗೆ ಇಡ್ಲಿ, ಕೇಸರಿ ಬಾತ್, ಜೋಳದ ರೊಟ್ಟಿ, ತರಕಾರಿ, ಅನ್ನ ಹಾಗೂ ಸಾರು ಸೇರಿ ಇತರ ಖಾದ್ಯಗಳನ್ನು ಬೇಡಿಕೆಗೆ ಅನುಗುಣವಾಗಿ ಸಿಬ್ಬಂದಿ ತಯಾರಿಸಲಿದ್ದಾರೆ ಎಂದರು.
"ಪಟ್ಟಣದ ಹೊಟೇಲ್‌ಗಳಲ್ಲಿ ಊಟ ಹಾಗೂ ಉಪಾಹಾರದ ಬೆಲೆ ದುಬಾರಿಯಾಗಿದೆ. ಬಡ ಹಾಗೂ ಮದ್ಯಮ ವರ್ಗದ ಜನರಿಗೆ ಹೊಟೇಲ್‌ಗಳಲ್ಲಿ ದರವು ಕೊಂಚ ಭಾರ ಎನಿಸುವುದು ಸಹಜ. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ಸುದ್ದಿಯು ಜನರಲ್ಲಿ ಖುಷಿಗೆ ಕಾರಣವಾಗಿದೆ. ಆದರೆ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಸುತ್ತಲಿನ ಪ್ರದೇಶದಲ್ಲಿ ಅಸ್ವಚ್ಛತೆ ಹಾಗೂ ಬಯಲು ಮೂತ್ರ ವಿಸರ್ಜನೆ ನಡೆಯುತ್ತಿದೆ. ಅದರಲ್ಲಿ ಸಾರಿಗೆ ಘಟಕದ ಸಿಬ್ಬಂದಿ ಕಂಡರೂ ಕಾಣದಂತಿರುವುದು ವಿಪರ್ಯಾಸ. ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದರೆ ಮಾತ್ರ ವಿದ್ಯಾರ್ಥಿನಿಯರು, ಮಹಿಳೆಯರು ಇಂದಿರಾ ಕ್ಯಾಂಟೀನ್ ಬಳಿ ತೆರಳಲು ಸಾಧ್ಯ. ಇಲ್ಲದ್ದಿದ್ದರೆ ಕ್ಯಾಂಟೀನ್ ಆಶಯಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಸುತ್ತಮುತ್ತಲೂ ಸ್ವಚ್ಛತೆಗೆ ಆದ್ಯತೆ ನೀಡಲು ಸಾರಿಗೆ ಘಟಕ ಹಾಗೂ ಪುರಸಭೆ ಅಧಿಕಾರಿಗಳು ಜಂಟಿಯಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹಗಳು ಸಾರ್ವಜನಕರಿಂದ ಕೇಳಿ ಬರುತ್ತಿವೆ.ಪುರಸಭೆಯ ಶಿವಕುಮಾರ ಇಲಾಳ, ಇಂದಿರಾ ಕ್ಯಾಂಟೀನ್‌ನ ಕಾರ್ತಿಕ್ ಹೆಬ್ಬಳ್ಳಿ, ಪಿ.ಎನ್. ದೊಡ್ಡಮನಿ, ರಾಜು ನಿಶಾನದಾರ, ನಜೀರ ಸಾಂಗ್ಲಿಕರ ಸೇರಿ ಇತರರು ಇದ್ದರು.
"ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ನ ಅಡುಗೆ ಕೊಠಡಿಗಳಲ್ಲಿ ಸಾಮಗ್ರಿಗಳ ಅಳವಡಿಕೆ ಜತೆಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರಾಯೋಗಿಕವಾಗಿ ಸಿದ್ಧಪಡಿಸಿದ ಉಪಾಹಾರ ಹಾಗೂ ಊಟ ಉತ್ತಮ ಗುಣಮಟ್ಟದಿಂದ ಕೂಡಿತ್ತು. ಹೀಗಾಗಿ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಇತ್ತ ಕ್ಯಾಂಟೀನ್ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲೆ ಉದ್ಘಾಟನೆಯಾಗಲಿದ್ದು, ಹಸಿವು ಮುಕ್ತ ಕರ್ನಾಟಕದ ಯೋಜನೆ ಯಶಸ್ಸಿಗೆ ಪುರಸಭೆ ಸಂಪೂರ್ಣ ಸಹಕಾರ ನೀಡಲಿದ್ದು, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಉಪಾಹಾರ ಹಾಗೂ ಊಟ ಸಿಗಲಿದೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಹೇಳಿದರು.