ಸಾರಾಂಶ
ಬಳ್ಳಾರಿ: ಜಿಲ್ಲೆಯಲ್ಲಿ ಗಣೇಶೋತ್ಸವ ಸಂಭ್ರಮ ಮುಂದುವರಿದಿದ್ದು, ತರಹೇವಾರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ಬಳ್ಳಾರಿ ಜಿಲ್ಲಾ ಕೇಂದ್ರ ಸೇರಿದಂತೆ, ತಾಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಭಾಗದಲ್ಲಿ ಗಣಪನ ಪೂಜಾ ಕೈಂಕರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಭರಾಟೆ ಮುಂದುವರಿದಿದೆ. ಬಳ್ಳಾರಿ ನಗರದಲ್ಲಿ ವಿವಿಧೆಡೆ ಪ್ರತಿಷ್ಠಾಪಿಸಿರುವ ಬಗೆಬಗೆಯ ಗಣೇಶಗಳು ಗಮನ ಸೆಳೆಯುತ್ತಿವೆ.ಮೂರು, ಐದು, ಹನ್ನೊಂದು ಹಾಗೂ ಹದಿಮೂರು ದಿನಗಳ ಕಾಲ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದ್ದು, ಐದನೇ ದಿನಕ್ಕೆ ಭಾಗಶಃ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ಜರುಗಲಿದೆ. ಜಿಲ್ಲೆಯಲ್ಲಿ 1891 ಕಡೆ ಗಣೇಶ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಗಣಪನ ಕೂರಿಸುವ ಮಂಟಪಗಳ ಬಳ ಧ್ವನಿವರ್ಧಕಗಳ ಭರಾಟೆ ಕಂಡು ಬಂದಿದೆ. ಈ ಬಾರಿ ಡಿಜೆ ಬಳಕೆಗೆ ಕಡಿವಾಣ ಬಿದ್ದಿದೆ. ಗಣೇಶ ಉತ್ಸವ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ತಿಳಿಸಿದ್ದಾರೆ.
ಗಣೇಶ ಮೂರ್ತಿಗಳನ್ನು ಎಲ್ಲೆಲ್ಲಿ ವಿಸರ್ಜನೆ ಮಾಡಬೇಕು ಎಂಬ ಮಾರ್ಗಸೂಚಿಗಳನ್ನು ಮಹಾನಗರ ಪಾಲಿಕೆ ಈಗಾಗಲೇ ಪ್ರಕಟಿಸಿದೆ.ಗಮನ ಸೆಳೆಯುವ ಗಣಪ ಮೂರ್ತಿಗಳು: ನಗರದ ಗಾಂಧಿನಗರದ ಎರ್ರಿತಾತಾ ಕಾಲನಿಯಲ್ಲಿ ಶ್ರೀ ಸಿದ್ಧಿ ಬುದ್ಧಿ ವಿನಾಯಕ ಮಿತ್ರ ಮಂಡಳಿ ಪ್ರತಿಷ್ಠಾಪಿಸಿರುವ ಬಾಳೆಹಣ್ಣು ಗಣೇಶ, ತಾಳೂರು ರಸ್ತೆಯ ರೇಣುಕಾನಗರದಲ್ಲಿ ಶ್ರೀ ಬಾಲವಿನಾಯಕ ಗೆಳೆಯರ ಬಳಗ ಪ್ರತಿಷ್ಠಾಪಿಸಿರುವ ಆಂಜಿನೇಯನ ಜತೆ ಸಂವಾದ ಮಾಡುತ್ತಿರುವ ಗಣಪ, ಕೃಷ್ಣಮಾಚಾರ್ ರಸ್ತೆಯ ವಡ್ಡರಬಂಡೆ ಕಾಟೇಗುಡ್ಡ ಪ್ರದೇಶದಲ್ಲಿ ಸ್ಥಾಪಿಸಿರುವ ನಾಗ ಗಣೇಶ, ಮೇದಾರ ಓಣಿಯಲ್ಲಿ ಪ್ರತಿಷ್ಠಾಪಿಸಿರುವ ಪುರಿ ಜಗನ್ನಾಥ ದೇವಸ್ಥಾನ ಮಾದರಿಯ ಗಣೇಶ, ಕೌಲ್‌ಬಜಾರ್‌ನ ಶ್ರೀ ಜಗದೀಶ ಭಜನ ಮಂದಿರ ಸೇವಾ ಟ್ರಸ್ಟ್ ಸ್ಥಾಪಿಸಿರುವ ಆಪರೇಷನ್ ಸಿಂದೂರ ಗಣೇಶ, ಸಿಂದಗಿ ಕಾಂಪೌಂಡ್‌ನಲ್ಲಿ ವಿನಾಯಕ ಮಿತ್ರ ಮಂಡಳಿ 48ನೇ ವರ್ಷದ ಗಣೇಶೋತ್ಸವ ಅಂಗವಾಗಿ ಸ್ಥಾಪಿಸಿರುವ ನಂದಿವಾಹನ ಗಣೇಶ, ಪಟೇಲ್ ನಗರದಲ್ಲಿ (ಎಂಜಿ) ಸರ್ವಸಿದ್ಧಿ ವಿನಾಯಕ ಮಿತ್ರ ಮಂಡಳಿಯಿಂದ ಪ್ರತಿಷ್ಠಾಪಿಸಿರುವ ಅನಂತಪದ್ಮನಾಭ ಗಣೇಶ, ಸತ್ಯನಾರಾಯಣಪೇಟೆಯ ಗಜಮುಖ ಫ್ರೆಂಡ್ಸ್ ಅಸೋಸಿಯೇಷನ್ ಸ್ಥಾಪಿಸಿರುವ ಕೈಲಾಸವಾಸಿ ಗಣಪ, ಬದರಿನಾರಾಯಣ ದೇವಸ್ಥಾನ ಬೀದಿಯಲ್ಲಿ ಪ್ರತಿಷ್ಠಾಪಿಸಿರುವ ಐಪಿಎಲ್ ಗೆದ್ದ ಗಣೇಶ, ಕಪ್ಪಗಲ್ ರಸ್ತೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಆಪರೇಷನ್ ಸಿಂದೂರ ಗಣೇಶ, ಕಪ್ಪಗಲ್ ರಸ್ತೆ ಸರ್ ಎಂ.ವಿ. ನಗರದಲ್ಲಿ ಶ್ರೀ ವಿದ್ಯಾಗಣಪತಿ ಫ್ರೆಂಡ್ಸ್ ಅಸೋಸಿಯೇಷನ್ ಸ್ಥಾಪಿಸಿರುವ ಮಧ್ಯಪ್ರದೇಶ ಉಜ್ಜಯನಿಯ ಚಿಂತಾಮಣ್ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ.