ಗಜೇಂದ್ರಗಡ: ಧಾರ್ಮಿಕ ಕ್ಷೇತ್ರಗಳು ನಮ್ಮನ್ನು ಜಾಗೃತ ಮಾಡಬೇಕಿದೆ. ಆದರೆ ಅವು ಧಾರ್ಮಿಕತೆ ಬಿಟ್ಟು ಉಳಿದ ಎಲ್ಲ ಕೆಲಸಗಳನ್ನು ಮಾಡಲಾರಂಭಿಸಿವೆ. ಎಲ್ಲ ರಂಗದಲ್ಲೂ ದಾರಿ ತಪ್ಪುವ ಪ್ರಸಂಗಗಳನ್ನು ನೋಡುತ್ತಿದ್ದೇವೆ. ಆದರೆ, ಗಜೇಂದ್ರಗಡದ ಸೌಹಾರ್ದತೆ ಮೆಚ್ಚಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನಬಸವಲಿಂಗ ಶ್ರೀಗಳು ತಿಳಿಸಿದರು.
ಪಟ್ಟಣದ 9ನೇ ವಾರ್ಡಿನಲ್ಲಿ ನವೀಕರಣಗೊಂಡ ದಕ್ಕಣಿ ಮಸೀದಿಯನ್ನು ಉದ್ಘಾಟಿಸಿ ಮಾತನಾಡಿದರು.ಪಟ್ಟಣದಲ್ಲಿ ೧೮ ಗುಡಿ, ೧೮ ಬಾವಿ ಹಾಗೂ ೧೮ ಮಸೀದಿ ಹೇಳಲಿಕ್ಕೆ ಅಲ್ಲ. ಊರ ಹೊರಗಿನ ಜಗಳಗಳು ನಮ್ಮ ಊರಿನಲ್ಲಿ ಬೇಡ ಎಂದು ಕೆಲಸ ಮಾಡುತ್ತಿದ್ದೀರಿ. ಇದು ದೇವರ ಆಶೀರ್ವಾದ ಎಂದು ತಿಳಿದುಕೊಳ್ಳುತ್ತೇವೆ. ಗೋಗೇರಿ ಗ್ರಾಮದ ಅನ್ನದಾನೇಶ್ವರ ಮಠಕ್ಕೆ ಚೇರಮನ್ ಬಾಗವಾನ ಇದ್ದಾನೆ. ಹೊಸಪೇಟೆ ಮಠದಲ್ಲಿ ರಥೋತ್ಸವದಲ್ಲಿ ಸರ್ವಧರ್ಮ ಸಮನ್ವಯ ಹಿನ್ನೆಲೆ ಎಲ್ಲ ಧರ್ಮಗಳ ಗ್ರಂಥಗಳನ್ನು ಇಟ್ಟು ರಥೋತ್ಸವ ನಡೆಸುತ್ತೇವೆ. ಗಜೇಂದ್ರಗಡದ ಹಿಂದೂ- ಮುಸ್ಲಿಮರು ಮಾವ, ಕಾಕಾ ಹಾಗೂ ಚಿಕ್ಕಪ್ಪ ಎಂದುಕೊಂಡು ಸೌಹಾರ್ದ ಕಾಪಾಡಿಕೊಂಡು ಹೋಗುತ್ತಿದ್ದಾರೆ. ನಾವು ಉಳಿಸಬೇಕಾಗಿರುವುದು ಸೌರ್ಹಾದತೆ ಎಂದರು.
ಮಂದಿರ, ಮಸೀದಿಗಳು ನಮ್ಮ ಆತ್ಮಸಂತೋಷಕ್ಕಾಗಿ ಇರಬೇಕು ವಿನಾ ನಮ್ಮ ಯಾವುದೇ ವೈಯಕ್ತಿಕವಾಗಿರಲಿ, ವ್ಯವಹಾರಿಕ ಪ್ರತಿಷ್ಠೆಗಳಿಗೆ ಬಿದ್ದಾಗ ಅದರಿಂದಾಗುವ ಹಾನಿ ಬಹಳಷ್ಟು ದೊಡ್ಡದು ಎಂಬ ಪ್ರಜ್ಞೆ ಎಲ್ಲರಿಗೂ ಬರಬೇಕು. ನಮಗೆ ವೈಯಕ್ತಿಕತೆಗಳು ಮುಖ್ಯವಲ್ಲ, ಸಾಮೂಹಿಕವಾಗಿ ಬದುಕುವಂತಹ ತತ್ವಗಳು ಮುಖ್ಯ ಎಂಬ ಸಂದೇಶ ನಿರಂತರವಾಗಿ ಸಾಗಲಿ ಎಂದರು.ಈ ವೇಳೆ ಟಕ್ಕೇದ ದರ್ಗಾ ಹಜರತ್ ನಿಜಾಮುದ್ದೀನ ಶಾ ಮಕಾನದಾರ ಮಾತನಾಡಿದರು. ಮಿಥುನ ಪಾಟೀಲ, ಎಚ್.ಎಸ್. ಸೋಂಪುರ, ಸಿದ್ದಣ್ಣ ಬಂಡಿ, ಎ.ಡಿ. ಕೋಲಕಾರ, ಮಂಗಲಾ ದೇಶಮುಖ, ರಾಜು ಸಾಂಗ್ಲೀಕರ, ಬಸವರಾಜ ವದೆಗೋಳ, ಗುಂಡಪ್ಪ ಅಂಗಡಿ, ಹಸನ ತಟಗಾರ, ಬಸವಂತಪ್ಪ ಪಲ್ಲೇದ, ಮುರ್ತುಜಾ ಒಂಟಿ, ತಿಪ್ಪಣ್ಣ ಪಲ್ಲೇದ, ಅಮರೇಶ ಗಾಣಿಗೇರ, ಗುಲಾಂ ಹುನಗುಂದ, ಶಿವು ಚವ್ಹಾಣ, ಸುರೇಶ ಚವಡಿ, ಅಶೋಕ ವದೆಗೋಳ ಸೇರಿ ಇತರರು ಇದ್ದರು.