ಸಾರಾಂಶ
ನಗರದ ರಾಘವ ಕಲಾ ಮಂದಿರದಲ್ಲಿನ ಸಂಗೀತ ಸಭಾಂಗಣದಲ್ಲಿ ಸಿದ್ಧರಾಂಪುರದ ಗಾನಲಹರಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಉದ್ಘಾಟನೆಗೊಂಡಿತು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ರಾಘವ ಕಲಾ ಮಂದಿರದಲ್ಲಿನ ಸಂಗೀತ ಸಭಾಂಗಣದಲ್ಲಿ ಸಿದ್ಧರಾಂಪುರದ ಗಾನಲಹರಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಉದ್ಘಾಟನೆಗೊಂಡಿತು.ಚಾಲನೆ ನೀಡಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದೆ ಆದವಾನಿ ಬಿ.ವೀಣಾಕುಮಾರಿ ಬಳ್ಳಾರಿ ಜಿಲ್ಲೆ ಸಂಗೀತ ಕ್ಷೇತ್ರ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ನೀಡಿರುವ ಅಪಾರ ಕೊಡುಗೆ ಸ್ಮರಿಸಿದರು. ಬಳ್ಳಾರಿ ಜಿಲ್ಲೆಯ ಅನೇಕ ಸಂಗೀತ ಕಲಾ ಟ್ರಸ್ಟ್‌ಗಳು ಈ ನೆಲದ ಸಂಸ್ಕೃತಿ ಹಾಗೂ ಕಲಾ ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತಿವೆ. ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಗಾನಲಹರಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಸಹ ಇದೇ ಹಾದಿಯಲ್ಲಿ ಮುನ್ನಡೆಯಲಿ. ವಿವಿಧ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕನ್ನಡದ ಕಂಪನ್ನು ಪಸರಿಸಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಶಾನವಾಸಪುರ ನಾಗನಗೌಡ ಮಾತನಾಡಿ, ಬಳ್ಳಾರಿ ಜಿಲ್ಲೆಯ ರಂಗಭೂಮಿ ಪರಂಪರೆಯಲ್ಲಿ ಬಳ್ಳಾರಿ ರಾಘವರು, ಶಿಡಗಿನಮೊಳ ಚಂದ್ರಯ್ಯಸ್ವಾಮಿ, ಬೆಳಗಲ್ಲು ವೀರಣ್ಣನವರು, ಸುಭದ್ರಮ್ಮ ಮನ್ಸೂರು ಅವರು ಬಹುದೊಡ್ಡ ಸಾಧನೆ ಮಾಡಿದ ಜಿಲ್ಲೆಯ ಕೀರ್ತಿಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳಗಿದ್ದಾರೆ. ಈ ಪರಂಪರೆ ಮುಂದುವರಿಯಬೇಕು. ಜಿಲ್ಲೆಯ ಸಾಂಸ್ಕೃತಿಕ ಪರಿಸರ ಮತ್ತಷ್ಟೂ ಗಟ್ಟಿಗೊಳ್ಳಬೇಕು ಎಂದು ಆಶಿಸಿದರು.ಕಾರ್ಯಕ್ರಮದ ಅತಿಥಿಗಳಾಗಿ ಕಲಾವಿದರಾದ ಅಮರೇಶ ಹಚ್ಚೊಳ್ಳಿ, ಎಸ್.ಜಿ. ಪಾಟೀಲ್, ಅರಳೆಕಲ್ಲು ಮಲ್ಲನ ಗೌಡ, ಬುಳ್ಳಪ್ಪ, ಕೋರಿ ಕರಿಬಸಪ್ಪ, ಸುಬ್ಬಣ್ಣ, ದೇವೇಂದ್ರಪ್ಪ, ಸತ್ಯನಾರಾಯಣ, ಸಿದ್ದಲಿಂಗಯ್ಯ ಸ್ವಾಮಿ, ಶರಣಬಸವ ಸ್ವಾಮಿ, ಹಿಂದೂಸ್ತಾನಿ ಗಾಯಕ ಕೆ.ವಸಂತಕುಮಾರ್, ಬೆಳಗಲ್ ಹನುಮಂತ, ಬೆಳಗಲ್ ರೇಖಾ, ಕೆ.ಶಿವಕುಮಾರ್, ಸಂತೋಷ, ಜಡೇಶ, ಹುಲುಗಪ್ಪ, ರಮಣಪ್ಪ ಮತ್ತಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಗೀತ ಸೌರಭ ಹಿಂದೂಸ್ತಾನಿ ಹಾಗೂ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು. ಟ್ರಸ್ಟ್‌ನ ಅಧ್ಯಕ್ಷ ಎಸ್.ಆರ್.ಎಂ. ಶರಣಬಸವರಾಜ್ ಹಾಗೂ ಮುದ್ದಟನೂರು ತಿಪ್ಪೇಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.