ಕುಂದಾಪುರ: ಪ್ರತಿಭೆ, ಸಾಮರ್ಥ್ಯ ಮತ್ತು ಸಾಧಿಸುವ ಹಂಬಲ ಇರುವವರಿಗೆ ಬಡತನ ಅಡ್ಡಿಯಾಗಬಾರದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಅವರು ಇಲ್ಲಿನ ಕೋಟೇಶ್ವರದಲ್ಲಿ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಹಾಗೂ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಆಯೋಜಿಸಿದ್ದ ಶಿಕ್ಷಣಕ್ಕೆ ನೆರವು ವಿತರಿಸುವ ‘ಸೇವಾ ಸಂಕಲ್ಪ’ವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ನೆರವಾಗುವುದರ ಜೊತೆಗೆ 4,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಉದ್ಯಮಿ ಸಂಪತ್ ಶೆಟ್ಟಿ ಅವರ ಈ ಸೇವಾ ಸಂಕಲ್ಪ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಸರ್ಕಾರಗಳು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿರುವ ಈ ಹೊತ್ತಿನಲ್ಲಿ ಉದ್ಯಮಿ ಸಂಪತ್ ಶೆಟ್ಟಿ ತಮ್ಮ ಆದಾಯವನ್ನು ಸಮಾಜ ಸೇವೆಗೆ ಮೀಸಲಿಟ್ಟು, ವಿದ್ಯಾರ್ಥಿವೇತನ ಹಾಗೂ ದತ್ತು ಸ್ವೀಕಾರದಂತಹ ಯೋಜನೆಗಳನ್ನು ಹಮ್ಮಿಕೊಂಡಿರುವುದು ಮಾದರಿ ಕೆಲಸ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಮುಖ್ಯಸ್ಥ ಸಂಪತ್‌ ಶೆಟ್ಟಿ, ಸಮಾಜದಲ್ಲಿ ಬದಲಾವಣೆ ಶಿಕ್ಷಣದಿಂದ ಮಾತ್ರವೇ ಸಾಧ್ಯ, ಪ್ರತಿಭಾವಂತ ಬಡ ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಲು ನಾವು ಈ ಸೇವಾ ಸಂಕಲ್ಪ ಹಮ್ಮಿಕೊಂಡಿದ್ದೇವೆ. ನಮ್ಮ ಸಂಸ್ಥೆಯಿಂದ ನೆರವು ಪಡೆದ ವಿದ್ಯಾರ್ಥಿಗಳು ಮುಂದೆ ದೇಶ ಮೆಚ್ಚುವ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಬೆಳೆಯಬೇಕು ಎನ್ನುವುದೇ ನನ್ನ ದೊಡ್ಡ ಆಶಯ ಎಂದು ಭಾವನಾತ್ಮಕವಾಗಿ ನುಡಿದರು.ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಪ್ರಾಂಶುಪಾಲ ಡಾ. ಕೊತ್ತಾಡಿ ಉಮೇಶ್ ಶೆಟ್ಟಿ, ಯುವ ಮೆರಿಡಿಯನ್ ಆಡಳಿತ ನಿರ್ದೇಶಕರಾದ ಬಿ. ಉದಯಕುಮಾರ್ ಶೆಟ್ಟಿ, ಬಿ. ವಿನಯಕುಮಾರ್ ಶೆಟ್ಟಿ, ಪತ್ರಕರ್ತ ರಾಜೇಶ್ ಕೆ.ಸಿ., ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹಾಗೂ ಸೋನಾಲಿ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಸಂತೋಷ್ ಶೆಟ್ಟಿ ಎಳ್ಳಂಪಳ್ಳಿ ನಿರೂಪಿಸಿದರು. ಶ್ರೀನಿವಾಸ ಶೆಟ್ಟಿ ವಂದಿಸಿದರು.ನಂತರ ಈ ಸೇವಾ ಸಂಕಲ್ಪ ಕಾರ್ಯಕ್ರಮದಲ್ಲಿ ಒಟ್ಟು 93 ಲಕ್ಷ ರು.ಗೂ ಅಧಿಕ ಮೊತ್ತದ ಸವಲತ್ತುಗಳನ್ನು ವಿತರಿಸಲಾಯಿತು. ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿಗೆ 50 ಮತ್ತು 6 ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರು, ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಆರ್ಥಿಕ ನೆರವು, ಅತಿಥಿ ಶಿಕ್ಷಕರಿಗೆ ವೇತನ ಭತ್ಯೆ, ಬಡವರಿಗಾಗಿ ವೈದ್ಯಕೀಯ ಚಿಕಿತ್ಸಾ ವೆಚ್ಚ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್, ಕೊಡೆಗಳನ್ನು ವಿತರಿಸಲಾಯಿತು. ಒಟ್ಟು 19 ಬಡ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕಾಗಿ ದತ್ತು ಸ್ವೀಕರಿಸಲಾಯಿತು.