ಪಾಠಗಳ ಜತೆ ಆಟವೂ ಮುಖ್ಯ: ರಾಜು ಬಿರಾದಾರ

| Published : Dec 22 2023, 01:30 AM IST

ಸಾರಾಂಶ

ಮಕ್ಕಳಿಗೆ ಪಾಠಗಳ ಜೊತೆಗೆ ಆಟವೂ ತುಂಬಾ ಮುಖ್ಯ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯ: ಸೈಕ್ಲಿಂಗ್ ಅಮೆಚೂರ್ ಸಂಘದ ರಾಜ್ಯಾಧ್ಯಕ್ಷ ರಾಜು ಬಿರಾದಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಮಕ್ಕಳಿಗೆ ಪಾಠಗಳ ಜೊತೆಗೆ ಆಟವೂ ತುಂಬಾ ಮುಖ್ಯ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯ ಎಂದು ಸೈಕ್ಲಿಂಗ್ ಅಮೆಚೂರ್ ಸಂಘದ ರಾಜ್ಯಾಧ್ಯಕ್ಷ ರಾಜು ಬಿರಾದಾರ ಹೇಳಿದ್ದಾರೆ.

ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳಲ್ಲಿಯೂ ಶ್ರಮವಹಿಸಿ ಶ್ರದ್ಧೆಯಿಂದ ತೊಡಗಿಸಿಕೊಂಡರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಿ ಜೀವನ ರೂಪಿಸಿಕೊಳ್ಳಬಹುದು. ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಬಹುದು. ಕ್ರೀಡಾಪಟುಗಳಿಗೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಮಿಸಲಾತಿ ಸಿಗಲಿದೆ ಎಂದು ತಿಳಿಸಿದ ಅವರು, ಕ್ರೀಡಾ ಸಾಧಕರ ಸಾಧನೆ ಮತ್ತು ಕೊಡುಗೆಯನ್ನು ಉದಾಹರಣೆ ಸಹಿತ ವಿವರಿಸಿದರು.

ಬಿ ಎಲ್ ಡಿ ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಪ್ರೊ.ಎಸ್.ಎಸ್. ಕೋರಿ ಅವರು ಮಕ್ಕಳ ಕವಾಯತು ನಮನ ಸ್ವೀಕರಿಸಿದರು. ಶಾಲಾ ಆಡಳಿತಾಧಿಕಾರಿ ಕೌಶಿಕ್ ಬ್ಯಾನರ್ಜಿ ಕ್ರೀಡಾಜ್ಯೋತಿಗೆ ಚಾಲನೆ ನೀಡಿದರು. ಜುಂಬಾ ನೃತ್ಯ, ಕಂಸಾಳೆ ಕುಣಿತ, ಯೋಗ, ಕರಾಟೆ ಪ್ರದರ್ಶನ, ಪ್ರೇಕ್ಷಕರನ್ನು ರಂಚಿಸಿದವು. ನಂತರ ರಿಲೇ, 100 ಮೀ. ಮತ್ತು 200 ಮೀ ಅಂತಿಮ ಸುತ್ತಿನ ಓಟದ ಸ್ಪರ್ಧೆಗಳು ಹಾಗೂ ವಿವಿಧ ಬಗೆಯ ಕ್ರೀಡೆಗಳು ಗಮನ ಸೆಳೆದವು. ವಿಜೇತ ಸದನದ ತಂಡಕ್ಕೆ ಅತಿಥಿಗಳು ಟ್ರೋಫಿ ವಿತರಿಸಿದರು. ಶಾಲೆಯ ಪ್ರಾಚಾರ್ಯೆ ಬಂಧನಾ ಬ್ಯಾನರ್ಜಿ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಜಲನಗರ ಉಪಶಾಖೆಯ ಪ್ರಾಚಾರ್ಯ ದರ್ಶನ ಹುನಗುಂದ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಮುಖ್ಯಸ್ಥೆ ನೀತಾ ಮಠ ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಸಾಯಿರಾ ಶೇಖ ವಂದಿಸಿದರು.