ಮಧ್ಯ, ಜೂಜಾಟ ಮುಕ್ತ ಬಿನ್ನಾಳಕ್ಕೆ ಗಾಂಧಿ ಬಳಗದ ಹೆಜ್ಜೆ

| Published : Oct 03 2025, 01:07 AM IST

ಸಾರಾಂಶ

ಸರಳ ಜೀವನವೇ ಗಾಂಧೀಜಿಯ ಧ್ಯೇಯ. ಪರಿಸರ ಶುದ್ಧವಾಗಿಟ್ಟುಕೊಳ್ಳುವ ನೀತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಕುಕನೂರು: ತಾಲೂಕಿನ ಮದ್ಯ ಮಾರಾಟ ಹಾಗೂ ಜೂಜಾಟ ನಿಷೇಧದ ಮಹತ್ವದ ನಿರ್ಣಯ ತೆಗೆದುಕೊಂಡ ಬಿನ್ನಾಳ ಗ್ರಾಮಕ್ಕೆ ಕೊಪ್ಪಳದಿಂದ ಗಾಂಧಿ ಬಳಗ ಗುರುವಾರ ಪಾದಯಾತ್ರೆ ಮೂಲಕ ಆಗಮಿಸಿತು.

ಬರಡು ಭೂಮಿಗೆ ಮರಳು ತುಂಬಿ ಉತ್ತಮೋತ್ತಮ ಬೆಳೆ ತೆಗೆಯುವ ಬಿನ್ನಾಳ ಗ್ರಾಮ ಬಸವೇಶ್ವರ ಸುಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದ್ದು, ಕಳೆದ ಮೊಹರಂ ವೇಳೆ ಗ್ರಾಮಸ್ಥರು ಮಧ್ಯ ಮುಕ್ತ, ಜೂಜಾಟ ಮುಕ್ತ ಗ್ರಾಮವೆಂದು ಘೋಷಿಸಿದ್ದರು. ಬಿನ್ನಾಳ ಗ್ರಾಮಕ್ಕೆ ಆಗಮಿಸಿದ ಗಾಂಧಿ ಬಳಗದ ಸುಮಾರು 70ಕ್ಕೂ ಹೆಚ್ಚು ಸದಸ್ಯರನ್ನು ಗ್ರಾಮಸ್ಥರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಕೊಪ್ಪಳದಿಂದ ನಸುಕಿನ ಜಾವ ಹೊರಟು ಭಟಪನಹಳ್ಳಿಯಿಂದ ಚಿಕೇನಕೊಪ್ಪ ಮೂಲಕ ಪಾದಯಾತ್ರಿಗಳು ಗ್ರಾಮ ತಲುಪುತ್ತಿದ್ದಂತೆ ಪುಷ್ಪವೃಷ್ಟಿ ಮಾಡಿ ಸಂಗೀತ ವಾದ್ಯಗಳೊಂದಿಗೆ ಊರಿನ ಜನರು ಖುಷಿಯಿಂದ ಬರಮಾಡಿಕೊಂಡರು. ಗ್ರಾಮದ ಬೀದಿಗಳ ಮೂಲಕ ಯಾತ್ರೆಯು ದೇವಸ್ಥಾನ ತಲುಪಿತು. ಕೊಪ್ಪಳ ಅಶೋಕ ವೃತ್ತದಲ್ಲಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಪಾದಯಾತ್ರೆಗೆ ಚಾಲನೆ ನೀಡಿದರು.

ಆಶೀರ್ವಚನ ನೀಡಿದ ಕಪ್ಪತ್ತಗುಡ್ಡದ ನಂದಿವೇರಿ ಮಠದ ಶ್ರೀಶಿವಕುಮಾರ ಸ್ವಾಮೀಜಿ ಮಾತನಾಡಿ, ಸರಳ ಜೀವನವೇ ಗಾಂಧೀಜಿಯ ಧ್ಯೇಯ. ಪರಿಸರ ಶುದ್ಧವಾಗಿಟ್ಟುಕೊಳ್ಳುವ ನೀತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸುತ್ತಮುತ್ತಲಿನ ಪರಿಸರ ಉತ್ತಮವಾಗಿದ್ದರೆ ಬದುಕು ಸುಂದರವಾಗಿರುತ್ತದೆ. ಇಂಥ ಬದುಕಿಗೆ ಬಿನ್ನಾಳ ಗ್ರಾಮಸ್ಥರು ಮುಂದಾಗಿದ್ದು, ಇದು ಉಳಿದ ಹಳ್ಳಿಗಳಿಗೂ ವಿಸ್ತರಿಸಬೇಕು ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಗಾಂಧೀಜಿಯ ಆದರ್ಶ ಬಿನ್ನಾಳ ಜನರು ಪಾಲಿಸಲು ನಿರ್ಧರಿಸಿದ್ದು ಸಂತಸದ ಸಂಗತಿ. ಈ ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಒದಗಿಸಲಾಗುವುದು ಎಂದರು.

ದೂರವಾಣಿ ಮೂಲಕ ಗ್ರಾಮಸ್ಥರನ್ನು ಉದ್ದೇಶಿಸಿ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಮದ್ಯ ಮಾರಾಟ ಹಾಗೂ ಜೂಜಾಟ ನಿಷೇಧಿಸುವ ಮೂಲಕ ಬಿನ್ನಾಳ ಗ್ರಾಮ ಮಾದರಿಯಾಗಿದೆ. ಮುಂದಿನ ಪೀಳಿಗೆಯ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಈ ತೆರನಾದ ನಿರ್ಧಾರ ತೆಗೆದುಕೊಂಡ ಗ್ರಾಮದ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.

ಪ್ರಾಸ್ತಾವಿಕ ಮಾತನಾಡಿದ ಪತ್ರಕರ್ತ ಆನಂದತೀರ್ಥ ಪ್ಯಾಟಿ ಮಾತನಾಡಿದರು. ಬಿನ್ನಾಳ ಗ್ರಾಮದ ಇತಿಹಾಸ ಕುರಿತು ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್ ಮಾತನಾಡಿದರು. ಗವಿಮಠ ಶ್ರೀಗಳು ಹಾಗೂ ಶಾಸಕ ಬಸವರಾಜ ರಾಯರಡ್ಡಿ ಸಂದೇಶಗಳನ್ನು ಬಸವರಾಜ ಸವಡಿ ಓದಿದರು.

ತಂಗಡಗಿ ಶ್ರೀಹಡಪದ ಅಪ್ಪಣ್ಣ ಪೀಠದ ಸ್ವಾಮೀಜಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ರಾಜ್ಯ ಸರ್ಕಾರಿ ನೌಕಕರ ಸಂಘದ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ, ಗಾಂಧಿ ಬಳಗದ ಸದಸ್ಯ ಬಸವರಾಜ ಸವಡಿ, ಪ್ರಮೋದ ಕುಲಕರ್ಣಿ, ಶರಣಪ್ಪ ಬಾಚಲಾಪುರ ಇತರರು ಇದ್ದರು.

ಪಂಡಿತ್ ಮಾರುತಿ ನಾವಲಗಿ ಅವರಿಂದ ಶಹನಾಯ್ ವಾದನ ನಡೆಯಿತು. ಶಂಕರ ಬಿನ್ನಾಳ ಹಾರ್ಮೋನಿಯಂ, ಪುಟ್ಟರಾಜ ಬಿನ್ನಾಳ ಕೀಪ್ಯಾಡ್ ಹಾಗೂ ಕುಮಾರ್ ಬಿನ್ನಾಳ ತಬಲಾ ಸಾಥ್ ನೀಡಿದರು. ಜತೆಯಲ್ಲೇ ಸಮನ್ವಿ, ಪ್ರತಿಭಾ, ಪೂಜಾ, ತೇಜಸ್ವಿನಿ, ಮಹಾಂತೇಶ ಹಾಗೂ ಯೋಗಣ್ಣ ಅವರಿಂದ ಗಾಂಧಿ ಭಜನೆ ಜರುಗಿತು.

ಅಂಚೆ ಕಾರ್ಡಿನಲ್ಲಿ ಗಾಂಧಿ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಪ್ರದಾನ ಮಾಡಲಾಯಿತು.

ಜೀವನಸಾಬ್‌ ಬಿನ್ನಾಳ ಸ್ವಾಗತಿಸಿದರು. ಪ್ರಾಣೇಶ ಪೂಜಾರ ನಿರೂಪಿಸಿದರು. ನಾಗರಾಜ ನಾಯಕ ಡೊಳ್ಳಿನ ಪ್ರತಿಜ್ಞಾ ವಿಧಿ ಬೋಧಿಸಿದರು.

ಚಿಕೇನಕೊಪ್ಪದಲ್ಲಿ ಸ್ವಾಗತ:ಇದಕ್ಕೂ ಮುನ್ನ ಪಾದಯಾತ್ರೆಯನ್ನು ಚಿಕೇನಕೊಪ್ಪದಲ್ಲಿ ಗ್ರಾಮಸ್ಥರು ಗೌರವದಿಂದ ಬರಮಾಡಿಕೊಂಡರು.

ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಮೌನತಪಸ್ವಿ ಚನ್ನವೀರ ಶರಣರು ಹಾಗೂ ಹಿರಿಯ ಸಾಹಿತಿ, ವಿದ್ವಾಂಸ ಡಾ. ದೇವೇಂದ್ರಕುಮಾರ ಹಕಾರಿ ಅವರಂತಹ ದಿಗ್ಗಜರನ್ನು ಕೊಟ್ಟ ಗ್ರಾಮವು ಸ್ವಾತಂತ್ರ್ಯ ಹೋರಾಟ ಹಾಗೂ ಹೈದರಾಬಾದ್ ವಿಮೋಚನೆಯಲ್ಲಿಯೂ ಭಾಗವಹಿಸಿದೆ ಎಂದು ಬಣ್ಣಿಸಿದರು.

ಬಿನ್ನಾಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಶಾರವ್ವ ಶಿವಪ್ಪ ಕಂಬಳಿ ಮನೆಗೆ ತೆರಳಿದ ಪಾದಯಾತ್ರಿಗಳು ಅವರನ್ನು ಸತ್ಕರಿಸಿದರು. ಬಿನ್ನಾಳ ಗ್ರಾಮಸ್ಥರಿದ್ದರು.