ನಬಾರ್ಡ್ ಹಣದಲ್ಲಿ ಗಣಪತಿಕೆರೆ ಅಭಿವೃದ್ಧಿ: ಶಾಸಕ ಗೋಪಾಲಕೃಷ್ಣ ಬೇಳೂರು

| Published : Sep 04 2024, 01:49 AM IST

ನಬಾರ್ಡ್ ಹಣದಲ್ಲಿ ಗಣಪತಿಕೆರೆ ಅಭಿವೃದ್ಧಿ: ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಗಣಪತಿ ಕೆರೆ ಮೇಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಾಗರ

ಗಣಪತಿ ಕೆರೆಯ ಒತ್ತುವರಿ ತೆರವು ಬಗ್ಗೆ ಹಲವು ಚರ್ಚೆಗಳಿವೆ. ಹಾಗಾಗಿ ಕೆರೆಯ ಸರ್ವೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕೆರೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರಸಭೆ ವತಿಯಿಂದ ಎಸ್.ಎಫ್.ಸಿ.ವಿಶೇಷ ಅನುದಾನದಲ್ಲಿ ಗಣಪತಿ ಕೆರೆ ಮೇಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಹಣ ಉಪಯೋಗಿಸದೆ ನಬಾರ್ಡ್‌ನಿಂದ ಬರುವ ಹಣದ ಮೂಲಕ ಗಣಪತಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.

ಅನುದಾನದ ಹಣದಲ್ಲಿ ಕೆರೆಯ ಎರಡೂ ಭಾಗದಲ್ಲಿ ಇಂಟರ್‌ ಲಾಕ್ ರಸ್ತೆ ನಿರ್ಮಿಸಿ, ಕೆರೆ ಸುತ್ತಲೂ ಗಿಡ ನೆಡುವ ಉದ್ದೇಶ ಹೊಂದಲಾಗಿದೆ. ವಾಯುವಿಹಾರಿಗಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನ ಅಳವಡಿಸಲು ಸೂಚಿಸಲಾಗಿದೆ. ಸುತ್ತಲೂ ಸುಣ್ಣ-ಬಣ್ಣ ಹೊಡೆಸಿ, ಸುಂದರಗೊಳಿಸಲಾಗುತ್ತದೆ. ಕೆರೆ ಅಭಿವೃದ್ಧಿಗೆ ಹಿಂದೆ ರಾಜ್ಯ ಸರ್ಕಾರದಿಂದ ಬಂದಿರುವ ಹಣ ನಗರಸಭೆಯ ಖಾತೆಯಲ್ಲಿದೆ. ಆದರೆ ಆಗ ಮಾಡಿರುವ ಅಭಿವೃದ್ಧಿಯ ಬಗ್ಗೆ ಹಲವು ಆಕ್ಷೇಪಣೆ ಇರುವುದರಿಂದ ಹಣವನ್ನು ತಡೆ ಹಿಡಿಯಲಾಗಿದೆ. ನನ್ನ ಅವಧಿಯಲ್ಲಿ ಗಣಪತಿ ಕೆರೆ ಅಭಿವೃದ್ಧಿಗೆ ಸರ್ಕಾರದ ಯಾವ ಹಣವನ್ನು ಉಪಯೋಗಿಸುವುದಿಲ್ಲ ಎಂದು ಹೇಳಿದರು.

ಗಣಪತಿ ವಿಸರ್ಜನೆಗೆ ಯಾವುದೇ ತೊಂದರೆಯಾಗದಂತೆ ವಿದ್ಯುದ್ದೀಪ ಅಳವಡಿಸುವ ಜೊತೆಗೆ ಗಣಪತಿ ಹೊತ್ತು ತರುವಾಗ ತೊಂದರೆಯಾಗದಂತೆ ಮ್ಯಾಟ್ ಅಳವಡಿಸಲಾಗುತ್ತದೆ. ವಿಸರ್ಜನೆ ಸಂದರ್ಭದಲ್ಲಿ ಹೆಚ್ಚಿನ ರಕ್ಷಣಾ ವ್ಯವಸ್ಥೆಯನ್ನು ಮಾಡಲಾ ಗುತ್ತದೆ. ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ ಲೈಸೆನ್ಸ್ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ, ಎನ್.ಲಲಿತಮ್ಮ, ಗಣಪತಿ ಮಂಡಗಳಲೆ, ಕುಸುಮ ಸುಬ್ಬಣ್ಣ, ಸಬೀನಾ ತನ್ವೀರ್, ಶಬಾನ, ಚಂದ್ರಪ್ಪ ಎಲ್., ಪರಿಮಳ, ಉಷಾ ಇನ್ನಿತರರು ಹಾಜರಿದ್ದರು.

ಅಗತ್ಯಬಿದ್ದರೆ ಸಿಎಂ ಬಳಿ ಅಡಕೆ ಬೆಳೆಗಾರರ ನಿಯೋಗ: ಶಾಸಕ

ಅಡಕೆ ಬೆಳೆಗಾರರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳು ತೋಟಗಾರಿಕಾ ಸಚಿವರ ಜೊತೆಗೆ ಚರ್ಚೆ ಮಾಡುವ ಭರವಸೆ ನೀಡಿದ್ದಾರೆ. ಅಡಕೆ ಕೊಳೆರೋಗದಿಂದ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಅವರಿಗೆ ಪರಿಹಾರ ಅಗತ್ಯವಾಗಿ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಬಳಿ ಅಡಕೆ ಬೆಳೆ ಗಾರರ ನಿಯೋಗವನ್ನು ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.