ಸಾರಾಂಶ
ಕಾರವಾರ: ಆತ್ಮಲಿಂಗ ಪ್ರತಿಷ್ಠಾಪನೆ, ಭೂಕೈಲಾಸ, ಯಕ್ಷಗಾನ, ಲಂಕೆಗೆ ಸೇತುವೆ ನಿರ್ಮಾಣ ... ಹೀಗೆ ಗಣೇಶೋತ್ಸವದಲ್ಲಿ ಗಣಪತಿಯ ಎದುರು ಒಂದೊಂದು ಕಡೆ ಒಂದೊಂದು ಸನ್ನಿವೇಶ. ಸಾವಿರಾರು ಜನರು ಶ್ರದ್ಧೆ ಭಕ್ತಯಿಂದ ವೀಕ್ಷಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಚೌತಿಯ ಸಡಗರ, ಸಂಭ್ರಮ ಮನೆ ಮಾಡಿದೆ. ಜಿಲ್ಲೆಯ 1400ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಗಣಪ ವಿರಾಜಮಾನನಾಗಿದ್ದಾನೆ. ಒಂದೊಂದು ಕಡೆ ಒಂದೊಂದು ಬಣ್ಣ, ಬಗೆ ಬಗೆಯ ಸನ್ನಿವೇಶ, ಬೇರೆ ಬೇರೆ ಭಂಗಿ ಹೀಗೆ ಕಲಾವಿದರ ಕೈಚಳಕದಲ್ಲಿ ಮೈವೆತ್ತಿದ ಗಣಪತಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಇನ್ನು ಮನೆ ಮನೆಗಳಲ್ಲೂ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದರಿಂದ ಬೆಂಗಳೂರು, ಗೋವಾ, ಮಹಾರಾಷ್ಟ್ರ ಮತ್ತಿತರ ಕಡೆಗಳಲ್ಲಿ ಇರುವ ಜಿಲ್ಲೆಯ ಮೂಲದ ಜನತೆ ಆಗಮಿಸಿದ್ದಾರೆ. ಕುಟುಂಬದೊಟ್ಟಿಗೆ ಮನೆ ಮನೆಗಳಲ್ಲೂ ಸಂಭ್ರಮ ಕಳೆಗಟ್ಟಿದೆ. ಚಕ್ಕುಲಿ, ವಡೆ, ಮೋದಕ, ಪಂಚಕಜ್ಜಾಯ, ಲಡ್ಡು, ಅತಿರಸ... ಹೀಗೆ ಬಗೆ ಬಗೆಯ ತಿಂಡಿಗಳ ಸಮಾರಾಧನೆ ನಡೆಯುತ್ತಿದೆ. ಆಪ್ತರು ಬಂಧುಗಳ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯಗಳ ಹಾಗೂ ಸಿಹಿ ತಿಂಡಿಗಳ ವಿನಿಮಯವೂ ಜೋರಾಗಿದೆ.
ಗಣಪತಿಯ ಎದುರು ಸತ್ಯಗಣಪತಿ ಕಥೆ, ದಂಡಾವಳಿ ಪೂಜೆ ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ವಿವಿಧೆಡೆ ಅನ್ನಸಂತರ್ಪಣೆಯನ್ನೂ ಏರ್ಪಡಿಸಿದ್ದು, ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದಾರೆ.ವಿಘ್ನವಿನಾಯಕನ ಎದುರು ಸಂಗೀತ, ಭಜನೆ, ಗುಮಟೆಪಾಂಗ್, ಯಕ್ಷಗಾನ, ತಾಳಮದ್ದಳೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಮನರಂಜನೆಯೂ ದೊರೆಯುತ್ತಿದೆ. ಚೌತಿ ಆರಂಭವಾದರೂ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಮುಂದುವರಿದಿದೆ. ಹೂವು, ಹಣ್ಣು, ಸಿಹಿ ತಿನಿಸುಗಳನ್ನು ಕೊಂಡೊಯ್ಯುತ್ತಿದ್ದಾರೆ. ಇದರ ಜತೆಗೆ ಗಣಪತಿ ವೀಕ್ಷಣೆಗೆ, ಆಪ್ತರ ಮನೆಗಳಿಗೆ ತೆರಳುವ ಜನರಿಂದ ಸಾರಿಗೆ ಬಸ್‌ಗಳು ಭರ್ತಿಯಾಗಿ ಸಂಚರಿಸುತ್ತಿವೆ. ಈ ಬಾರಿ ಗಣಪನೊಂದಿಗೆ ಮಳೆಯೂ ಬಂದಿದೆ. ಸುರಿಯುವ ಮಳೆಯ ನಡುವೆಯೇ ಗಜಾನನನ ಆಗಮನವಾಗಿದೆ. ಆಗಾಗ ಸುರಿಯುವ ಭಾರಿ ಮಳೆಯ ನಡುವೆಯೂ ಜನತೆ ಗಣಪತಿಯ ದರ್ಶನಕ್ಕೆ ತೆರಳುತ್ತಿರುವ ನೋಟ ಕಂಡುಬರುತ್ತಿದೆ. ಇನ್ನು 9 ದಿನಗಳ ಕಾಲ ಗಣೇಶೋತ್ಸವದದ್ದೆ ಭರಾಟೆ. ಜನತೆ ಶ್ರದ್ಧೆ, ಭಕ್ತಿಯಿಂದ ಗಣಪನ ಆರಾಧನೆಯಲ್ಲಿ ತೊಡಗಿಕೊಂಡಿದ್ದಾರೆ.ಗಣೇಶನ ದೇಗುಲಕ್ಕೆ ಭಕ್ತರ ದಂಡು
ಇಡಗುಂಜಿ ವಿನಾಯಕ ದೇವಾಲಯ, ಅಮದಳ್ಳಿ ವೀರ ಗಣಪತಿ, ಉಪ್ಪಿನಪಟ್ಟಣ ಸಿದ್ಧಿವಿನಾಯಕ ದೇವಾಲಯ, ಗೋಕರ್ಣದ ಮಹಾಗಣಪತಿ ದೇವಾಲಯಗಳಲ್ಲಿ ಚೌತಿಯ ದಿನ ಸಾವಿರಾರು ಜನರು ಆಗಮಿಸಿ ಗಣಪತಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದ್ದಾರೆ. ಇಡಗುಂಜಿ ವಿನಾಯಕ ದೇವಾಲಯಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.