ದಾನಶೂರ ಬಲಿ ಚಕ್ರವರ್ತಿಯು ಕೊಟ್ಟ ಮಾತಿಗೆ ಬದ್ಧನಾಗಿ ತನ್ನ ಸರ್ವಸ್ವವನ್ನೂ ಭಗವಂತನಿಗೆ ಅರ್ಪಿಸಿದಾಗ, ವಾಮನ ರೂಪದಲ್ಲಿ ಬಂದ ಶ್ರೀಮನ್ನಾರಾಯಣ ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಶಿರದ ಮೇಲಿಟ್ಟು ಪಾತಾಳಕ್ಕೆ ತುಳಿಯುವ ಮೂಲಕ ಆತನನ್ನು ಉದ್ಧರಿಸಿದ ಎಂದು ಸಂಸ್ಕೃತ ವಿದ್ವಾಂಸ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ವಿದ್ವಾನ್ ಪರಮೇಶ್ವರ ವಿ. ಭಟ್ ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ದಾನಶೂರ ಬಲಿ ಚಕ್ರವರ್ತಿಯು ಕೊಟ್ಟ ಮಾತಿಗೆ ಬದ್ಧನಾಗಿ ತನ್ನ ಸರ್ವಸ್ವವನ್ನೂ ಭಗವಂತನಿಗೆ ಅರ್ಪಿಸಿದಾಗ, ವಾಮನ ರೂಪದಲ್ಲಿ ಬಂದ ಶ್ರೀಮನ್ನಾರಾಯಣ ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಶಿರದ ಮೇಲಿಟ್ಟು ಪಾತಾಳಕ್ಕೆ ತುಳಿಯುವ ಮೂಲಕ ಆತನನ್ನು ಉದ್ಧರಿಸಿದ ಎಂದು ಸಂಸ್ಕೃತ ವಿದ್ವಾಂಸ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ವಿದ್ವಾನ್ ಪರಮೇಶ್ವರ ವಿ. ಭಟ್ ಹೇಳಿದರು.ನಗರದ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ಭಾನುವಾರ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಹಾಸನ ಜಿಲ್ಲಾ ಘಟಕ ಆಯೋಜಿಸಿದ್ದ ಗಮಕ ಕಾರ್ಯಕ್ರಮದಲ್ಲಿ ರಂಗರಾವ್ ಚಂದ್ರಶೇಖರ ವಿರಚಿತ ಕನ್ನಡ ಭಾಗವತದ ‘ಬಲಿಯ ಮೋಕ್ಷ’ ಕಾವ್ಯಭಾಗಕ್ಕೆ ವ್ಯಾಖ್ಯಾನ ನೀಡುತ್ತಾ ಅವರು ಮಾತನಾಡಿ, ಬಲಿ ಚಕ್ರವರ್ತಿಯ ಕಾರಣದಿಂದ ಇಂದ್ರಪದವಿಯನ್ನು ಕಳೆದುಕೊಂಡ ದೇವತೆಗಳು ಸಂಕಷ್ಟಕ್ಕೆ ಸಿಲುಕಿದಾಗ, ಅವರ ತಾಯಿ ಅದಿತಿಯು ಮಕ್ಕಳಿಗೆ ಮತ್ತೆ ಇಂದ್ರಲೋಕ ದೊರಕಿಸಿಕೊಡುವ ಉದ್ದೇಶದಿಂದ ಶ್ರೀಮನ್ನಾರಾಯಣನನ್ನು ಪ್ರಾರ್ಥಿಸುತ್ತಾಳೆ. ಆಕೆಯ ಪ್ರಾರ್ಥನೆಗೆ ಸ್ಪಂದಿಸಿದ ಭಗವಂತ ವಾಮನ ರೂಪದಲ್ಲಿ ಬಲಿಚಕ್ರವರ್ತಿ ನಡೆಸುತ್ತಿದ್ದ ಅಶ್ವಮೇಧ ಯಾಗಕ್ಕೆ ತೆರಳಿ, ಯಾಚಕನಾಗಿ ಮೂರು ಅಡಿ ಭೂಮಿಯನ್ನು ದಾನವಾಗಿ ಕೇಳುತ್ತಾನೆ ಎಂದು ವಿವರಿಸಿದರು. ವಾಮನನ ಉದ್ದೇಶವನ್ನು ಅರಿತ ಗುರು ಶುಕ್ರಾಚಾರ್ಯರು ವೇದಶಾಸ್ತ್ರಗಳ ಆಧಾರದಲ್ಲಿ ಬಲಿಗೆ ಎಚ್ಚರಿಕೆ ನೀಡಿದರೂ, ಕೊಟ್ಟ ಮಾತಿಗೆ ತಪ್ಪಬಾರದೆಂಬ ಸಂಕಲ್ಪದಿಂದ ಬಲಿ ಚಕ್ರವರ್ತಿ ಮೂರು ಅಡಿ ಭೂಮಿಯನ್ನು ನೀಡಲು ಒಪ್ಪುತ್ತಾನೆ. ಇದರಿಂದ ಕೋಪಗೊಂಡ ಶುಕ್ರಾಚಾರ್ಯರು ಬಲಿಗೆ ಶಾಪ ನೀಡುತ್ತಾರೆ. ಬಳಿಕ ವಾಮನನು ತ್ರಿವಿಕ್ರಮನಾಗಿ ಬೆಳೆದು ಎರಡು ಹೆಜ್ಜೆಗಳಲ್ಲಿ ಭೂಮಿ ಮತ್ತು ಆಕಾಶವನ್ನು ಅಳೆದು, ಮೂರನೇ ಹೆಜ್ಜೆಗೆ ಬಲಿಯೇ ತನ್ನ ಶಿರವನ್ನು ಅರ್ಪಿಸುತ್ತಾನೆ. ಈ ಪ್ರಸಂಗದಲ್ಲಿ ಬಲಿಯ ತ್ಯಾಗ, ವಚನಪಾಲನೆ ಹಾಗೂ ಭಗವಂತನ ಕರುಣೆಯ ಮಹತ್ವ ಅಡಗಿದೆ ಎಂದು ಪರಮೇಶ್ವರ ಭಟ್ ತಮ್ಮ ವಿದ್ವತ್ಪೂರ್ಣ ವ್ಯಾಖ್ಯಾನದ ಮೂಲಕ ವಿವರಿಸಿದರು.
ಕುಮಾರಿ ಧೃತಿ ಭಟ್ ಅವರು ತಮ್ಮ ಇಂಪಾದ ಕಂಠದಿಂದ ಕಾವ್ಯ ಗಾಯನ ನಡೆಸಿಕೊಟ್ಟು ಶ್ರೋತೃಗಳ ಗಮನ ಸೆಳೆದರು. ಇದಕ್ಕೂ ಮೊದಲು ಹನ್ನೊಂದು ದಿನಗಳ ‘ಗಮಕ ಸಂಭ್ರಮ’ ಕಾರ್ಯಕ್ರಮವನ್ನು ಕರ್ನಾಟಕ ಗಮಕ ಕಲಾ ಪರಿಷತ್ತಿನ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ, ಕರ್ನಾಟಕ ಕಲಾಶ್ರೀ ಗಣೇಶ್ ಉಡುಪ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ. ಜಿ. ಎನ್. ಅನಸೂಯ ಸ್ವಾಗತಿಸಿದರು. ದೇವಾಲಯದ ಸಂಚಾಲಕ ರಮೇಶ್ ಅವರು ಕಲಾವಿದರು, ಶ್ರೋತೃಗಳು ಹಾಗೂ ಪ್ರಾಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.