ಮರಗಳ ಹನನ ಖಂಡಿಸಿ ಪ್ರತಿಭಟನಾ ಮೆರವಣಿಗೆ

| Published : Apr 16 2025, 01:57 AM IST

ಸಾರಾಂಶ

ರಸ್ತೆ ವಿಸ್ತರಣೆ ಅವಶ್ಯಕತೆ ಇರಲಿಲ್ಲ. ಆದರೂ ನಗರ ಪಾಲಿಕೆಯ ಅವೈಜ್ಞಾನಿಕ ನಿರ್ಧಾರಕ್ಕೆ ಅರಣ್ಯ ಇಲಾಖೆ ಮರ ಕಡಿಯಲು ಅನುಮತಿ ನೀಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಎಸ್ಪಿ ಕಚೇರಿ ವೃತ್ತದಿಂದ ಮಹದೇವಪುರ ರಸ್ತೆಯ ಕಾಳಿಕಾಂಬ ದೇವಸ್ಥಾನದವರೆಗೆ ಹೈದರಾಲಿ ರಸ್ತೆ ವಿಸ್ತರಣೆಗಾಗಿ 40 ಹೆಚ್ಚು ಮರಗಳನ್ನು ಕಡಿದಿರುವುದನ್ನು ಖಂಡಿಸಿ ಗಂಧದಗುಡಿ ಫೌಂಡೇಶನ್ ಪದಾಧಿಕಾರಿಗಳು ಮತ್ತು ಸದಸ್ಯರು ಮಂಗಳವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.

ನಗರದ ಎಸ್ಪಿ ಕಚೇರಿ ವೃತ್ತದಿಂದ ಕಾಳಿಕಾಂಭ ದೇವಸ್ಥಾನದವರೆಗೂ ಮೆರವಣಿಗೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಅವರು, ಹೈದರಾಲಿ ರಸ್ತೆ ಪ್ರಸ್ತುತ ಸಂಚರಿಸುವ ವಾಹನಗಳ ಸಂಖ್ಯೆಗಿಂತ ಹೆಚ್ಚಿನ ವಾಹನಗಳ ಸಂಚಾರಕ್ಕೆ ಬೇಕಾದ ವಿಸ್ತೀರ್ಣವಿತ್ತು. ರಸ್ತೆ ವಿಸ್ತರಣೆ ಅವಶ್ಯಕತೆ ಇರಲಿಲ್ಲ. ಆದರೂ ನಗರ ಪಾಲಿಕೆಯ ಅವೈಜ್ಞಾನಿಕ ನಿರ್ಧಾರಕ್ಕೆ ಅರಣ್ಯ ಇಲಾಖೆ ಮರ ಕಡಿಯಲು ಅನುಮತಿ ನೀಡಿದೆ. ಇದರಿಂದ ರಸ್ತೆಯ ಎರಡೂ ಬದಿಯಲ್ಲಿರುವ ಮರಗಳನ್ನು ಕಡಿಯಲಾಗಿದೆ ಎಂದು ಕಿಡಿಕಾರಿದರು.

40- 50 ವರ್ಷಗಳ ಹಳೆಯ ಮರಗಳನ್ನು ಕಡಿದಿರುವುದು ಅಕ್ಷಮ್ಯ ಅಪರಾಧ. ಅರಣ್ಯ ಇಲಾಖೆ ಇಂತಹ ದೊಡ್ಡ ಮರಗಳ ಹನನಕ್ಕೆ ಅನುಮತಿ ನೀಡಿರುವುದು ಸರಿಯಲ್ಲ. ಮರಗಳ ಹನನ ಪ್ರಕರಣ ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು. ಅರಣ್ಯ ಇಲಾಖೆ ಯಾವುದೇ ಕಾರಣಕ್ಕೂ ಮರಗಳ ಹನನಕ್ಕೆ ಅನುಮತಿ ನೀಡಬಾರದು. ಕಡಿದಿರುವ ಮರಕ್ಕೆ ಪ್ರತಿಯಾಗಿ ಹೈದರಾಲಿ ರಸ್ತೆಯಲ್ಲಿ ಗಿಡ ನೆಟ್ಟು ಪೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ರಸ್ತೆ ವಿಸ್ತರಣೆ ಹಿಂದಿರುವ ಹಿತಾಸಕ್ತಿ ಏನು?

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಸುಮಾರು 58 ಮರಗಳನ್ನು ರಾತ್ರೋರಾತ್ರಿ ಕಡಿಯಲಾಗಿದೆ. ಅನಿವಾರ್ಯ ಅಲ್ಲದಿದ್ದರು ಹೈದರಾಲಿ ರಸ್ತೆ ವಿಸ್ತರಣೆಗೆ ಮುಂದಾಗಿರುವ ಕ್ರಮದ ಹಿಂದಿರುವ ಹಿತಾಸಕ್ತಿ ಏನು ಎಂದು ಪ್ರಶ್ನಿಸಿದರು.

ಅಭಿವೃದ್ದಿ ನೆಪದಲ್ಲಿ ಅಗತ್ಯವಿಲ್ಲದಿದ್ದರೂ ರಸ್ತೆ ವಿಸ್ತರಣೆಗೆ ಕೋಟ್ಯಂತರ ರೂ. ಖರ್ಚು ಮಾಡುವ ಅಗತ್ಯವಾದರು ಏನು? ಹೀಗಾಗಿ, ಕೊಡಲೇ ಈ ಟೆಂಡರ್ ರದ್ದು ಮಾಡಬೇಕು. ಅಮೂಲ್ಯ ಮರಗಳನ್ನು ಬಲಿ ಕೊಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಜಿಲ್ಲಾಧಿಕಾರಿ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಗಂಧದಗುಡಿ ಫೌಂಡೇಶನ್ ಅಧ್ಯಕ್ಷ ಆರ್ಯನ್, ಪದಾಧಿಕಾರಿಗಳಾದ ಮನೋಹರ್‌ ಗೌಡ, ಯಶೋದಾ, ಧನಂಜಯ, ವಿಲಿಯಂ, ಮೇಘನಾ ಗೌಡ, ಪೃಥ್ವಿರಾಜ್, ಅರ್ಜುನ್, ದರ್ಶನ್, ಸವಿತಾ ಗೌಡ, ಮಹದೇವ್ ಶೆಟ್ಟಿ, ಕವಿತಾ, ಚೇತನ್ ಮೊದಲಾದವರು ಇದ್ದರು.