ಅಂಬಳೆ ಗ್ರಾಮಕ್ಕೆ ವರದಾನವಾದ ಗಾಂಧಿ ಪುರಸ್ಕಾರ

| Published : Feb 14 2024, 02:16 AM IST

ಸಾರಾಂಶ

ಸರ್ಕಾರ ನೀಡುವ ಮಾರ್ಗಸೂಚಿಗಳು ಮತ್ತು ಅನುದಾನಗಳನ್ನು ಸರಿಯಾದ ರೀತಿ ಬಳಸಿಕೊಂಡು ಅನುಷ್ಠಾನಗೊಳಿಸಿರುವುದರಿಂದ 2022-23ನೇ ಸಾಲಿನಲ್ಲಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡುವ ಮೂಲಕ ಅಂಬಳೆ ಗ್ರಾಪಂ ಅಭಿವೃದ್ಧಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ.

ಅಂಬಳೆ ವೀರಭದ್ರನಾಯಕಕನ್ನಡಪ್ರಭ ವಾರ್ತೆ ಯಳಂದೂರು

ಸರ್ಕಾರ ನೀಡುವ ಮಾರ್ಗಸೂಚಿಗಳು ಮತ್ತು ಅನುದಾನಗಳನ್ನು ಸರಿಯಾದ ರೀತಿ ಬಳಸಿಕೊಂಡು ಅನುಷ್ಠಾನಗೊಳಿಸಿರುವುದರಿಂದ 2022-23ನೇ ಸಾಲಿನಲ್ಲಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡುವ ಮೂಲಕ ಅಂಬಳೆ ಗ್ರಾಪಂ ಅಭಿವೃದ್ಧಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಂಬಳೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ವೈ.ಕೆ. ಮೋಳೆ, ಚಂಗಚಹಳ್ಳಿ, ಹೆಗ್ಗಡಹುಂಡಿ ಗ್ರಾಮಗಳಿಂದ 18 ಜನ ಗ್ರಾಪಂ ಸದಸ್ಯರು ಆಯ್ಕೆಗೊಂಡಿದ್ದು, ಜನ ಪ್ರತಿನಿಧಿಗಳು ಸರ್ಕಾರ ನೀಡುವ ಅನುದಾನ ಮತ್ತು ಸ್ಥಳೀಯ ಶಾಸಕರು ನೀಡುವ ವಿಶೇಷ ಅನುದಾನಗಳನ್ನು ಬಳಸಿಕೊಳ್ಳುವುದರ ಮೂಲಕ ಆಯಾ ಗ್ರಾಮಗಳಲ್ಲಿ ಅವಶ್ಯಕತೆ ಇರುವ ಸಮಸ್ಯೆಗಳಿಗೆ ಬಗೆಹರಿಸುವ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಗಾಂಧಿ ಪುರಸ್ಕಾರ ತಂದು ಕೊಟ್ಟ ನರೇಗಾ:

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅನುದಾನಗಳನ್ನು ಸರ್ಮಪಕವಾಗಿ ಬಳಸಿಕೊಂಡಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಪಂ ವ್ಯಾಪ್ತಿಗೆ ಬರುವ ಕೆರೆ, ಕಟ್ಟೆ, ಕಾಲುವೆ, ರೈತರು ಕೃಷಿ ಜಮೀನುಗಳಿಗೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ಕೃಷಿ ಜಮೀನುಗಳಿಗೆ ಹೋಗುವ ಮುಖ್ಯರಸ್ತೆಗಳ ನಿರ್ಮಿಸುವುದು, ಜನವಸತಿ ಪ್ರದೇಶಗಳಲ್ಲಿ ಹದಗೆಟ್ಟ ಮಣ್ಣು ರಸ್ತೆಗಳಿಗೆ ಸಿಸಿ ರಸ್ತೆ, ಸಿಸಿ ಚರಂಡಿಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜನವಸತಿ ಪ್ರದೇಶಗಳು ಅಭಿವೃದ್ಧಿ ಕಂಡಿದೆ.

ರೈತರಿಗೆ ಆರ್ಥಿಕ ಪ್ರಗತಿ:ನರೇಗಾ ಅನುದಾನದಿಂದ ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡುವ ಮೂಲಕ ಮಳೆ ನೀರು ಸಂಗ್ರಹಣೆಗೆ ಅನುಕೂಲವಾಗುವುದರ ಜೂತೆಗೆ ಮೀನು ಕೃಷಿ ಮಾಡುವ ಮೂಲಕ ರೈತರಿಗೆ ವರದಾನವಾಗಿದೆ. ಇನ್ನು ರೈತರ ಕೃಷಿ ಜಮೀನುಗಳಿಗೆ ದಶಕಗಳಿಂದ ಅನುದಾನಗಳು ಇಲ್ಲದೆ ಪಾಳು ಬಿದ್ದಿದ್ದ ರಸ್ತೆಗಳಿಗೆ ನಮ್ಮ ಹೊಲ, ನಮ್ಮ ರಸ್ತೆ ಯೋಜನೆಯಲ್ಲಿ ರಸ್ತೆ ನಿರ್ಮಾಣ, ಕೈ ತೋಟ, ಜಮೀನುಗಳ ಸಮತಟ್ಟು ಮಾಡುವುದು, ಜಮೀನುಗಳಲ್ಲಿ ಕಿರು ಅರಣ್ಯ ಬೆಳಸುವುದು, ಸಾವಯುವ ಕೃಷಿ, ಎರೆಹುಳು ಘಟಕ, ಹೈನುಗಾರಿಕೆ ಪ್ರೋತ್ಸಾಹಿಸಲು ಕುರಿ, ಕೋಳಿ, ದನಗಳ ಕೊಟ್ಟಿಗೆ ನಿರ್ಮಾಣ, ರೈತರು ಬೆಳೆದ ಫಸಲು ಒಕ್ಕಣೆ ಮಾಡಲು ವೈಯಕ್ತಿಕ ಒಕ್ಕಣೆ ಕಣ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿಗೆ ನರೇಗಾ ಅನುದಾನವನ್ನು ರೈತರಿಗೆ ನೀಡುವ ಮೂಲಕ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವೆಂತೆ ಮಾಡಲಾಗಿದೆ.

ಕೆರೆಗಳಿಗೆ ಜೀವಕಳೆ: ಅನುದಾನ ಇಲ್ಲದೆ ಕಾಡು ಜಾತಿ ಮುಳ್ಳುಗಳಿಂದ ಮುಚ್ಚಿ ಹೋಗಿದ್ದ ಕೆರೆ, ಕಟ್ಟೆ, ಕಾಲುವೆಗಳನ್ನು ಹೂಳು ತೆಗೆಸಿ ಕೆರೆಗಳಿಗೆ ನೀರು ತುಂಬಿದೆ, ಇದರಿಂದ ಭೂಮಿಯಲ್ಲಿ ಅಂರ್ತಜಲ ಹೆಚ್ಚಿದರಿಂದ ಬೇಸಿಗೆಯಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಅನುಕೂಲವಾಗಿದ್ದು, ರೈತರ ಮುಖದಲ್ಲಿ ನಗುಕಾಣಿಸಿಕೊಂಡಿದೆ.

ಬಡವರಿಗೆ ನೆರವು:ಕೂಲಿಗಾಗಿ ಕಡು ಬಡವರು ನಗರ, ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದ ಕೂಲಿ ಕಾರ್ಮಿಕರಿಗೆ ನರೇಗಾ ಸ್ಥಳೀಯವಾಗಿ ಗ್ರಾಪಂ ವತಿಯಿಂದ ಒಬ್ಬರಿಗೆ ನೂರು ದಿನ ಕೂಲಿ ನೀಡುತ್ತಿದ್ದು, ಪ್ರತಿ ಕೂಲಿ ಕಾರ್ಮಿಕರಿಗೆ ಒಂದು ದಿನಕ್ಕೆ 318 ರು. ನೀಡುತ್ತಿದೆ. ಇದ್ದರಿಂದ ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ.

ಗಾಂಧಿ ಪುರಸ್ಕಾರ ನೀಡಲು ಮಾನದಂಡವೇನು ?ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಭಾಜನರಾಗಬೇಕಾದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಿರಬೇಕು, ಸಕಾಲದಲ್ಲಿ ಕಸವಿಲೇವಾರಿ, ಪ್ರತಿಮನೆಯಲ್ಲೋ ಶೌಚಗೃಹ ನಿರ್ಮಿಸಿಕೊಂಡಿರಬೇಕು, ಮೂಲಭೂತ ಸೌಕರ್ಯಗಳು ಪ್ರತಿಯೊಂದು ಕುಟುಂಬಗಳಿಗೆ ತಲುಪಿಸಿರಬೇಕು, ಕಂದಾಯ ಶೇ. 100 ರಷ್ಟು ಪಾವತಿಯಾಗಿರಬೇಕು, ಸರ್ಕಾರದಿಂದ ಬರುವ ಎಲ್ಲ ಅನುದಾನಗಳು ಸಂಪೂರ್ಣ ಬಳಕೆಯಾಗಿರಬೇಕು. ಬಡವರಿಗೆ ತಲುಪಬೇಕಾದ ಆಶ್ರಯ ಮನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿರಬೇಕು, ಹೀಗೆ ಸುಮಾರು 80 ಅಂಶಗಳ ಯೋಜನೆಗಳು ಸಕಾಲದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾದರೆ ಮಾತ್ರ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ದೊರಕಲು ಸಾಧ್ಯ. ಈ ನಿಟ್ಟಿನಲ್ಲಿ ಅಂಬಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಮತ ಮತ್ತು ಸಿಬ್ಬಂದಿ ಹಾಗೂ ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಮತ್ತು ಸದಸ್ಯರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡುವಲ್ಲಿ ವಿಶೇಷ ಕಾಳಜಿ ಮತ್ತು ಶ್ರಮ ವಹಿಸಿದ್ದರಿಂದ ಅಂಬಳೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ದೊರಕಿದೆ.ಪ್ರಶಸ್ತಿ ಸ್ವೀಕಾರ:

ಈಗಾಗಲೆ 2023ರ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಗಾಂಧಿ ಜಯಂತಿ ದಿವಸ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಗ್ರಾಮೀಣ ಸಚಿವ ಪ್ರಿಯಾಂಕ ಖರ್ಗೆಯಿಂದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಜೊತೆಯಲ್ಲಿ 5 ಲಕ್ಷ ರು. ಚೆಕ್‌ಅನ್ನು ಅಂಬಳೆ ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಮತ್ತು ಗ್ರಾಪಂ ಪಿಡಿಒ ಮಮತ ಪ್ರಶಸ್ತಿ ಸ್ವೀಕರಿಸಿದ್ದಾರೆ.ಅಂಬಳೆ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ನಮ್ಮ ಪಂಚಾಯಿತಿಗೆ ಸಿಗಬೇಕಾದರೆ ಜಿಪಂ ಮತ್ತು ತಾಪಂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಸಹಕಾರ ನೀಡಿದ್ದಾರೆ. ಅದೇ ರೀತಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗ, ತಾಂತ್ರಿಕ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಮತ್ತು ಗ್ರಾಮಸ್ಥರ ಸಹಕಾರದಿಂದ ಪ್ರಶಸ್ತಿ ದೂರಕಿದೆ. ಎಲ್ಲರಿಗೂ ಅಬಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಗೆ ಶ್ರಮಿಸುತ್ತೇನೆ,

ಮಮತ ಪಿಡಿಒ. ಅಂಬಳೆ ಗ್ರಾಪಂ.ಅಂಬಳೆ ಗ್ರಾಪಂಗೆ ಗಾಂಧಿ ಪುರಸ್ಕಾರ ದೊರಕಿದ್ದರಿಂದ ಹೆಚ್ಚಿನ ಅಭಿವೃದ್ಧಿಗೆ ಪ್ರೇರಣೆಯಾಗಿದೆ. ನಿರಂತರವಾಗಿ ಸರ್ಕಾರ ನೀಡುವ ಅನುದಾನ ಮತ್ತು ಮಾರ್ಗದರ್ಶನಗಳನ್ನು ಪಾಲನೆ ಮಾಡುವ ಮೂಲಕ ನಮ್ಮ ಗ್ರಾಪಂ ಅನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು.

ನಂಜುಂಡಸ್ವಾಮಿ, ಅಧ್ಯಕ್ಷ, ಅಂಬಳೆ ಗ್ರಾಪಂಗಾಂಧಿ ಪುರಸ್ಕಾರದಿಂದ ಬಂದ 5 ಲಕ್ಷ ರು. ಅನುದಾನವನ್ನು ಗ್ರಾಪಂ ಅಭಿವೃದ್ಧಿಗೆ ಬಳಸಿಕೊಳ್ಳುವುದರ ಮೂಲಕ ಗ್ರಾಮಕ್ಕೆ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಗ್ರಾಮ ಪಂಚಾಯಿತಿ ಆಡಳಿತ ವರ್ಗಕ್ಕೆ ಸೂಚನೆ ನೀಡಿದ್ದೇನೆ.

ಶ್ರೀನಿವಾಸ್, ಇಒ ತಾಪಂ, ಯಳಂದೂರು.ಯಳಂದೂರು ತಾಲೂಕಿನಲ್ಲಿ ಅಂಬಳೆ ಗ್ರಾಪಂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಗಾಂಧಿಗ್ರಾಮ ಪುರಸ್ಕಾರ ಸಿಕ್ಕದ ಬಳಿಕ ಗ್ರಾಪಂನ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರಿಗೆ ಹೆಚ್ಚಿನ ಪ್ರೊತ್ಸಾಹ ಸಿಕ್ಕಿದಂತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾದರಿಯಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮುಂದಾಗಲಿ. ಎ.ಆರ್. ಕೃಷ್ಣಮೂರ್ತಿ ಶಾಸಕರು.