ತೂಗು ಮಂಚದಲ್ಲಿ ವಿರಾಜಮಾನನಾದ ಗಣಪತಿ

| Published : Aug 29 2025, 01:00 AM IST

ತೂಗು ಮಂಚದಲ್ಲಿ ವಿರಾಜಮಾನನಾದ ಗಣಪತಿ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದಲ್ಲಿ ಗಣೇಶನ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಿರುವುದು ಕಂಡು ಬಂದಿತು. 20ಕ್ಕೂ ಹೆಚ್ಚು ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಎದುರು ಪ್ರತಿಷ್ಠಾಪಿಸಲಾಗಿದೆ.

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗಣೇಶನ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಿರುವುದು ಕಂಡು ಬಂದಿತು. 20ಕ್ಕೂ ಹೆಚ್ಚು ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದ ಎದುರು ಪ್ರತಿಷ್ಠಾಪಿಸಲಾಗಿದೆ.

ಪಟ್ಟಣದ ಬಸ್ತಿಬಣದ ಮೇಲಿನ ಕಾಮನಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ತೂಗು ಮಂಚದಲ್ಲಿ ವಿರಾಜಮಾನವಾಗಿರುವ ಗಣಪತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ತೂಗು ಮಂಚದಲ್ಲಿ ಕುಳಿತಿರುವ ರೀತಿಯಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 6 ಅಡಿ ಗಣಪತಿಯ ದರ್ಶನಕ್ಕೆ ಬರುವ ಭಕ್ತರು ತೂಗು ಮಂಚದಲ್ಲಿ ಕುಳಿತಿರುವ ಗಣಪತಿ ತೂಗಿ ನಮಸ್ಕರಿಸುತ್ತಾರೆ.

ಸುಮಾರು 4-5 ಅಡಿ ಎತ್ತರದ ಕಟ್ಟಿಗೆಯ ಮಂಚದಲ್ಲಿ ಗಣಪತಿ ಮೂರ್ತಿಯನ್ನು ಕಳ್ಳರಿಸಿ ಮಂಚಕ್ಕೆ ಹಗ್ಗ ಕಟ್ಟಿದ್ದು, ಹಗ್ಗವನ್ನು ಎಳೆದರೆ ಗಣಪತಿ ಮೂರ್ತಿ ತೂಗು ಮಂಚದ ಸಮೇತ ತೂಗುತ್ತಿರುವುದು ವಿಶೇಷವಾಗಿದೆ.

ಈ ತೂಗು ಮಂಚದಲ್ಲಿನ ವಿಶೇಷ ಗಣಪತಿಯನ್ನು ಭಕ್ತಿಯಿಂದ ಪೂಜಿಸಿ ತೂಗಿದಲ್ಲಿ ಮಕ್ಕಳಾಗದ ದಂಪತಿಗೆ ಮಕ್ಕಳಾಗುತ್ತವೆ ಎನ್ನುವ ಪ್ರತೀತಿ ಇದೆ ಎಂದು ಗಣಪತಿ ಸಂಘದ ಸದಸ್ಯ ದೇವಪ್ಪ ಕುಂಬಾರ ಹೇಳಿದರು.

ಪಟ್ಟಣದ ವ್ಯಾಪಾರಸ್ಥರ ಸಂಘವು ಧರ್ಮ ರಕ್ಷಿತ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹಳ್ಳದಕೇರಿ ಓಣಿ, ಹಾವಳಿ ಹನುಮಪ್ಪನ ದೇವಸ್ಥಾನದ ಹತ್ತಿರ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈಶ್ವರ ದೇವಸ್ಥಾನ, ಹಳ್ಳದಕೇರಿ ಓಣಿ, ಅಂಬೇಡ್ಕರ್ ಓಣಿ, ಸೇರಿದಂತೆ ವಿವಿಧ ಕಡೆಗಳಲ್ಲ ಬೃಹತ್ ಗಾತ್ರದ ಗಣಪತಿಗಳನ್ನು ಪ್ರತಿಷ್ಠಾಪಿಸಿದ್ದಾರೆ.

ಪಟ್ಟಣದ ಹಳೆಯ ಕೋರ್ಟ್‌ ಆವರಣದಲ್ಲಿನ 200 ವರ್ಷಕ್ಕೂ ಹಳೆಯದಾದ ಕಿಟ್ಟದ ಮಣ್ಣಿನ ಗಣಪತಿಯನ್ನು ವಕೀಲರ ಸಂಘದಿಂದ ಪೂಜೆ ಮಾಡಲಾಗುತ್ತದೆ.

ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್‌ ಗಾತ್ರದ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ಕಂಡು ಬಂದಿತು.