ಗಮಕ ಅಪೂರ್ವ, ಶ್ರೇಷ್ಠವಾದ ಕಲಾ ಪ್ರಕಾರ: ಡಾ.ಸತೀಶ್ಚಂದ್ರ ಎಸ್.

| Published : Jan 24 2024, 02:02 AM IST

ಗಮಕ ಅಪೂರ್ವ, ಶ್ರೇಷ್ಠವಾದ ಕಲಾ ಪ್ರಕಾರ: ಡಾ.ಸತೀಶ್ಚಂದ್ರ ಎಸ್.
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಾಲು ಎಸ್. ಡಿ.ಎಂ. ಪ್ರೌಢಶಾಲೆಯಲ್ಲಿ ಜರುಗಿದ ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಅಪಾಯದ ಅಂಚಿನಲ್ಲಿರುವ ಗಮಕ ಕಲೆಯನ್ನು ಆಧುನಿಕತೆಯ ಮಧ್ಯೆ ಸಂರಕ್ಷಿಸಬೇಕಾದ ಅಗತ್ಯವಿದೆ. ಗಮಕ ಅಪೂರ್ವ ಹಾಗೂ ಶ್ರೇಷ್ಠವಾದ ಕಲಾ ಪ್ರಕಾರವಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ವಿಚಾರ ವಿನಿಮಯಗಳಿಗೆ ಪೂರಕವಾಗಿದೆ ಎಂದು ಎಸ್. ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು.

ಅವರು ಶನಿವಾರ ಬೆಳಾಲು ಎಸ್. ಡಿ.ಎಂ. ಪ್ರೌಢಶಾಲೆಯಲ್ಲಿ ಜರುಗಿದ ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಗಮಕ ಕಾವ್ಯ- ಸಂಗೀತದ ಅಪೂರ್ವ ಸಂಗಮವಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರಾವಣ ಮಾಸದಲ್ಲಿ ಕಳೆದ 50 ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳು ನಡೆದು ಬರುತ್ತಿರುವುದು ಈ ಕಲೆಯನ್ನು ಬೆಳೆಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಗಮಕದ ಪ್ರಾಮುಖ್ಯ ಹಾಗೂ ಅದರ ವಿಚಾರ ತಿಳಿದರೆ ಇದು ಇನ್ನಷ್ಟು ಬೆಳೆಯುತ್ತದೆ ಹಾಗೂ ಭವಿಷ್ಯದಲ್ಲಿ ತನ್ನ ವಿಶಿಷ್ಟತೆಯ ಛಾಪನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿದರು.

ಎಂ.ಎಲ್. ಸಿ. ಪ್ರತಾಪ ಸಿಂಹ ನಾಯಕ್ ಮಾತನಾಡಿ ‘ಹೆಚ್ಚಿನ ಸಾಹಿತ್ಯ ಪ್ರಕಾರಗಳು ನೇರವಾಗಿ ಆಧ್ಯಾತ್ಮಿಕ ಸಂಬಂಧ ಹೊಂದಿವೆ. ನಮ್ಮೊಳಗಿನ ದೈವಿಕ ಭಾವವನ್ನು ಅವು ಎಚ್ಚರಗೊಳಿಸುತ್ತವೆ. ಕಠಿಣ ಸಾಹಿತ್ಯ ಸುಲಭ ಸಾಹಿತ್ಯವಾದರೆ ಅದಕ್ಕೆ ಮಹತ್ವ ಇರುವುದಿಲ್ಲ. ಗಮಕವು ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಜಯರಾಮ ಕುದ್ರೆತ್ತಾಯ ಮಾತನಾಡಿ ‘ಹರಿಹರ, ರಾಘವಾಂಕ, ಕುಮಾರವ್ಯಾಸ ಮೊದಲಾದ ಪುರಾಣ ಕವಿಗಳು ಬರೆದಿರುವ ಗ್ರಂಥಗಳ ಸಾರವನ್ನು ಓದಿ ವಿವರಿಸುವುದೇ ಗಮಕ. ಪುರಾಣದ ವಿಚಾರಗಳನ್ನು ಪ್ರಸ್ತುತಪಡಿಸಲು ಆಸಕ್ತಿ ಮತ್ತು ದೇವತಾ ಪ್ರೇರಣೆ ಮುಖ್ಯ ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ‌.ಶ್ರೀನಾಥ್, ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಮಾತನಾಡಿದರು.

ಬಿ.ಇ.ಒ. ತಾರಕೇಸರಿ, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಭುಜಬಲಿ ಧರ್ಮಸ್ಥಳ, ಗಮಕ ತಾಲೂಕು ಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ, ಬೆಳಾಲು ಪ್ರೌಢಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶೇಖರ ಗೌಡ ಕೊಲ್ಲಿಮಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕನಿಕ್ಕಿಲ ಮತ್ತಿತರರು ಉಪಸ್ಥಿತರಿದ್ದರು.

ತಾಲೂಕು ಗಮಕ ಪರಿಷತ್ತಿನ ಕಾರ್ಯದರ್ಶಿ ಮೇಧಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ಸ್ವಾಗತಿಸಿದರು. ಸುವರ್ಣ ಕುಮಾರಿ ಗೇರುಕಟ್ಟೆ ವಂದಿಸಿದರು.

ಗಮಕ ಸಮ್ಮೇಳನದ ಅಧ್ಯಕ್ಷ ಜಯರಾಮ ಕುದ್ರೆತ್ತಾಯ ಮತ್ತು ಕುಸುಮಾ ದಂಪತಿ, ನಿವೃತ್ತ ಶಿಕ್ಷಕಿ,ಕಲಾವಿದೆ ಮನೋರಮ ತೋಳ್ಪಾಡಿತ್ತಾಯ ಹಾಗೂ ಗಮಕಿ ಲಕ್ಷ್ಮಣ ಗೌಡ ಪುಳಿತ್ತಡಿಯವರನ್ನು ಸನ್ಮಾನಿಸಲಾಯಿತು.

ಪ್ರೋತ್ಸಾಹ ಅಗತ್ಯ

ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯ ಮಾತನಾಡಿ, ಗಮಕ ಕಲಾ ಪ್ರಕಾರಕ್ಕೆ ಶಿಕ್ಷಣ ಇಲಾಖೆಯಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿದೆ. ಪ್ರತಿ ಶಾಲೆಯಲ್ಲಿ ವರ್ಷಕ್ಕೊಂದು ಗಮಕ ಕಾರ್ಯಕ್ರಮ ನಡೆಸಲು ಸುತ್ತೋಲೆ ಹೊರಡಿಸಬೇಕು. ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಹೆಚ್ಚಿನ ಉತ್ಸಾಹ ತೋರಿಸಬೇಕು. ಶಿಕ್ಷಕರಿಗೂ ಗಮಕದ ಮಹತ್ವದ ಕುರಿತು ತಿಳಿಸುವ ಕೆಲಸವಾಗಬೇಕು. ಪುರಾತನ ಕಲೆಯಾದ ಗಮಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷ ಅವಕಾಶಗಳನ್ನು ನೀಡಬೇಕು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಗಮಕಕ್ಕೆ ವಿಶೇಷ ಸ್ಥಾನಮಾನಗಳು ಸಿಗಬೇಕಾಗಿದೆ.ಈ ಗಮಕ ಸಮ್ಮೇಳನದಲ್ಲಿ ಕುಮಾರವ್ಯಾಸನ ಕಾವ್ಯಗಳ ಪ್ರಬಂಧ, ಪದ್ಯಗಳ ಕಂಠಪಾಠ ಸ್ಪರ್ಧೆ ಏರ್ಪಡಿಸಿರುವುದು ರಾಜ್ಯದಲ್ಲೆ ಪ್ರಥಮ ಎಂದು ಹೇಳಿದರು.