ಸಾರಾಂಶ
ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ತಿಳಿಸಿದ್ದರು. ಅವರು ಹೇಳಿದಂತೆ ಮಾಡಿದ್ದರೆ ಇಂದು ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿಯೇ ಇರುತ್ತಿರಲಿಲ್ಲ. ಈಗಲೂ ಪಕ್ಷವು ಎ ದಿಂದ ಝಡ್ ವರೆಗೆ ಮುಗಿದು ಹೋದ ಕಥೆ. ಇದು ಓರಿಜಿನಲ್ ಕಾಂಗ್ರೆಸ್ ಅಲ್ಲ, ಡುಪ್ಲಿಕೇಟ್.
ಧಾರವಾಡ:
ಬೆಳಗಾವಿಯಲ್ಲಿ ಕಾಂಗ್ರೆಸ್ ಮಾಡುತ್ತಿರುವ "ಗಾಂಧಿ ಭಾರತ ಸಮಾವೇಶ " ನಕಲಿ ಕಾಂಗ್ರೆಸ್ಸಿನ, ನಕಲಿ ಗಾಂಧಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಲು ತಿಳಿಸಿದ್ದರು. ಅವರು ಹೇಳಿದಂತೆ ಮಾಡಿದ್ದರೆ ಇಂದು ಕಾಂಗ್ರೆಸ್ ಅಸ್ತಿತ್ವದಲ್ಲಿಯೇ ಇರುತ್ತಿರಲಿಲ್ಲ. ಈಗಲೂ ಪಕ್ಷವು ಎ ದಿಂದ ಝಡ್ ವರೆಗೆ ಮುಗಿದು ಹೋದ ಕಥೆ. ಇದು ಒರಿಜಿನಲ್ ಕಾಂಗ್ರೆಸ್ ಅಲ್ಲ, ಡುಪ್ಲಿಕೇಟ್. ಯಾವುದೋ ಎರಡು ರಾಜ್ಯದಲ್ಲಿ ಟುಕು ಟುಕು ಜೀವ ಇಟ್ಕೊಂಡಿದ್ದು, ಡುಪ್ಲಿಕೇಟ್ ಕಾಂಗ್ರೆಸ್ಸಿಗೆ ನಕಲಿ ಗಾಂಧಿಗಳನ್ನು ಕೊಟ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗಾಂಧಿ ಭಾರತದ ಸಮಾವೇಶದ ಮೂಲಕ ಸರ್ಕಾರದ ದುಡ್ಡನ್ನು ಕಾಂಗ್ರೆಸ್ ಪೋಲು ಮಾಡುತ್ತಿದೆ. ನಮ್ಮಲ್ಲಿ ಇದಕ್ಕೆ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುತ್ತಾರೆ. ಸರ್ಕಾರದ ದುಡ್ಡಲ್ಲಿ ಜಾತ್ರೆ ಮಾಡುತ್ತಿದ್ದಾರೆ ಕಾಂಗ್ರೆಸಿನವರು. ಮೊದಲು ಈ ಕಾರ್ಯಕ್ರಮ ಮಾಡುವಾಗ ದುರ್ದೈವದಿಂದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನರಾದರು. ಹೀಗಾಗಿ ಮುಂದಕ್ಕೆ ಹಾಕಿದ್ದು, ಮತ್ತೆ ಅಷ್ಟೇ ದುಡ್ಡನ್ನು ಖರ್ಚು ಮಾಡಿ ಕಾರ್ಯಕ್ರಮ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅನುದಾನ ಇಲ್ಲದೇ ಹಲವು ಸಾಮಾಜಿಕ ಕಾರ್ಯಕ್ರಮಗಳು ನಿಂತಿವೆ. ಇಂತಹ ಸ್ಥಿತಿಯಲ್ಲಿ ಹಣ ಪೋಲು ಮಾಡುತ್ತಿದ್ದಾರೆ ಎಂದು ಜೋಶಿ ಗಾಂಧಿ ಭಾರತದ ಬಗ್ಗೆ ವಿರೋಧ ವ್ಯಕ್ತಪಡಿಸಿದರು.ಚಿಲ್ಲರೆ ರಾಜಕಾರಣ:
ಕಾಂಗ್ರೆಸ್ ರಾಜ್ಯದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾರಣ ಅವರ ಬಡಿದಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಬಗ್ಗೆ ಮಾತನಾಡಲು ನೈತಿಕತೆ ಅವರಿಗಿಲ್ಲ ಎಂದ ಜೋಶಿ, ಸಚಿವ ಸಂತೋಷ ಲಾಡ್ ಸ್ವಾಮಿತ್ವದ ಬಗ್ಗೆ ಮಾತನಾಡಿದ್ದು, ಸ್ವಾಮಿತ್ವ ಭಾರತ ಸರ್ಕಾರದ ಯೋಜನೆ. ಇದನ್ನು ಆರಂಭ ಮಾಡಿದ್ದು ನಾವು. ಈ ಯೋಜನೆ ಜಾರಿಯಲ್ಲಿ ಕಾಂಗ್ರೆಸಿನವರು ಮೋದಿಯವರ ಫೋಟೋ ಹಾಕಿಲ್ಲ, ಹೆಸರು ಹೇಳಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.