ರಾಜ್ಯ ಸರ್ಕಾರ ನೀಡುವ ಗಾಂಧಿ ಗ್ರಾಮ ಪ್ರಶಸ್ತಿಗೆ ತಾಲೂಕಿನ ಮೂಕೀಹಾಳ ಗ್ರಾಮ ಪಂಚಾಯಿತಿ ಭಾಜನವಾಗಿದೆ. ಸೋಮವಾರ ಬೆಂಗಳೂರಿನ ವಿಧಾನಸೌಧದಲ್ಲಿ ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗ್ರಾಪಂ ಅಧ್ಯಕ್ಷ ರೇವಣೆಪ್ಪ ಮೇಟಿ ಮತ್ತು ಪಿಡಿಒ ಶ್ರೀದೇವಿ ಗುಂಡಾಪೂರಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.

ಪ್ರವೀಣ್ ಘೋರ್ಪಡೆ

ಕನ್ನಡಪ್ರಭ ವಾರ್ತೆ ತಾಳಿಕೋಟೆ

ರಾಜ್ಯ ಸರ್ಕಾರ ನೀಡುವ ಗಾಂಧಿ ಗ್ರಾಮ ಪ್ರಶಸ್ತಿಗೆ ತಾಲೂಕಿನ ಮೂಕೀಹಾಳ ಗ್ರಾಮ ಪಂಚಾಯಿತಿ ಭಾಜನವಾಗಿದೆ. ಸೋಮವಾರ ಬೆಂಗಳೂರಿನ ವಿಧಾನಸೌಧದಲ್ಲಿ ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗ್ರಾಪಂ ಅಧ್ಯಕ್ಷ ರೇವಣೆಪ್ಪ ಮೇಟಿ ಮತ್ತು ಪಿಡಿಒ ಶ್ರೀದೇವಿ ಗುಂಡಾಪೂರಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.

ಮೂಕೀಹಾಳ ಗ್ರಾಪಂ ವತಿಯಿಂದ ಹರನಾಳ, ಕಲ್ಲದೇವನಳ್ಳಿ, ಹಗರಗುಂಡ, ನಾಗೂರ ಹಡಗಿನಾಳ, ಶಿವಪುರ ಗ್ರಾಮದಲ್ಲಿ ನೈರ್ಮಲೀಕರಣಕ್ಕೆ ಆದ್ಯತೆ ನೀಡುತ್ತಾ ಬರಲಾಗಿದೆ. ಅಲ್ಲದೇ ೭ ಗ್ರಾಮಗಳಲ್ಲಿಯೂ ಮೂಲಸೌಕರ್ಯಗೆ ಸಂಬಂಧಿತ ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಬಾಪೂಜಿ ಸೇವಾ ಕೇಂದ್ರದ ಮೂಲಕ ಆನ್‌ಲೈನ್ ಸೇವೆ ನೀಡಲಾಗುತ್ತಿದೆ. ತೆರಿಗೆ ವಸೂಲಾತಿಯಲ್ಲಿ ಶೇ.೧೦೦ರಷ್ಟು ಪ್ರಗತಿ ಸಾಧಿಸಿದ ಗ್ರಾಪಂ ಎಂಬ ಹೆಗ್ಗಳಿಕೆಗೆ ಮೂಕೀಹಾಳ ಪಾತ್ರವಾಗಿದೆ. ಅಭಿವೃದ್ಧಿ, ಸ್ವಚ್ಛತೆ, ಜನರ ಸಹಭಾಗಿತ್ವ ಹಾಗೂ ಪಾರದರ್ಶಕ ಆಡಳಿತ ಸೇರಿ ಇತರೆ ಮಾನದಂಡಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಪ್ರಶಸ್ತಿ ಲಭಿಸಿರುವುದಕ್ಕೆ ಗ್ರಾಪಂ ವ್ಯಾಪ್ತಿಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ಮೂಕೀಹಾಳ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ಸಂತಸ ತಂದಿದೆ. ಅಲ್ಲದೇ ಗ್ರಾಮದಲ್ಲಿ ಇನ್ನಷ್ಟು ಕೆಲಸ ಕಾರ್ಯ ಮಾಡಲು ಪ್ರೋತ್ಸಾಹ ನೀಡಿದಂತಾಗಿದೆ. ಗ್ರಾಪಂನ ಎಲ್ಲ ಸದಸ್ಯರ ಹಾಗೂ ಗ್ರಾಮದ ಮುಖಂಡರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪೂರಕ ಕೆಲಸಗಳನ್ನು ಮಾಡುವೆ ಎಂದು ಗ್ರಾಂಪಂ ಅಧ್ಯಕ್ಷ ರೇವಣೆಪ್ಪ ಮೇಟಿ ಹೇಳಿದರು.ಮೂಕೀಹಾಳ ಗ್ರಾಪಂಗೆ ಗಾಂಧಿ ಗ್ರಾಮ ಪ್ರಶಸ್ತಿ ದೊರಕಿರುವುದು ಸಂತೋಷವಾಗಿದೆ. ಇದು ಗ್ರಾಪಂ ಅಧ್ಯಕ್ಷರು- ಉಪಾಧ್ಯಕ್ಷರು ಹಾಗೂ ಸದಸ್ಯರು ಅಲ್ಲದೇ ಗ್ರಾಮದ ಜನರ ಸಹಕಾರ ಮತ್ತು ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಈ ಪ್ರಶಸ್ತಿಯು ನಮ್ಮೆಲ್ಲರ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಮುಂಬರುವ ದಿನಗಳಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಇನ್ನಷ್ಟು ಕ್ರೀಯಾಶೀಲವಾಗಿ ಕೆಲಸ ಕಾರ್ಯ ಮಾಡುತ್ತೇನೆ ಎಂದು ಮೂಕೀಹಾಳ ಗ್ರಾಂಪಂ ಪಿಡಿಒ ಶ್ರೀದೇವಿ ಗುಂಡಾಪೂರ ಹೇಳಿದರು.