ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಯಡಿ 47 ಲಕ್ಷ ರೂ. ವೆಚ್ಚದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಸಂಸದ ಪ್ರತಾಪ್ ಸಿಂಹ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಂಗಳವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೇಂದ್ರ ಸರ್ಕಾರದಿಂದ ಪ್ರತೀ ಗ್ರಾಮ ಪಂಚಾಯಿತಿಗೆ 38 ಲಕ್ಷ ರು.ನಷ್ಟು ನೇರವಾಗಿ ಅನುದಾನ ಬಿಡುಗಡೆಯಾಗುತ್ತಿದ್ದು, ಗ್ರಾ.ಪಂ.ಗಳು ಆರ್ಥಿಕವಾಗಿ ಸಬಲತೆ ಹೊಂದುವುದರ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ್ದಾರೆ.ಕೇಂದ್ರದಿಂದ 14-15ನೇ ಹಣಕಾಸು ಆಯೋಗದಿಂದ ಪಂಚಾಯಿತಿ ಸೇವಾ ಕೇಂದ್ರದಡಿ ಗ್ರಾ.ಪಂ.ಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗ್ರಾಮೀಣ ರಸ್ತೆ, ಚರಂಡಿ ಮತ್ತಿತರ ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ ಎಂದರು.
ಗಾಳಿಬೀಡು ಗ್ರಾ.ಪಂ.ಸೇರಿದಂತೆ ಕೊಡಗು ಜಿಲ್ಲೆಯ 60 ಕ್ಕೂ ಹೆಚ್ಚು ಕಡೆಗಳಲ್ಲಿ ಮೊಬೈಲ್ ಟವರ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದರು.ಗ್ರಾ.ಪಂ.ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಂಸದರ ನಿಧಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪ್ರತಾಪ್ ಸಿಂಹ ನುಡಿದರು.
ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಶ್ರಿರಂಗಪಟ್ಟಣ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸಂಪಾಜೆ-ಮಾಣಿ ರಸ್ತೆ ಅಭಿವೃದ್ಧಿ ಹಾಗೂ ಕರಿಕೆ-ಭಾಗಮಂಡಲ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಅಮೃತ ಯೋಜನೆಯಡಿ 146 ಕೋಟಿ ರು. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು. ಪೈಪ್‌ಲೈನ್ ಮೂಲಕ ಎಲ್ಪಿಜಿ ವಿತರಣೆ: ನಲ್ಲಿ ನೀರು ಸಂಪರ್ಕ, ಅಡುಗೆ ಅನಿಲ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು, ಪೈಪ್ ಮೂಲಕ ಅಡುಗೆ ಅನಿಲ ಪೂರೈಸಲಾಗುವುದು ಎಂದರು. ಕೊಡಗು ಜಿಲ್ಲೆಗೆ ಹೆಚ್ಚಿನ ಗಮನಹರಿಸಲಾಗುವುದು, 15 ನೇ ಹಣಕಾಸು ಯೋಜನೆಯಡಿ ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಾವಿರ ಮನೆ ನಿರ್ಮಾಣಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಅನುಮೋದನೆ ನೀಡಿದ್ದು, ವಸತಿ ಇಲ್ಲದ, ನಿವೇಶನ ಇರುವವರ ಗ್ರಾ.ಪಂ. ಮೂಲಕ ಪಟ್ಟಿ ಒದಗಿಸುವಂತೆ ಗ್ರಾ.ಪಂಗಳಿಗೆ ತಿಳಿಸಿದರು.
ಮಡಿಕೇರಿ ನಗರಕ್ಕೆ ನೀರು ಪೂರೈಕೆಯಾಗುವ ಕೂಟುಹೊಳೆ, ಕುಂಡಾಮೇಸ್ತ್ರಿ ಕುಡಿಯುವ ನೀರು ಯೋಜನೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆಯಿಂದ 300 ಕೋಟಿ ರು. ಬಿಡುಗಡೆಗೆ ಒಪ್ಪಿಗೆ ನೀಡಿದ್ದು, ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸುವಂತೆ ತಿಳಿಸಿದರು.ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಬೇಕು. ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಪಂದಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ತಿಳಿಸಿದರು.
ಗ್ರಾ.ಪಂ.ಸದಸ್ಯ ಸುಭಾಷ್ ಸೋಮಯ್ಯ ಅವರು ಗ್ರಾ.ಪಂ.ಅಭಿವೃದ್ಧಿ ಸಂಬಂಧಿಸಿದಂತೆ ಮಾತನಾಡಿ ಡಿಜಿಟಲ್ ಗ್ರಂಥಾಲಯ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕೊಠಡಿ, ಸಭಾ ಕೊಠಡಿ, ಸಭೆ ಸಮಾರಂಭ ನೆರವೇರಿಸಲು ಸಭಾಂಗಣ ಹೀಗೆ ಹಲವು ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಗ್ರಾ.ಪಂ.ಭವನ ನಿರ್ಮಾಣ ಆಗಿದೆ ಎಂದರು.ಗ್ರಾ.ಪಂ. ಅಧ್ಯಕ್ಷೆ ಉಷಾ, ತಾ.ಪಂ.ಇಒ ಶೇಖರ್ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷ ಪೆಮ್ಮಯ್ಯ ಪಿಡಿಒ ಶಶಿಕಿರಣ ಹಾಗೂ ಸದಸ್ಯರು, ಸಿಬ್ಬಂದಿ ಹಾಜರಿದ್ದರು.