ಪಶ್ಚಿಮ ಘಟ್ಟಗಳ ಉಳಿವಿಗಾಗಿ ತುರ್ತು ಕ್ರಮ ವಹಿಸಿ

| Published : Aug 22 2024, 12:55 AM IST

ಪಶ್ಚಿಮ ಘಟ್ಟಗಳ ಉಳಿವಿಗಾಗಿ ತುರ್ತು ಕ್ರಮ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕೃತಿಯನ್ನು ಹಾಳು ಮಾಡುವುದೇ ವಿಕೃತಿ. ಪ್ರಕೃತಿಯನ್ನು ಪೊರೆಯುವುದು ನಮ್ಮ ಸಂಸ್ಕೃತಿ,

ಕನ್ನಡಪ್ರಭ ವಾರ್ತೆ ಮೈಸೂರುಪಶ್ಚಿಮ ಘಟ್ಟಗಳ ಉಳಿವಿಗಾಗಿ ರಾಜ್ಯ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಪರಿಸರಕ್ಕಾಗಿ ನಾವು- ಪರಿಸರ ಕಾರ್ಯಕರ್ತರ ಸಂಘಟನೆಯವರು ಮೈಸೂರಿನ ಗಾಂಧಿ ಚೌಕದಲ್ಲಿ ಬುಧವಾರ ಪ್ರತಿಭಟಿಸಿದರು.ಪ್ರಕೃತಿಯನ್ನು ಹಾಳು ಮಾಡುವುದೇ ವಿಕೃತಿ. ಪ್ರಕೃತಿಯನ್ನು ಪೊರೆಯುವುದು ನಮ್ಮ ಸಂಸ್ಕೃತಿ, ಉಳಿಸಿ ಉಳಿಸಿ ಪಶ್ಚಿಮ ಘಟ್ಟ ಉಳಿಸಿ, ಅಳಿದರೆ ಪಶ್ಚಿಮ ಘಟ್ಟಗಳು ಸಂಪತ್ತು ಕಾದಿದೆ ಸಕಲ ಜೀವಿಗಳಿಗೆ ಆಪತ್ತು, ಜೀವನ ನದಿಗಳ ಉಗಮ ಸ್ಥಾನ ಪಶ್ಚಿಮ ಘಟ್ಟ ಪಶ್ಚಿಮ ಘಟ್ಟ ಎಂಬ ಪ್ಲೇಕಾರ್ಡ್ ಗಳನ್ನು ಹಿಡಿದು ಘೋಷಣೆ ಕೂಗಿದರು.ಕೇರಳದ ವಯನಾಡಿನಲ್ಲಿ ನಡೆದ ಭೀಕರ ದುರಂತ ಮುಂದೆ ಆಗದಂತೆ ಸರ್ಕಾರ ಮತ್ತು ಜನರು ಎಚ್ಚೆತ್ತುಕೊಳ್ಳಬೇಕು. ಪಶ್ಚಿಮ ಘಟ್ಟ ಉಳಿವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. 2011ರಲ್ಲಿ ಮಾಧವ ಗಾಡ್ಗೀಳ್ ಸಮಿತಿ ಸಲ್ಲಿಸಿದ ವರದಿಯಂತೆ ಪಶ್ಚಿಮಘಟ್ಟ ಪ್ರಾಧಿಕಾರ ರಚಿಸಬೇಕು ಎಂದು ಅವರು ಒತ್ತಾಯಿಸಿದರು.ಇತ್ತೀಚೆಗೆ ಕೇರಳದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಗುಡ್ಡಗಳು ಕುಸಿದು, ರಾತ್ರಿಯಾಗಿ ಬೆಳಗಾಗುವುದರೊಳಗೆ ಮಕ್ಕಳು ತಾಯಂದಿರು ಸೇರಿದಂತೆ ನೂರಾರು ಜನರ ಪ್ರಾಣ, ಅಪಾರ ಪ್ರಮಾಣದ ಆಸ್ತಿ- ಪಾಸ್ತಿ ಕೊಚ್ಚಿ ಹೋಯಿತು. ಉತ್ತರ ಭಾರತದ ಹಿಮಾಚಲಪ್ರದೇಶ ಮತ್ತು ಉತ್ತರಖಂಡದಲ್ಲೂ ಹಲವು ಭೂ ಕುಸಿತಗಳಾಗಿವೆ. ಈ ಅನಾಹುತಗಳಿಗೆ ಪ್ರಕೃತಿ ಮೇಲೆ ಮಾನವನ ಅತಿಯಾದ ದಬ್ಬಾಳಿಕೆ ಕಾರಣವಾಗಿದೆ ಎಂದು ತಿಳಿಸಿದರು.ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್, ಹೋಂ ಸ್ಟೇ, ಅಕ್ರಮವಾಗಿ ಹೋಟೆಲ್ ಗಳ ನಿರ್ಮಾಣ, ರಸ್ತೆ ವಿಸ್ತರಣೆಗೆ ಮರಗಳ ಕಡಿತ, ನೀರಿನ ಸಹಜವಾದ ಹರಿಯುವಿಕೆಗೆ ತಡೆ ಸೇರಿದಂತೆ ಅನೇಕ ಕಾರಣಗಳಿಂದ ಮಣ್ಣಿನ ಸವಕಳಿಗೂ ಕಾರಣವಾಗುತ್ತಿದೆ. ಸರ್ಕಾರ ಪರಿಸರಕ್ಕೆ ಹಾನಿ ಉಂಟು ಮಾಡುವ ಇಂತಹ ಚಟುವಟಿಕೆಗಳನ್ನು ತಡೆಗಟ್ಟಲು ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡದೇ ದುರಂತ ಘಟಿಸಿದ ನಂತರ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ವರದಿ ಜಾರಿಗೊಳಿಸಿಪಶ್ಚಿಮಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವವನ್ನು ಅರಿತು ಪ್ರೊ. ಮಾಧವ ಗಾಡ್ಗೀಳ್ ಸಮಿತಿ 2011 ರಲ್ಲಿ ಸಲ್ಲಿಸಿದ ವರದಿಯಲ್ಲಿ ಅಲ್ಲಿಗೆ ಹಾನಿ ಮಾಡುವಂತ ಯಾವುದೇ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕೆಂದು ಶಿಫಾರಸು ಮಾಡಿದ್ದರು. ಈ ವರದಿಯ ಪ್ರಕಾರ ಪ್ರಮುಖವಾಗಿ ಪಶ್ಚಿಮಘಟ್ಟ ಪ್ರಾಧಿಕಾರ ರಚಿಸಬೇಕು. ಸೂಕ್ಷ್ಮ್ಮ ಪರಿಸರ ವಲಯಗಳನ್ನು ಘೋಷಿಸಿ, ಈ ವಲಯಗಳಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯನ್ನು ನಿಷೇಧಿಸಬೇಕು ಹಾಗೂ ಕಟ್ಟಡ ನಿರ್ಮಾಣ, ಮೂಲಸೌಕರ್ಯ ನಿರ್ಮಾಣವನ್ನು ನಿರ್ಬಂಧಿಸಬೇಕೆಂದು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ ಈ ವರದಿಯನ್ನು ಜಾರಿಗೊಳಿಸಿ ಎಂದು ಅವರು ಆಗ್ರಹಿಸಿದರು.ಪರಿಸರ ಕಾರ್ಯಕರ್ತರಾದ ಎಸ್.ಜಿ. ಒಂಬತ್ಕೆರೆ, ಪ್ರೊ. ಕಾಳೇಗೌಡ ನಾಗವಾರ, ಪ್ರೊ. ಕಾಳಚೆನ್ನೇಗೌಡ, ಹೊರೆಯಾಲ ದೊರೆಸ್ವಾಮಿ, ಭಾನು ಮೋಹನ್, ಲೀಲಾ ಶಿವಕುಮಾರ್, ಪರಶುರಾಮೇಗೌಡ, ಭಾಗ್ಯ ಶಂಕರ್, ಗಂಟಯ್ಯ, ಸುಮಲತಾ, ಶೈಲಜೇಶ್ ಮೊದಲಾದವರು ಇದ್ದರು.