25ರಂದು ಗಾಂಧಿಚರಿತ, ಸ್ವಾಗತಗೀತ ಕೃತಿ ಬಿಡುಗಡೆ

| Published : May 22 2025, 01:37 AM IST

ಸಾರಾಂಶ

ಬಳೂರು ಮನೆತನ- ಹತ್ತೂರು ದಿ।। ಪಂಡಿತ್ ಬಿ.ಎಸ್. ಭರ್ಮೇಗೌಡ ಅವರ ಗಾಂಧಿಚರಿತ ಮತ್ತು ಸ್ವಾಗತಗೀತ ಕಾವ್ಯ ಕೃತಿಯನ್ನು ಪ್ರೊ. ಚನ್ನೇಶ್ ಹೊನ್ನಾಳಿ ಅವರು ಸಂಗ್ರಹಿಸಿ ಸಂಪಾದಿಸಿದ್ದಾರೆ. ಮೇ 25ರಂದು ಬೆಳಗ್ಗೆ 10 ಗಂಟೆಗೆ ಪಂಡಿತ್ ಭರ್ಮೆಗೌಡರ 130ನೇ ಜಯಂತಿ ಹಾಗೂ ಸಮಗ್ರ ಕಾವ್ಯ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಕಾರ್ಯದರ್ಶಿ ಕೆ.ಶೇಖರಪ್ಪ ಹೇಳಿದ್ದಾರೆ.

- ಹತ್ತೂರು ದಿ. ಪಂಡಿತ್ ಭರ್ಮೇಗೌಡರ 130ನೇ ಜಯಂತಿ ಕಾರ್ಯಕ್ರಮ: ಕೆ.ಶೇಖರಪ್ಪ ಮಾಹಿತಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬಳೂರು ಮನೆತನ- ಹತ್ತೂರು ದಿ।। ಪಂಡಿತ್ ಬಿ.ಎಸ್. ಭರ್ಮೇಗೌಡ ಅವರ ಗಾಂಧಿಚರಿತ ಮತ್ತು ಸ್ವಾಗತಗೀತ ಕಾವ್ಯ ಕೃತಿಯನ್ನು ಪ್ರೊ. ಚನ್ನೇಶ್ ಹೊನ್ನಾಳಿ ಅವರು ಸಂಗ್ರಹಿಸಿ ಸಂಪಾದಿಸಿದ್ದಾರೆ. ಮೇ 25ರಂದು ಬೆಳಗ್ಗೆ 10 ಗಂಟೆಗೆ ಪಂಡಿತ್ ಭರ್ಮೆಗೌಡರ 130ನೇ ಜಯಂತಿ ಹಾಗೂ ಸಮಗ್ರ ಕಾವ್ಯ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಕಾರ್ಯದರ್ಶಿ ಕೆ.ಶೇಖರಪ್ಪ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹತ್ತೂರು ಗ್ರಾಮದ ತಿರುಮಲ ಕಲ್ಯಾಣ ಮಂಟಪದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಆಧುನಿಕ ಕನ್ನಡ ಕಾವ್ಯ ಚರಿತ್ರೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಜೀವನ ಮತ್ತು ಹೋರಾಟವನ್ನು ಕುರಿತು ದಿ।। ಪಂಡಿತ್ ಬಿ.ಎಸ್. ಭರ್ಮೇಗೌಡ ಅವರು ಮೊಟ್ಟಮೊದಲ ಬಾರಿಗೆ ಭಾಮಿನಿ ಷಟ್ಪದಿಯಲ್ಲಿ ಖಂಡಕಾವ್ಯವಾಗಿ ರಚಿಸಿದ್ದಾರೆ. ಇದರೆ ಜೊತೆಗೆ ಸುಮಾರು 80 ವಿವಿಧ ರೀತಿಯ ಕಾವ್ಯಗಳನ್ನು ಭಾಮಿನಿ, ಕುಸುಮ, ಮತ್ತು ಖಂಡಭೋಗ, ಷಟ್ಪದಿಗಳಲ್ಲದೇ ವೃತ್ತ, ಕಂದಕಾವ್ಯ ಪ್ರಕಾರಗಳಲ್ಲಿಯೂ ಭರ್ಮೇಗೌಡ ಅವರು ಕಾವ್ಯ ಕೃತಿಗಳು ಲಭ್ಯವಿವೆ. ಇವುಗಳನ್ನೆಲ್ಲ ಪ್ರೊ. ಚನ್ನೇಶ್ ಹೊನ್ನಾಳಿ ಅವರು ಸಂಗ್ರಹಿಸಿ, ಸಂಪಾದಿಸಿರುವ ಕಾವ್ಯ ಕೃತಿ ಮೇ 25ರಂದು ಬಿಡುಗಡೆಗೊಳ್ಳಲಿದೆ ಎಂದರು.

ಪ್ರೊ. ಚನ್ನೇಶ ಹೊನ್ನಾಳಿ ಅವರು ಭರ್ಮೇಗೌಡರ ಸಮಗ್ರ ಕಾವ್ಯ ಕೃತಿಯನ್ನು ಗಾಂಧಿಚರಿತ ಮತ್ತು ಸ್ವಾಗತಗೀತ ಎಂಬ ಶೀರ್ಷಿಕೆಗಳಡಿ ಸಂಪಾದಿಸಿದ್ದಾರೆ. ವಿಷಾದವೆಂದರೆ, ದಿವಂಗತ ಬಿ.ಎಸ್. ಭರ್ಮೇಗೌಡರಿಗೆ ಅಂದು ಸಿಗಬೇಕಾದ ಮನ್ನಣೆ, ಗೌರವಗಳು ಸಿಗಲಿಲ್ಲ. ಮುಖ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಾಧನೆ ಬಗ್ಗೆ ಗಮನಹರಿಸಲೇ ಇಲ್ಲ. ಸರ್ಕಾರದ ಮಟ್ಟದಲ್ಲಾಗಲಿ, ಸ್ಥಳೀಯ ಮಟ್ಟದಲ್ಲಾಗಲಿ ಯಾರೂ ಸಹಿತ ಭರ್ಮೇಗೌಡ ಅವರಂಥ ಪ್ರತಿಭಾವಂತ ಸಾಹಿತ್ಯಕಾರರನ್ನು ಗುರುತಿಸುವ ಪ್ರಯತ್ನ ಮಾಡಲಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಕಾರರಾಗಲಿ, ವಿಮರ್ಶಕರಾಗಲಿ ಇವರ ಸಾಹಿತ್ಯ ಕೃಷಿ ಬಗ್ಗೆ ಇದುವರೆಗೊ ಚಕಾರ ಎತ್ತಿಲ್ಲದಿರುವುದು ದುರಂತ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಂದಿಗುಡಿ ಬೃಹನ್ಮಠದ ಗುರುಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಿವಮೊಗ್ಗ ಶಂಕರಘಟ್ಟದ ಕುವೆಂಪು ವಿ.ವಿ. ಕನ್ನಡ ಭಾರತಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಕುಮಾರ ಚಲ್ಯ ಕೃತಿ ಬಿಡುಗಡೆ ಮಾಡಲಿದ್ದಾರೆ.

ಕೃತಿ ಕುರಿತು ಸಾಗರದ ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಸಿ. ಕುನಗೋಡು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ ಇತರರು ಭಾಗವಹಿಸಲಿದ್ದಾರೆ. ಕೃತಿಯ ಸಂಗ್ರಹಕಾರರು ಮತ್ತು ಸಂಪಾದಕರಾದ ಪ್ರೊ. ಚನ್ನೇಶ್, ಪ್ರಕಾಶಕ ಜಿ.ಬಿ. ಮೋಹನ್ ಕುಮಾರ್, ಎ.ಬಿ. ನೇಮಿಚಂದ್ರ ಇತರರು ಉಪಸ್ಥಿತರಿರುವರು. ಅಧ್ಯಕ್ಷತೆ ಎಚ್.ಕಡದಕಟ್ಟೆಯ ಎಂ.ಬಿ. ತಿಮ್ಮಗೌಡ ವಹಿಸಲಿದ್ದಾರೆ ಎಂದು ಕೆ.ಶೇಖರಪ್ಪ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹತ್ತೂರು ಗ್ರಾಮದ ಹಿರಿಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಉಪಾಧ್ಯಕ್ಷ ಜಯಪ್ಪ ಮತ್ತಿತರರು ಇದ್ದರು.

- - -

(** ಫೋಟೋ ಬರಬಹುದು.)