ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ದೋಷ ಪರಿಹಾರ ಮತ್ತು ನಂಬಿದವರಿಗೆ ಉತ್ತಮ ಫಲ ನೀಡುವ ದೇವರಲ್ಲಿ ಗಣಪತಿ ದೇವರು ಮೊದಲಾಗಿದ್ದಾರೆ. ಮೊದಲ ಪೂಜೆಯನ್ನು ಸ್ವೀಕರಿಸುವ ಗಣಪತಿ ದೇವರು ಶಕ್ತಿವಂತ ಮತ್ತು ಯುಕ್ತಿವಂತನಾಗಿ ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವ ಶಕ್ತಿ ಇರುವ ದೇವರಾಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಷ್ಟಬಂಧ ಬ್ರಹ್ಮ ಕಲಶೋತ್ಸವದ 5 ನೇ ದಿನದ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ದೇವಸ್ಥಾನಗಳಲ್ಲಿ 12 ವರ್ಷಕೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವದಿಂದ ಶಕ್ತಿ ವೃದ್ಧಿಯಾಗುತ್ತದೆ. ಇಲ್ಲಿಯ ಭಕ್ತರು ಶ್ರದ್ಧಾ ಭಕ್ತಿಯಿಂದ ಉತ್ತಮ ಕೆಲಸ ಮಾಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭ ಮಾಡುವಾಗ ಪ್ರಾಯೋಗಿಕವಾಗಿ ಈ ಗ್ರಾಮವನ್ನು ಆಯ್ಕೆಮಾಡಲಾಗಿತ್ತು. ಯೋಜನೆಯ ಕೆಲಸ ಕಾರ್ಯ ಯಶಸ್ವಿಯಾಗಿದೆ ಎಂದರು.ಬಳಿಕ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕರಿಸಿದ ದಾನಿಗಳನ್ನು ಮತ್ತು ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಿದರು.ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉದ್ಯಮಿ ಕಿರಣ್ ಚಂದ್ರ ಡಿ. ಪುಷ್ಪಗಿರಿ ಮಾತನಾಡಿ, ಸನಾತನ ಭಾರತದ ಸಂಸ್ಕೃತಿ ಆಚಾರ ವಿಚಾರಗಳು ಉಳಿಸಲು ಇಂತಹ ಬ್ರಹ್ಮಕಲಶ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸಾಧ್ಯ, ಎಲ್ಲರನ್ನು ಸಮಾನತೆಯಿಂದ ನೋಡಿ ಸಮಾಜದಲ್ಲಿ ಶೋಷಿತ ವರ್ಗದವರ ಸೇವೆ ಮಾಡಬೇಕು. ಡಾ. ಹೆಗ್ಗಡೆ ಮಾಡುತ್ತಿರುವ ಸೇವಾ ಕಾರ್ಯ ಮಾದರಿ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, 12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶದಿಂದ ದೇವರ ಸಾನಿಧ್ಯಕ್ಕೆ ಶಕ್ತಿ ಬರುತ್ತದೆ. ಇಲ್ಲಿಯ ದೇವಸ್ಥಾನ ಸುಂದರವಾಗಿ ಅಭಿವೃದ್ಧಿಯಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಜೀವನದಲ್ಲಿ ಪರಿವರ್ತನೆಯದಂತೆ ಬದಲಾವಣೆಯಾಗುತ್ತದೆ. ಬ್ರಹ್ಮಕಲಶದಿಂದ ಸಾಮಾಜಿಕವಾಗಿ ಬಹಳಷ್ಟು ಬದಲಾವಣೆಯಾಗುತ್ತದೆ ಎಂದರು.
ಗುರುವಾಯನಕೆರೆ ಎಕ್ಸೆಲ್ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ಶು ಭ ಹಾರೈಸಿದರು.ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಕಣಿಯೂರು ರೈತ ಬಂಧು ಮಾಲಕ ಶಿವ ಶಂಕರ್ ನಾಯಕ್, ಪದ್ಮುಂಜ ಸಹಕಾರ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕರ ಭಾಗವಹಿಸಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಬಿ. ಬಾಲಕೃಷ್ಣ ಪೂಜಾರಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಗೌಡ ನಾಗಂದೋಡಿ, ಪ್ರದಾನ ಕಾರ್ಯದರ್ಶಿ ಹರೀಶ್ ಪರಪ್ಪಾಜೆ, ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ಆನುವಂಶಿಕ ಮೋಕ್ತೆಸರ ಕುಕ್ಕಪ್ಪ ಗೌಡ ಕೋಡಿಮಜಲು, ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಕಾರ್ಯದರ್ಶಿ ಉಮೇಶ್ ಗೌಡ ಅಂಗಡಿಮಜಲು, ಮಹಿಳಾ ಸಮಿತಿ ಅಧ್ಯಕ್ಷೆ ಶ್ವೇತಾ ಹಾರ್ತ್ಯಾರು, ಭಜನಾ ಮಂಡಳಿ ಅಧ್ಯಕ್ಷ ಲಕ್ಷ್ಮಣ ಗೌಡ ಫಲಸದ ಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿಶೇಷವಾಗಿ ಸಹಕಾರ ನೀಡಿದ ಮಮತಾ ಬಾಲಕೃಷ್ಣ ಪೂಜಾರಿ ಅವರನ್ನು ಗೌರವಿಸಲಾಯಿತು. ಉಪನ್ಯಾಸಕ ಮೋಹನ ಗೌಡ ನಿರೂಪಿಸಿದರು. ಇನ್ನೊರ್ವ ಉಪನ್ಯಾಸಕ ದಿವಾ ಕೊಕ್ಕಡ ವಂದಿಸಿದರು. ಬಳಿಕ ಪೆರ್ಲ ಬೈಪಾಡಿ ಅಂಗನವಾಡಿ, ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೆಳ್ತಂಗಡಿ ವಾಣಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ವಾಣಿ ಕಲಾ ವೈಭವ ನಡೆಯಿತು.